* ಶೇ.100ರಷ್ಟು ಮೊದಲ ಡೋಸ್‌ ನೀಡಿದ ಹಿಮಾ​ಚ​ಲಕ್ಕೂ ಪ್ರಶಂಸೆ* ನಿತ್ಯ ದಾಖ​ಲೆಯ 1.25 ಕೋಟಿ ಡೋಸ್‌ ಲಸಿ​ಕೆ ನೀಡಿ​ಕೆ: ಮೋದಿ

ನವದೆಹಲಿ(ಸೆ.07): ಕೊರೋನಾ ವೈರಸ್‌ನಿಂದ ಜನರ ರಕ್ಷಣೆಗಾಗಿ ಪ್ರತೀ ನಿತ್ಯವೂ ದೇಶದಲ್ಲಿ 1.25 ಕೋಟಿಯಷ್ಟುಕೋವಿಡ್‌ ಲಸಿಕೆಯ ಡೋಸ್‌ಗಳನ್ನು ನೀಡಲಾಗುತ್ತಿದೆ. ಇದು ಹಲವು ದೇಶಗಳು ಹೊಂದಿದ ಒಟ್ಟಾರೆ ಜನಸಂಖ್ಯೆಗಿಂತಲೂ ಹೆಚ್ಚಾಗಿದ್ದು, ಭಾರತವು ದಾಖಲೆ ಬರೆಯುತ್ತಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು.

ಲಸಿಕೆಗೆ ಅರ್ಹವಿರುವ ಪ್ರತಿಯೊಬ್ಬರಿಗೆ ಅಂದರೆ ಶೇ.100ರಷ್ಟುಮಂದಿಗೆ ಮೊದಲ ಡೋಸ್‌ ನೀಡಿದ ಹಿಮಾಚಲ ಪ್ರದೇಶಕ್ಕೆ ಇದೇ ವೇಳೆ ಮೋದಿ ಅವರು ಅಭಿನಂದನೆ ಸಲ್ಲಿಸಿದರು.

ಹಿಮಾಚಲ ಪ್ರದೇಶದ ಆರೋಗ್ಯ ಸಿಬ್ಬಂದಿ ಮತ್ತು ಕೋವಿಡ್‌ ಲಸಿಕೆ ಫಲಾನುಭವಿಗಳ ಜತೆ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ಮಾತನಾಡಿದ ಮೋದಿ ಅವರು, ಸರಕು ಸಾಗಣೆಯ ಸವಾಲುಗಳ ಹೊರತಾಗಿಯೂ, ಲಸಿಕೆಗೆ ಅರ್ಹವಿರುವ ಪ್ರತಿಯೊಬ್ಬರಿಗೂ ಮೊದಲ ಡೋಸ್‌ ನೀಡಿರುವ ಹಿಮಾಚಲ ಪ್ರದೇಶವು ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯವಾಗಿದೆ. ಅಲ್ಲದೆ ಹಿಮಾಚಲದಲ್ಲಿ ಶೇ.30ರಷ್ಟು ಮಂದಿಗೆ 2ನೇ ಡೋಸ್‌ ಅನ್ನು ಸಹ ನೀಡಲಾಗಿದೆ.

ಹಗಲಿರುಳು ಶ್ರಮಿಸಿ ಈ ಸಾಧನೆಗೆ ಕಾರಣೀಭೂತರಾದ ವೈದ್ಯರು, ಕೋವಿಡ್‌ ವಾರಿಯರ್‌ಗಳು, ಪ್ಯಾರಾಮೆಡಿಕಲ್‌ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗೆ ಅಭಿನಂದನೆಗಳು ಎಂದು ಹೇಳಿದರು.