2023ಕ್ಕೆ ಗುಡ್‌ಬೈ ಹೇಳಿ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಡಿಜೆ ಮ್ಯೂಸಿಕ್, ಪಾರ್ಟಿ ಅಬ್ಬರ, ಡ್ಯಾನ್ಸ್, ಪಟಾಕಿಗಳ ಜೊತೆ ಭಾರತೀಯರು ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಬೆಂಗಳೂರು ಜನ ಪಾರ್ಟಿಯಲ್ಲಿ ಮಿಂದಿದೆದ್ದಿದ್ದಾರೆ.
ನವದೆಹಲಿ(ಡಿ.31) ಹೊಸ ವರ್ಷ ಹೊಸ ಹರುಷವ ತರಲಿ. 2024ರ ಹೊಸ ವರ್ಷವನ್ನು ಭಾರತ ಅದ್ಧೂರಿಯಾಗಿ ಸ್ವಾಗತಿಸಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಒಂದೆಡೆ ಪೂಜೆ ಮೂಲಕ ಶಾಸ್ತ್ರೋಕ್ತವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಮತ್ತೊಂದೆಡೆ ಪಾರ್ಟಿ, ಡ್ಯಾನ್ಸ್, ಪಟಾಕಿ ಸಂಭ್ರಮದ ಮೂಲಕ ಅದ್ಧೂರಿ ಹೊಸ ವರ್ಷಾಚರಣೆಯೂ ಮನೆ ಮಾಡಿತ್ತು. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್‌ಗಳಲ್ಲಿ ಹೊಸ ವರ್ಷದ ಪಾರ್ಟಿ ರಂಗೇರಿತ್ತು.
ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ಪಾರ್ಟಿ, ಡಿಜೆ ಮ್ಯೂಸಿಕ್, ಡ್ಯಾನ್ಸ್, ಸಂಗೀತ ರಸ ಸಂಜೆ, ಹಾಸ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಅಂದರೆ ಶ್ರೀಗನರದ ಲಾಲ್ ಚೌಕ್‌ನಲ್ಲಿ ಅದ್ಧೂರಿಯಾಗಿ ಹೊಸ ವರ್ಷ ಆಚರಿಸಲಾಗಿದೆ. ಜನರು ಲಾಲ್ ಚೌಕ್ ಬಳಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದಾ ಭಯೋತ್ಪಾದಕತೆ, ಗುಂಡಿನ ದಾಳಿ, ಕಲ್ಲು ತೂರಾಟದಿಂದಲೇ ಸದ್ದು ಮಾಡುತ್ತಿದ್ದ ಕಾಶ್ಮೀರದಲ್ಲೂ ಡಿಜೆ ಮ್ಯೂಸಿಕ್, ಡ್ಯಾನ್ಸ್ ಮೇಳೈಸಿದೆ.
ಪ್ರವಾಸಿಗರಿಂದ ತುಂಬಿ ತುಳುತ್ತಿರುವ ಹಿಮಾಚಲ ಪ್ರದೇಶದಲ್ಲಿ ಎಲ್ಲೆಡೆ ಹೊಸ ವರ್ಷಚಾರಣೆ ಸಂಭ್ರಮ ಕಂಡುಬಂದಿತ್ತು. ಶಿಮ್ಲಾದ ಪ್ರಮುಖ ರಸ್ತೆಯಲ್ಲಿ ಆಯೋಜಿಸಿದ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪಾಲ್ಗೊಂಡಿದ್ದರು. ಮುಂಬೈ ಸಂಪೂರ್ಣವಾಗಿ ಪಾರ್ಟಿಯಲ್ಲಿ ಮಿಂದೆದ್ದಿತ್ತು.
ದೆಹಲಿ, ಕೋಲ್ಕತಾ, ಭೋಪಾಲ್, ಹೈದರಾಬಾದ್, ಚೆನ್ನೈ, ತಿರುವನಂತಪುರಂ ಸೇರಿದಂತೆ ದೇಶದ ಪ್ರಮುಖ ನಗರ ಪಟ್ಟಣಗಳಲ್ಲಿ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು. ಇನ್ನು ಬೆಂಗಳೂರಿಗರು ಅದ್ಧೂರಿಯಾಗಿ ಹೊಸ ವರ್ಷ ಆಚರಿಸಿದ್ದಾರೆ. ಬೆಂಗಳೂರಿನ ಹಲವೆಡೆ ಸಂಗೀತ ಕಾರ್ಯಕ್ರಮ, ಅದ್ಧೂರಿ ಡಿಜೆ, ಡ್ಯಾನ್ಸ್ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಸ ವರ್ಷ ಆಚರಣೆ ಪ್ರಯುಕ್ತ ಬೆಂಗಳೂರಿನಾದ್ಯಂತ ಪೊಲೀಸ್ ಕಟ್ಟೆಚ್ಚರವಹಿಸಿತ್ತು.
ಬ್ರೀಗೇಡ್ ರಸ್ತೆ, ಎಂಜಿ ರಸ್ತೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೆಟಲ್ ಡಿಟೆಕ್ಟರ್ ಮೂಲಕ ಪ್ರತಿಯೊಬ್ಬರನ್ನು ಪರಿಶೀಸಿಲಾಗಿತ್ತು. ಬ್ಯಾಗ್‌ಗಳ ಪರಿಶೀಲನೆ ನಡೆಸಿದ ಬಳಿಕ ಬ್ರಿಗೇಡ್ ರಸ್ತೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ರಸ್ತೆಗಳಲ್ಲಿ ಸಂಜೆ ಬಳಿ ವಾಹನ ಪ್ರವೇಶ ನಿರ್ಬಂಧಿಸಲಾಗಿತ್ತು. ಇನ್ನು ರಾತ್ರಿ 10 ಗಂಟೆ ಆಗುತ್ತಿದ್ದಂತೆ ಬೆಂಗಳೂರಿನ ಎಲ್ಲಾ ಫೈಓವರ್‌ಗಳನ್ನು ಬಂದ್ ಮಾಡಲಾಗಿತ್ತು.
ಬೆಂಗಳೂರು ಮಾತ್ರವಲ್ಲ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ತುಮಕೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.
