ಮಧ್ಯಪ್ರಾಚ್ಯದ ಯುದ್ಧದಿಂದ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ, ಭಾರತದ ರಸಗೊಬ್ಬರ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ತುರ್ತು ಪರಿಸ್ಥಿತಿ ನಿಭಾಯಿಸಲು, ಕೆಲವು ಯೂರಿಯಾ ಸರಕುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ.
ನವದೆಹಲಿ (ಮಾ.13): ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಪರಿಣಾಮವಾಗಿ ನೈಸರ್ಗಿಕ ಅನಿಲ (Gas) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಭಾರತದ ಕೃಷಿ ಕ್ಷೇತ್ರದ ಬೆನ್ನೆಲುಬಾದ ರಸಗೊಬ್ಬರ ಉತ್ಪಾದನೆಯ ಮೇಲೆ ಭಾರಿ ಹೊಡೆತ ನೀಡುತ್ತಿದ್ದು, ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಕೆಲವು ಯೂರಿಯಾ ಸರಕುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ.
ರಸಗೊಬ್ಬರ ತಯಾರಿಕೆಗೆ ಅಗತ್ಯವಿರುವ ದ್ರವೀಕೃತ ನೈಸರ್ಗಿಕ ಅನಿಲದ (LNG) ಪೂರೈಕೆಯಲ್ಲಿ ಕೊರತೆಯುಂಟಾಗಿರುವುದರಿಂದ ಭಾರತದ ಕೆಲವು ಗೊಬ್ಬರ ಕಾರ್ಖಾನೆಗಳು ಈಗಾಗಲೇ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಈ ಹಿನ್ನೆಲೆಯಲ್ಲಿ, ಚೀನಾ ಸರ್ಕಾರವು ತನ್ನ ರಫ್ತು ನಿರ್ಬಂಧಗಳನ್ನು ಸಡಿಲಿಸಿ ಭಾರತಕ್ಕೆ ಯೂರಿಯಾ ಪೂರೈಕೆ ಮಾಡಬೇಕು ಎಂದು ಭಾರತೀಯ ಅಧಿಕಾರಿಗಳು ಚೀನಾಕ್ಕೆ ತಿಳಿಸಿದ್ದಾರೆ. ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ ಜಾಗತಿಕ ವ್ಯಾಪಾರ ಮತ್ತು ಆಹಾರ ಭದ್ರತೆಗೆ ಧಕ್ಕೆ ಉಂಟಾಗಿರುವ ನಡುವೆಯೇ ಭಾರತ ಇಂತಹದೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ದರ ಏರಿಕೆ
ವಿಶ್ವದಾದ್ಯಂತ ಆಹಾರ ಉತ್ಪಾದನೆಗೆ ಅತ್ಯಗತ್ಯವಾಗಿರುವ ಸಾರಜನಕಯುಕ್ತ ರಸಗೊಬ್ಬರವಾದ ಯೂರಿಯಾ ಬೆಲೆಯು ಯುದ್ಧದ ಮೊದಲ ವಾರದಲ್ಲೇ ಶೇ. 21 ರಷ್ಟು ಏರಿಕೆಯಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ ಎಂದು ಲಭ್ಯವಿರುವ ಅಂಕಿಅಂಶಗಳು ಹೇಳಿವೆ.
ಚೀನಾದ ರಫ್ತು ನೀತಿ ಮತ್ತು ಭಾರತದ ಅವಲಂಬನೆ
ವಿಶ್ವದ ಅತಿದೊಡ್ಡ ಯೂರಿಯಾ ಉತ್ಪಾದಕ ದೇಶವಾಗಿರುವ ಚೀನಾ, ಪ್ರಸ್ತುತ ಕೋಟಾ ಪದ್ಧತಿಯ ಅಡಿಯಲ್ಲಿ ರಫ್ತು ಪ್ರಕ್ರಿಯೆಯನ್ನು ನಿಯಂತ್ರಿಸುತ್ತಿದೆ. 2026ರ ಸಾಲಿಗೆ ಚೀನಾ ಇನ್ನೂ ಯಾವುದೇ ಅಧಿಕೃತ ರಫ್ತು ಅನುಮತಿಯನ್ನು ನೀಡಿಲ್ಲ. ಅಲ್ಲಿನ ಸ್ಥಳೀಯ ರೈತರು ವಸಂತ ಕಾಲದ ಬಿತ್ತನೆಗೆ ಸಜ್ಜಾಗುತ್ತಿರುವುದರಿಂದ ಚೀನಾ ತನ್ನ ದೇಶೀಯ ಬೇಡಿಕೆಗೆ ಆದ್ಯತೆ ನೀಡುತ್ತಿದೆ.
ಭಾರತದ ಪರ್ಯಾಯ ಮೂಲಗಳು
ಭಾರತವು ಪ್ರಸ್ತುತ ರಸಗೊಬ್ಬರಗಳ ತೀವ್ರ ಕೊರತೆಯನ್ನು ಎದುರಿಸುತ್ತಿಲ್ಲವಾದರೂ, ಜೂನ್ ತಿಂಗಳಲ್ಲಿ ಮಾನ್ಸೂನ್ ಆಗಮನದೊಂದಿಗೆ ಬಿತ್ತನೆ ಕಾರ್ಯ ಆರಂಭವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಈಗಿನಿಂದಲೇ ದಾಸ್ತಾನು ಮಾಡುವುದು ಅಗತ್ಯವಾಗಿದೆ. ಮಧ್ಯಪ್ರಾಚ್ಯದ ಕೊರತೆಯನ್ನು ಸರಿದೂಗಿಸಲು ಭಾರತವು ಚೀನಾ ಮಾತ್ರವಲ್ಲದೆ ರಷ್ಯಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಈಜಿಪ್ಟ್‌ನಂತಹ ದೇಶಗಳ ಕಡೆಗೂ ಗಮನ ಹರಿಸುತ್ತಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ (ಮಾರ್ಚ್ 31 ರವರೆಗೆ) ಭಾರತವು ಈಗಾಗಲೇ 9.8 ಮಿಲಿಯನ್ ಟನ್ ಯೂರಿಯಾವನ್ನು ಆಮದು ಮಾಡಿಕೊಂಡಿದೆ. ಮುಂದಿನ ಮೂರು ತಿಂಗಳಲ್ಲಿ ಸುಮಾರು 1.7 ಮಿಲಿಯನ್ ಟನ್ ಯೂರಿಯಾ ಭಾರತಕ್ಕೆ ಬರುವ ನಿರೀಕ್ಷೆಯಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಭಾರತವು ಹೊಸ ಯೂರಿಯಾ ಆಮದು ಟೆಂಡರ್ ಕರೆಯುವ ಸಾಧ್ಯತೆಯಿದೆ.
ಕತಾರ್‌ನಿಂದ ಭಾರತಕ್ಕೆ ಬರಬೇಕಿದ್ದ ಎಲ್‌ಎನ್‌ಜಿ (LNG) ಪೂರೈಕೆಯಲ್ಲಿ ಕಡಿತ ಉಂಟಾಗಿದೆ. ಇದರಿಂದಾಗಿ ಗೊಬ್ಬರ ತಯಾರಿಕಾ ಕಂಪನಿಗಳಿಗೆ ಅಗತ್ಯವಿರುವ ಅನಿಲದ ಪೈಕಿ ಕೇವಲ ಶೇ. 70ರಷ್ಟು ಮಾತ್ರ ಸಿಗುತ್ತಿದೆ. ಇದು ಅಕ್ಕಿ, ಗೋಧಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಕೃಷಿ ಕ್ಷೇತ್ರದ ಮೇಲೆ ಆತಂಕದ ಮೋಡ ಕವಿಯುವಂತೆ ಮಾಡಿದೆ.


