ಇಂಡಿಯಾ ಮೈತ್ರಿ ಒಕ್ಕೂಟದ ಮುಖ್ಯಸ್ಥರಾಗಿ ಖರ್ಗೆ ಆಯ್ಕೆ, ಸಂಚಾಲಕ ಹುದ್ದೆ ತಿರಸ್ಕರಿಸಿದ್ರಾ ನಿತೀಶ್?
ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ಸೀಟು ಹಂಚಿಕೆ ಕುರಿತು ಮಹತ್ವದ ಸಭೆ ನಡೆಸುತ್ತಿದೆ. ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಸೀಟು ಹಂಚಿಕೆಯಲ್ಲಿ ಅಸಮಾಧಾನಗೊಂಡಿದೆ. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ನಿತೀಶ್ ಕುಮಾರ್ ತಮಗೆ ನೀಡಿದ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇತ್ತ ಖರ್ಗೆಗೆ ಮಹತ್ತರ ಜವಾಬ್ದಾರಿ ನೀಡಲಾಗಿದೆ.
ನವದೆಹಲಿ(ಜ.13) ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಸೋಲಿಸಲು ಒಗ್ಗಟ್ಟಾಗಿರುವ ಇಂಡಿಯಾ ಒಕ್ಕೂಟ ಮೈತ್ರಿ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಸರಣಿ ಸಭೆಗಳನ್ನು ನಡೆಸಿ ಚುನಾವಣೆ ರಣತಂತ್ರದ ಕುರಿತು ಚರ್ಚಿಸಲಾಗಿದೆ. ಇದೀಗ ವರ್ಚುವಲ್ ಮೂಲಕ ಸಭೆ ನಡೆಸುತ್ತಿರುವ ಇಂಡಿಯಾ ಒಕ್ಕೂಟದಲ್ಲಿ ಮಹಾ ಸ್ಫೋಟ ಸಂಭವಿಸಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದಿಂದ ಅಸಮಾಧಾನಗೊಂಡಿದ್ದ ನಿತೀಶ್ ಕುಮಾರ್ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಅಸಮಾಧಾನ ತಣಿಸಲು ನಿತೀಶ್ ಕುಮಾರ್‌ಗೆ ಇಂಡಿಯಾ ಒಕ್ಕೂಟದ ಸಂಚಾಲಕ ಜವಾಬ್ದಾರಿ ನೀಡುವ ಪ್ರಸ್ತಾಪ ಮುಂದಿಡಲಾಗಿತ್ತು. ಆದರೆ ಈ ಪ್ರಸ್ತಾಪವನ್ನು ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗುತ್ತಿದೆ.ಇತ್ತ ಇಂದಿನ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಇಂಡಿಯಾ ಒಕ್ಕೂಟ ಮೈತ್ರಿಯ ಚೇರ್‌ಪರ್ಸನ್ ಆಗಿ ಆಯ್ಕೆ ಮಾಡಲಾಗಿದೆ.
ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳ ಸೀಟು ಹಾಗೂ ಜವಾಬ್ದಾರಿ ಹಂಚಿಕೆ ಕುರಿತು ಇಂದು ವರ್ಚುವಲ್ ಮೂಲಕ ಸಭೆ ನಡೆದಿದೆ. ಮೈತ್ರಿ ಕೂಟದ ಬಹುತೇಕ ಪಕ್ಷದ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಸೀಟು ಹಂಚಿಕೆಯಿಂದ ಅಸಮಾಧಾನಗೊಂಡಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಾರ್ಟಿ ಮುಖಂಡ ಅಖಿಲೇಶ್ ಯಾದವ್ ಸಭೆಗೆ ಗೈರಾಗಿದ್ದರು.
ಮಮತಾ ಸಡ್ಡು: ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾತುಕತೆ ಇಲ್ಲ; I.N.D.I.A ಮೈತ್ರಿಕೂಟದಲ್ಲಿ ಮತ್ತೊಂದು ಬಿರುಕು
ಇಂಡಿಯಾ ಮೈತ್ರಿ ಒಕ್ಕೂಟದ ಸಂಚಾಲಕ ಹುದ್ದೆಯನ್ನು ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ ಅನ್ನೋ ವರದಿ ಎಲ್ಲೆಡೆ ಹರಿದಾಡುತ್ತಿದೆ. ನಿತೀಶ್ ಕುಮಾರ್ ಸಮಾಧಾನಪಡಿಸಲು ಈ ಹುದ್ದೆ ನೀಡುವ ಪ್ರಸ್ತಾಪ ಮುಂದಿಡಲಾಗಿತ್ತು. ಆದರೆ ಈ ಪ್ರಸ್ತಾವನ್ನು ನಿತೀಶ್ ತಿರಸ್ಕರಿಸಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಇಂಡಿಯಾ ಒಕ್ಕೂಟದ ಮುಖ್ಯಸ್ಥ ಹುದ್ದೆ ಮೇಲೆ ಕಣ್ಣಿಟ್ಟಿದ್ದ ನಿತೀಶ್‌ಗೆ ತೀವ್ರ ಹಿನ್ನಡೆಯಾಗಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂಡಿಯಾ ಮೈತ್ರಿ ಒಕ್ಕೂಟದ ಚೇರ್‌ಪರ್ಸನ್ ಹುದ್ದೆಗೆ ಅವಿರೋಧವಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ತೆಗೆದುಕೊಂಡು ನಿರ್ಧಾರ ಗಾಗೂ ನಿರ್ಣಯಗಳ ಕುರಿತು ಗೈರಾಗಿರುವ ಮಮತಾ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್‌ಗೆ ತಿಳಿಸಲಾಗುವುದು ಎಂದು ಇಂಡಿಯಾ ಒಕ್ಕೂಟ ನಾಯಕರು ಹೇಳಿದ್ದಾರೆ.
ಖರ್ಗೆ ಹೆಸರೇ ಕೇಳಿಲ್ಲ, ಮುಂದಿನ ಪ್ರಧಾನಿ ನಿತೀಶ್; ಇಂಡಿಯಾ ಮೈತ್ರಿಗೆ ಬೆಂಕಿ ಹೆಚ್ಚಿದ JDU ಶಾಸಕ!
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಒಕ್ಕೂಟದ ಚೇರ್‌ಪರ್ಸನ್ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಆದರೆ ಈ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಚರ್ಚಿಸಲಾಗಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪ್ರತಿ ಪಕ್ಷಗಳು ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸಲು ಖರ್ಗೆ ಸೂಚಿಸಿದ್ದಾರೆ.