ಭಾರತದಲ್ಲಿ ಮೊಳಗಿದ ಬಾಯ್ಕಾಟ್ ಥಾಯ್ಲೆಂಡ್ ಕೂಗು, ವಿಷ್ಣಮೂರ್ತಿ ಧ್ವಂಸಕ್ಕೆ ಆಕ್ರೋಶ, ಕಾಂಬೋಡಿಯಾ ಹಾಗೂ ಥಾಯ್ಲೆಂಡ್ ನಡುವಿನ ಗಡಿ ಸಮಸ್ಯೆ ತೀವ್ರಗೊಂಡಿದೆ. ಇದೇ ವೇಳೆ ಭಾರತದಲ್ಲಿ ಥಾಯ್ಲೆಂಡ್ ಪ್ರವಾಸ ಬಹಿಷ್ಕರಿಸಲು ಅಭಿಯಾನ ಶುರುವಾಗಿದೆ.
ನವದೆಹಲಿ (ಡಿ.26) ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವಿನ ಗಡಿ ಸಮಸ್ಯೆ ತೀವ್ರಗೊಂಡಿದೆ. ಜುಲೈ ತಿಂಗಳಲ್ಲಿ ಭಾರಿ ಯುದ್ಧ ಸನ್ನಿವೇಷ ಸೃಷ್ಟಿಯಾಗಿತ್ತು. ಆದರೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕವಾಗಿ ಗಡಿ ಸಮಸ್ಯೆ ಶಮನಗೊಂಡಿತ್ತು. ಇದೀಗ ಮತ್ತೆ ಗಡಿ ಸಮಸ್ಯೆ ಉದ್ಭವಿಸಿದೆ. ಇದರ ನಡುವೆ ಕಾಂಬೋಡಿಯಾ ಗಡಿಯಲ್ಲಿದ್ದ ವಿಷ್ಣು ಮೂರ್ತಿಯನ್ನು ಥಾಯ್ಲೆಂಡ್ ಸೇನೆ ಧ್ವಂಸಗೊಳಿಸಿತ್ತು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಗಡಿ ಸಮಸ್ಯೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಥಾಯ್ಲೆಂಡ್ ಪ್ರವಾಸ ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ.
ಥಾಯಿ ಗಡಿಯಿಂದ 100 ಮೀಟರ್ ದೂರದಲ್ಲಿದ್ದ ವಿಷ್ಣು ಮೂರ್ತಿ
ಥಾಯ್ಲೆಂಡ್ ಗಡಿಯಿಂದ 100 ಮೀಟರ್ ದೂರದಲ್ಲಿ ವಿಷ್ಣು ಮೂರ್ತಿ ವಿಗ್ರಹವನ್ನು ಸ್ಥಾಪಿಸಲಾಗಿತ್ತು. 2014ರಲ್ಲಿ ಈ ವಿಗ್ರಹ ಸ್ಥಾಪನೆಯಾಗಿತ್ತು. ಗಡಿ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಥಾಯ್ಲೆಂಡ್ ಸೇನೆ ಕಾಂಬೋಡಿಯಾ ಗಡಿಗೆ ನುಗ್ಗಿ ಬುಲ್ಡೋಜರ್ ಮೂಲಕ ವಿಷ್ಣು ಮೂರ್ತಿಯನ್ನು ಧ್ವಂಸಗೊಳಿಸಿತ್ತು.ಈ ವಿಡಿಯೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೂ-ಬುದ್ಧ ಧರ್ಮಗಳ ಪವಿತ್ರ ಸ್ಥಳ
ವಿಷ್ಣು ಮೂರ್ತಿ ವಿಗ್ರಹ ಸ್ಥಾಪನೆ ಮಾಡಿದ ಸ್ಥಳ ಹಿಂದೂ ಹಾಗೂ ಬುದ್ಧ ಧರ್ಮೀಯರ ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಲಕ್ಷಾಂತರ ಹಿಂದೂ ಹಾಗೂ ಬುದ್ಧ ಭಕ್ತರು ಭೇಟಿ ನೀಡುತ್ತಾರೆ ಎಂದು ಕಾಂಬೋಡಿಯಾ ಹೇಳಿದೆ. ಈ ಪವಿತ್ರ ಸ್ಥಳದ ಮೇಲೆ ಥಾಯ್ಲೆಂಡ್ ಸೇನೆ ದಾಳಿ ಮಾಡಿದೆ ಎಂದು ಕಾಂಬೋಡಿಯೋ ಆಕ್ರೋಶ ಹೊರಹಾಕಿದೆ. ಇತ್ತ ಥಾಯ್ಲೆಂಡ್ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಗಡಿ ಹಾಗೂ ಸುರಕ್ಷತಾ ಸಮಸ್ಯೆಗಳ ಕಾರಣ ದಾಳಿಯಾಗಿದೆ. ಆದರೆ ಹಿಂದೂ ಅಥವಾ ಯಾವುದೇ ಧರ್ಮದ ಮೇಲೆ ದಾಳಿ ಮಾಡಿಲ್ಲ. ಇದು ದೇಶದ ಸುರಕ್ಷತೆಯ ಪ್ರಶ್ನೆ ಎಂದು ಥಾಯ್ಲೆಂಡ್ ಹೇಳಿದೆ.
ಭಾರತದಲ್ಲಿ ಬಾಯ್ಕಾಟ್ ಥಾಯ್ಲೆಂಡ್
ವಿಷ್ಣು ಮೂರ್ತಿ ಧ್ವಂಸಕ್ಕೆ ಭಾರತ ಕೆರಳಿದೆ.ಗಡಿ ಸಮಸ್ಯೆ ಏನೇ ಇರಬಹುದು, ಮಾತುಕತೆ ಅಥವಾ ಯುದ್ಧದ ಮೂಲಕವೇ ಬಗೆಹರಿಸಿ. ಆದರೆ ಹಿಂದೂ ದೇವರ ಮೂರ್ತಿಯನ್ನು ಧ್ವಂಸಗೊಳಿಸಿದ್ದು ಯಾಕೆ ಎಂದು ಭಾರತೀಯರು ಪ್ರಶ್ನಿಸಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಥಾಯ್ಲೆಂಡ್ ಟ್ರೆಂಡ್ ಶುರು ಮಾಡಿದ್ದಾರೆ. ಹಲವರು ಇದೇ ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮ ಆಚರಿಸಲು ಥಾಯ್ಲೆಂಡ್ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಈ ಪೈಕಿ ಕೆಲವರು ಟಿಕೆಟ್ ರದ್ದು ಮಾಡಿ ಬಾಯ್ಕಾಟ್ ಥಾಯ್ಲೆಂಡ್ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಯಶಸ್ವಿಯಾಗಿತ್ತು ಬಾಯ್ಕಾಟ್ ಮಾಲ್ಡೀವ್ಸ್
ಇತ್ತೀಚೆಗೆ ಭಾರತದ ಜೊತೆ ಭಾರಿ ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ವಿರುದ್ದ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ನಡೆಸಿ ಸೇಡು ತೀರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋಗಳನ್ನು ಪೋಸ್ಟ್ ಮಾಡಿ ಪರೋಕ್ಷವಾಗಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಕೈಜೋಡಿಸಿದ್ದರು. ಹೀಗಾಗಿ ಈ ಅಭಿಯಾನ ಭಾರಿ ವೇಗ ಪಡೆದುಕೊಂಡಿತ್ತು. ಕೆಲವೇ ದಿನದಲ್ಲಿ ಮಾಲ್ಡೀವ್ಸ್ ಭಾರತದ ಮುಂದೆ ಮಂಡಿಯೂರಿತ್ತು.


