ನವದೆಹಲಿ(ಏ.15): ತೀವ್ರವಾಗಿ ಏಳುತ್ತಿರುವ ಕೊರೋನಾದ 2ನೇ ಅಲೆ ಮೇ ಅಂತ್ಯದವರೆಗೆ ಮುಂದುವರಿಯಲಿದೆ. ಆದರೆ ಅದಕ್ಕಿಂತ ಮೊದಲು ನಿತ್ಯ ಸುಮಾರು 3 ಲಕ್ಷ ಸೋಂಕಿನ ಪ್ರಕರಣಗಳು ದಾಖಲಾಗುತ್ತವೆ ಎಂದು ಹೆಸರಾಂತ ವೈರಾಣು ತಜ್ಞ ಡಾ| ಶಾಹಿದ್‌ ಜಮೀಲ್‌ ಹೇಳಿದ್ದಾರೆ.

ಟೀವಿ ಚಾನೆಲ್‌ ಒಂದರ ಜತೆ ಮಾತನಾಡಿದ ಜಮೀಲ್‌, ‘ಪ್ರಕರಣಗಳ ಏರುಗತಿ ಭಯಾನಕವಾಗಿದೆ. ಏರುಗತಿ ನಿತ್ಯ ಶೇ.7ರ ಪ್ರಮಾಣದಲ್ಲಿದೆ. ಇದು ತುಂಬಾ ಗರಿಷ್ಠ ಏರುಗತಿ. ದುರದೃಷ್ಟಕರ ರೀತಿಯಲ್ಲಿ ಇದೇ ರೀತಿ ಏರಿಕೆ ಆಗುತ್ತಿದ್ದರೆ ನಿತ್ಯ 3 ಲಕ್ಷ ಪ್ರಕರಣಗಳು ದಾಖಲಾಗುತ್ತವೆ’ ಎಂದು ಅಂದಾಜಿಸಿದರು.

‘ಕೊರೋನಾದ ಹೊಸ ತಳಿ ಹೆಚ್ಚು ಸೋಂಕುಕಾರಕವಾಗಿವೆ. ಆದರೆ ಅವು ಕಡಮೆ ಮಾರಣಾಂತಿಕ ಎಂದು ಹೇಳಲು ಯಾವುದೇ ಸಾಕ್ಷ್ಯಗಳು ಲಭಿಸುತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ಲಸಿಕೆ ಬಂದಾಗ ಜನರು ಉದಾಸೀನ ಭಾವನೆಯಲ್ಲಿದ್ದರು. ‘ಕೊರೋನಾ ಹೋಗಿದೆ. ನನಗೇಕೆ ಲಸಿಕೆ ಬೇಕು?’ ಎಂದು ಕೆಲವರು ಲಘುವಾಗಿ ಮಾತನಾಡುತ್ತಿದ್ದರು. ಆದರೆ ಈಗ ಕೊರೋನಾ ಹೆಚ್ಚಾಗುತ್ತಿದೆ. ಯಾವಾಗ ಲಸಿಕೆ ಪಡೆಯಬೇಕಾಗಿತ್ತೋ ಆಗ ಪಡೆಯದವರು ಈಗ ಲಸಿಕೆಯ ರೇಸ್‌ನಲ್ಲಿದ್ದಾರೆ’ ಎಂದು ಪರಿಸ್ಥಿತಿಯನ್ನು ಜಮೀಲ್‌ ವಿಶ್ಲೇಷಿಸಿದರು.

ಇದೇ ವೇಳೆ, ದೇಶದಲ್ಲಿ ಲಸಿಕೆ ಕೊರತೆ ಇದೆ ಎಂಬ ವಾದಗಳನ್ನು ತಿರಸ್ಕರಿಸಿದರು.