ಮೈತ್ರಿ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‌ಗೆ ನಷ್ಟ, 1947ರ ಬಳಿಕ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧೆ ಸಾಧ್ಯತೆ!
ಇಂಡಿಯಾ ಮೈತ್ರಿ ಒಕ್ಕೂಟದ ಇದೀಗ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಮಾತುಕತೆ ನಡೆಸುತ್ತಿದೆ. ಆದರೆ ಈ ಸೀಟು ಹಂಚಿಕೆ ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಹೆಚ್ಚು ನಷ್ಟವಾಗುವಂತೆ ಕಾಣುತ್ತಿದೆ. ಭಾರತದ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳು ಕಂಡುಬರುತ್ತಿದೆ.
ನವದೆಹಲಿ(ಜ.13) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಮೈತ್ರಿ ಕೂಟ ರಚನೆ ಮಾಡಿರುವ ವಿಪಕ್ಷಗಳು ಇದೀಗ ಸತತ ಸಭೆ ನಡೆಸಿ ಕೆಲ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲಾಗಿದೆ. ಇತರ ಕೆಲ ನಾಯಕರಿಗೂ ಜವಾಬ್ದಾರಿಗಳನ್ನು ಹಂಚಲಾಗಿದೆ. ಇದರ ಜೊತೆಗೆ ಆಯಾ ರಾಜ್ಯದಲ್ಲಿನ ಸೀಟು ಹಂಚಿಕೆಯನ್ನು ಚರ್ಚಿಸಲಾಗಿದೆ. ವರದಿಗಳ ಪ್ರಕಾರ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತಿದೆ. 1947ರ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ವರದಿಗಳ ಪ್ರಕಾರ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ 255 ಸ್ಥಾನಕ್ಕೆ ಮಾತ್ರ ಸ್ಪರ್ಧಿಸಲಿದೆ ಎಂದಿದೆ. ಮೈತ್ರಿಯಲ್ಲಿರುವ ಇತರ ಪಕ್ಷಗಳ ಬೇಡಿಕೆ, ಪ್ರಾಬಲ್ಯ ಹಾಗೂ ಇತರ ಅಂಶಗಳನ್ನು ಆಧರಿಸಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ವೇಳೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡುತ್ತಿದೆ. 255 ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿದರೆ, ಉಳಿದ 288 ಸ್ಥಾನಗಳನ್ನು ಮೈತ್ರಿಯ 27 ಪಕ್ಷಗಳು ಹಂಚಿಕೊಳ್ಳಲಿದೆ. ಈ ನಿರ್ಧಾರ ಅಂತಿಮವಾದರೆ ಸ್ವಾತಂತ್ರ್ಯ ಭಾರತದಲ್ಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧಿಸುವ ಚುನಾವಣೆ ಇದಾಗಲಿದೆ.
ಇಂಡಿಯಾ ಮೈತ್ರಿ ಒಕ್ಕೂಟದ ಮುಖ್ಯಸ್ಥರಾಗಿ ಖರ್ಗೆ ಆಯ್ಕೆ, ಸಂಚಾಲಕ ಹುದ್ದೆ ತಿರಸ್ಕರಿಸಿದ್ರಾ ನಿತೀಶ್?
ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ 17 ಲೋಕಸಭಾ ಚುನಾವಣೆ ಎದುರಿಸಿದೆ. 1951ರ ಮೊದಲ ಲೋಕಸಭಾ ಚುನಾವಣೆಯಿಂದ ಹಿಡಿದು 2019ರ ಕೊನೆಯ ಚುನಾವಣೆ ವರೆಗೆ ಕಾಂಗ್ರೆಸ್ ಪ್ರತಿ ಬಾರಿ ಕನಿಷ್ಠ 450ಕ್ಕಿಂತ ಹೆಚ್ಚು ಸ್ಥಾನಕ್ಕೆ ಸ್ಪರ್ಧಿಸಿದೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟು 543 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಥಾನಕ್ಕೆ ಸ್ಪರ್ಧಿಸಿದ್ದು 2004ರ ಲೋಕಸಭೆ ಚುನಾವಣೆ. ಈ ವೇಳೆ ಕಾಂಗ್ರೆಸ್ 417 ಸ್ಥಾನಕ್ಕೆ ಸ್ಪರ್ಧಿಸಿತ್ತು.ಇನ್ನು 1999ರಲ್ಲಿ 529 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಗರಿಷ್ಠ ಸ್ಥಾನಕ್ಕೆ ಸ್ಪರ್ಧಿಸಿ ದಾಖಲೆ ಬರೆದಿದೆ.
2014ರ ಬಳಿಕ ಕಾಂಗ್ರೆಸ್ ಬಿಗಿ ಹಿಡಿತ ಕಳೆದುಕೊಂಡಿದೆ. ಸ್ಪರ್ಧೆಯಲ್ಲೂ ಪ್ರತಿ ಚುನಾವಣೆಗೆ ಸಂಖ್ಯೆ ಕುಸಿತವಾಗುತ್ತಿದೆ. 2014ರಲ್ಲಿ ಕಾಂಗ್ರೆಸ್ 464 ಸ್ಥಾನಕ್ಕೆ ಸ್ಪರ್ಧಿಸಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 421 ಸ್ಥಾನಕ್ಕೆ ಮಾತ್ರ ಸ್ಪರ್ಧಿಸಿತ್ತು.
ರಾಹುಲ್ ಗಾಂಧಿ ಯಾತ್ರೆಯ ಆರಂಭದ ಸ್ಥಳ ಬದಲು: ಕಾಂಗ್ರೆಸ್ ಲೋಕಸಭೆ ರಣನೀತಿ ಟೀಂನಿಂದ ಸುನೀಲ್ ಕನುಗೋಲು ಔಟ್