ಎಥೆನಾಲ್ ಮಿಶ್ರಣ ಗುರಿ ಸಾಧಿಸಿದ ಭಾರತ: ಮೋದಿ ಹರ್ಷ
* 5 ತಿಂಗಳ ಮೊದಲೇ ಪೆಟ್ರೋಲ್‌ಗೆ ಶೇ.10ರಷ್ಟುಎಥೆನಾಲ್ ಮಿಶ್ರಣದ ಗುರಿ ಸಾಧನೆ
* ಇದರಿಂದ ಇಂಗಾಲ ಬಿಡುಗಡೆ ಪ್ರಮಾಣ 27 ಲಕ್ಷ ಟನ್‌ನಷ್ಟು ಕುಸಿತ
* 8 ವರ್ಷದಲ್ಲಿ ಭಾರತದ ಅರಣ್ಯ ಪ್ರದೇಶ 20 ಸಾವಿರ ಚ.ಕಿ.ಮೀ.ನಷ್ಟುಹೆಚ್ಚಳ
* ಸದ್ಗುರು ಅವರ ‘ಮಣ್ಣು ಉಳಿಸಿ ಆಂದೋಲನ’ದಲ್ಲಿ ಮೋದಿ ಭಾಷಣ
ನವದೆಹಲಿ(ಜೂ.06): ‘ಜಾಗತಿಕ ಪರಿಸರ ರಕ್ಷಣೆಯಲ್ಲಿ ಭಾರತ ಬಹು ಆಯಾಮದ ಪ್ರಯತ್ನಗಳನ್ನು ನಡೆಸುತ್ತಿದೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ‘ಪೆಟ್ರೋಲ್‌ಗೆ ಶೇ.10ರಷ್ಟುಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಭಾರತ ನಿಗದಿತ ಗುರಿಗಿಂತ 5 ತಿಂಗಳು ಮೊದಲೇ ಸಾಧಿಸಿದೆ ಎಂದು ಹೇಳಿದ್ದಾರೆ.
ಈಶ ಫೌಂಡೇಶನ್ ಮುಖ್ಯಸ್ಥ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅಂಗವಾಗಿ ವಿಶ್ವ ಪರಿಸರ ದಿನವಾದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಜಾಗತಿಕ ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾದರೂ, ಪರಿಸರ ಉಳಿಸಲು ಭಾರತ ಸರ್ಕಾರ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹಾದಿಯಲ್ಲಿ ನಮ್ಮ ಪ್ರಯತ್ನ ಬಹು ಆಯಾಮದ್ದು’ ಎಂದು ಹೇಳಿದರು.
‘2014ರಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದ ಪ್ರಮಾಣ ಕೇವಲ ಶೇ.1.5ರಷ್ಟಿತ್ತು. ಅದನ್ನು ಇದೀಗ ಶೇ.10ಕ್ಕೆ ಹೆಚ್ಚಿಸಲಾಗಿದೆ. ಪರಿಣಾಮ ವಾತಾವರಣಕ್ಕೆ ಇಂಗಾಲ ಬಿಡುಗಡೆ ಪ್ರಮಾಣ 27 ಲಕ್ಷ ಟನ್‌ನಷ್ಟುಕಡಿಮೆಯಾಗಿದೆ, ದೇಶದ ಬೊಕ್ಕಸಕ್ಕೆ 4,10,000 ಕೋಟಿ ರು. ವಿದೇಶಿ ವಿನಿಮಯ ಉಳಿಕೆಯಾಗಿದೆ. ಅಲ್ಲದೆ ಇದು ರೈತರಿಗೆ ಹೆಚ್ಚುವರಿಯಾಗಿ 40,000 ಕೋಟಿ ರು. ಆದಾಯ ಸೃಷ್ಟಿಸಿಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ.
ಇದಲ್ಲದೆ ಪಳೆಯುಳಿಕೇತರ ಇಂಧನ ಮೂಲಗಳ ಒಟ್ಟು ಬೇಡಿಕೆಯಲ್ಲಿ ಶೇ.40ರಷ್ಟುಇಂಧನವನ್ನು ಪಡೆದುಕೊಳ್ಳುವ ಗುರಿಯನ್ನು 9 ವರ್ಷ ಮೊದಲೇ ಮುಟ್ಟಲಾಗಿದೆ. ಕಳೆದ 8 ವರ್ಷಗಳಲ್ಲಿ ಭಾರತದ ಅರಣ್ಯ ಪ್ರದೇಶ 20 ಸಾವಿರ ಚದರ ಕಿ.ಮೀನಷ್ಟುಹೆಚ್ಚಳವಾಗಿದೆ. ವನ್ಯ ಮೃಗಗಳ ಸಂಖ್ಯೆಯಲ್ಲೂ ದಾಖಲೆ ವೃದ್ಧಿಯಾಗಿದೆ. ಸೌರ ಇಂಧನ ಸಾಮರ್ಥ್ಯವು 18 ಪಟ್ಟು ಹೆಚ್ಚಾಗಿದೆ. ಇದರ ಜೊತೆಗೆ ಹೈಡ್ರೋಜನ್ ಮಿಷನ್, ಸಕ್ರ್ಯುಲರ್ ಎಕಾನಮಿ, ಗುಜರಿ ಪಾಲಿಸಿ ಪರಿಸರ ಉಳಿಸುವಲ್ಲಿನ ನಮ್ಮ ಪ್ರಯತ್ನಗಳಿಗೆ ಉದಾಹರಣೆ ಎಂದು ಹೇಳಿದರು.
ತೃಪ್ತಿ ತಂದಿದೆ;
ಕಳೆದ 8 ವರ್ಷಗಳಲ್ಲಿ ತಮ್ಮ ಸರ್ಕಾರದ ಹಲವು ಯೋಜನೆಗಳು ಪರಿಸರ ಉಳಿಸುವ ಗುರಿಯೊಂದಿಗೆ ಜಾರಿಗೊಂಡಿರುವ ಬಗ್ಗೆ ತೃಪ್ತಿ ಇದೆ ಎಂದಿರುವ ಮೋದಿ, ಇದಕ್ಕೆ ಸ್ವಚ್ಛ ಭಾರತ ಯೋಜನೆ, ಕಸದಿಂದ ಸಂಪತ್ತು, ಏಕಬಳಕೆಯ ಪ್ಲಾಸ್ಟಿಕ್ ನಿಷೇಧ, ಒಂದು ಸೂರ್ಯ ಒಂದು ಭೂಮಿ, ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದಂಥ ಯೋಜನೆಗಳನ್ನು ಉದಾಹರಿಸಿದರು.
ಶ್ರೀಮಂತ ದೇಶಗಳಿಗೆ ಚಾಟಿ:
ಈ ನಡುವೆ ಅಭಿವೃದ್ಧಿ ಹೊಂದಿರುವ ದೇಶಗಳ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, ಈ ದೇಶಗಳು ಭೂಮಿಯ ಸಂಪತ್ತನ್ನು ಮನಸೋಇಚ್ಛೆ ಬಳಸಿದ್ದು ಮಾತ್ರವಲ್ಲದೇ ಅತ್ಯಧಿಕ ಇಂಗಾಲ ಬಿಡುಗಡೆಯಲ್ಲೂ ತಮ್ಮ ಪಾಲನ್ನು ಹೊಂದಿವೆ. ಪ್ರತಿ ವ್ಯಕ್ತಿಯ ಇಂಗಾಲ ಬಿಡುಗಡೆಯ ಜಾಗತಿಕ ಸರಾಸರಿ 4 ಟನ್‌ಗಳಷ್ಟಿದ್ದರೆ, ಭಾರತದ ಸರಾಸರಿ ಶೇ.0.5ರಷ್ಟಿದೆ ಎಂದು ಮೋದಿ ಹೇಳಿದರು. ಜೊತೆಗೆ 20270ರ ವೇಳೆಗೆ ಇಂಗಾಲ ಬಿಡುಗಡೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಭರವಸೆಯನ್ನು ಪುನರುಚ್ಚರಿಸಿದರು.
ಮಣ್ಣು ಉಳಿಸಲು 5 ವಿಷಯದತ್ತ ಗಮನ:
ಜೊತೆಗೆ ಮಣ್ಣನ್ನು ಉಳಿಸುವಲ್ಲಿ ಭಾರತ ಪ್ರಮುಖವಾಗಿ 5 ವಿಷಯಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ ಎಂದಿರುವ ಮೋದಿ, ‘ಮಣ್ಣನ್ನು ರಾಸಾಯನಿಕ ಮುಕ್ತ ಮಾಡುವುದು, ಮಣ್ಣಿನಲ್ಲಿ ಜೀವಿಸುವ ಸೂಕ್ಷ್ಮಾಣು ಜೀವಿಗಳನ್ನು ಕಾಪಾಡುವುದು, ಮಣ್ಣಿನ ತೇವಾಂಶ ಉಳಿಸುವ, ನೀರಿನ ಲಭ್ಯತೆ ಹೆಚ್ಚಿಸುವ ಮತ್ತು ಕಡಿಮೆ ಅಂತರ್ಜಲದಿಂದಾಗಿ ಮಣ್ಣಿಗೆ ಆಗುತ್ತಿರುವ ಹಾನಿಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.
13 ನದಿಗಳ ರಕ್ಷಣೆ:
ಇದರ ಜೊತೆಗೆ 13 ದೊಡ್ಡ ನದಿಗಳನ್ನು ಸಂರಕ್ಷಿಸುವ ಕೆಲಸ ಆರಂಭವಾಗಿದೆ. ನೀರಿನ ಮಾಲಿನ್ಯ ಕಡಿಮೆ ಮಾಡುವ, ನದಿ ದಡದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ರೂಪುಗೊಂಡಿದೆ. ಇದೆಲ್ಲದರ ಜೊತೆಗೆ ನೈಸರ್ಗಿಕ ಕೃಷಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. 2030ರ ವೇಳೆಗೆ 2.6 ಕೋಟಿ ಹೆಕ್ಟೇರ್ ಬಂಜರು ಭೂಮಿಯನ್ನು ಮತ್ತೆ ಫಲವತ್ತಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಗತಿಶಕ್ತಿಯ ಯೋಜನೆ ಸರಕು ಸಾಗಣೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲಿದೆ. 100 ಜಲಮಾರ್ಗಗಳ ಆರಂಭ ಕೂಡಾ ಮಾಲಿನ್ಯ ಕಡಿತ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ 27 ದೇಶಗಳಿಗೆ 100 ದಿನಗಳ ಬೈಕ್ ಯಾತ್ರೆ ಕೈಗೊಂಡಿದ್ದ ಸದ್ಗುರು ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.