ಚೆನ್ನೈ(ಏ.03): ತಮಿಳುನಾಡು ವಿಧಾನಸಭೆ ಚುನಾವಣೆ ತಾರಕಕ್ಕೇರಿರುವಾಗಲೇ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರ ಪುತ್ರಿ ಸೆಂಥಮಾರೈ ಹಾಗೂ ಅಳಿಯ ಶಬರೀಶನ್‌ ಅವರಿಗೆ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಈ ದಂಪತಿಗೆ ಸೇರಿದ 4 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಡಿಎಂಕೆಯ ಅಣ್ಣಾನಗರ ಕ್ಷೇತ್ರದ ಅಭ್ಯರ್ಥಿ ಎಂ.ಕೆ. ಮೋಹನ್‌ ಅವರ ಪುತ್ರ ಕಾರ್ತಿಕ್‌ ಮೋಹನ್‌ ಮನೆಯಲ್ಲೂ ಜಾಲಾಡಿದ್ದಾರೆ ಎನ್ನಲಾಗುತ್ತಿದೆ.

ಏ.6ಕ್ಕೆ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವೇ ದಿನಗಳಿರುವಾಗ ತೆರಿಗೆ ಇಲಾಖೆ ನಡೆಸಿರುವ ಈ ದಾಳಿಗೆ ಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜಕೀಯ ದುರುದ್ದೇಶದಿಂದಲೇ ಈ ಕಾರ್ಯಾಚರಣೆ ನಡೆಸಲಾಗಿದೆ.

ಇಂತಹ ದಾಳಿಯಿಂದ ಸ್ಟಾಲಿನ್‌, ಡಿಎಂಕೆಗೆ ಶಾಕ್‌ ನೀಡಬಹುದು ಎಂದು ಕೇಂದ್ರ ಸರ್ಕಾರವೇನಾದರೂ ತಿಳಿದಿದ್ದರೆ ಅದು ತಪ್ಪು. ಇಂತಹ ದಾಳಿಗಳಿಂದ ಡಿಎಂಕೆಯನ್ನು ಹೆದರಿಸಲು ಆಗುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್‌ ಗುಡುಗಿದ್ದಾರೆ.