ಮೇ 3 ಬಳಿಕ ಲಾಕ್ಡೌನ್‌ ಇರುತ್ತಾ, ಹೋಗುತ್ತಾ?| ಇಂದು ಸಿಎಂಗಳ ಜತೆ ಮೋದಿ ಚರ್ಚೆ| ಬೆಳಗ್ಗೆ 10ಕ್ಕೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಬಿಎಸ್‌ವೈ ಕೂಡ ಭಾಗಿ| ಕೇಂದ್ರದ ಸೂಚನೆಯಂತೆ ಕ್ರಮಕ್ಕೆ ಕರ್ನಾಟಕ ಸೇರಿ 6 ರಾಜ್ಯ ಒಲವು| ಲಾಕ್‌ಡೌನ್‌ ವಿಸ್ತರಣೆಗೆ ದೆಹಲಿ, ಮಹಾರಾಷ್ಟ್ರ ಸೇರಿ 6 ರಾಜ್ಯ ಮನವಿ| ಕೊರೋನಾ ನಿಯಂತ್ರಣ ಜತೆ ಆರ್ಥಿಕತೆ ಉತ್ತೇಜನಕ್ಕೂ ಪಿಎಂ ಒಲವು| ಹಾಟ್‌ಸ್ಪಾಟ್‌ ಹೊರತು ಪಡಿಸಿ ಇತರೆಡೆ ಲಾಕ್‌ಡೌನ್‌ ಸಡಿಲ ಸಂಭವ

ನವದೆಹಲಿ(ಏ.27): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೊರೋನಾ ವೈರಸ್‌ ನಿಯಂತ್ರಣ ಹಾಗೂ ಲಾಕ್‌ಡೌನ್‌ ಕುರಿತಂತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಮೇ 3ರಂದು 2ನೇ ಹಂತದ ಲಾಕ್‌ಡೌನ್‌ ಅಂತ್ಯವಾಗುತ್ತಾ? ಅಥವಾ 3ನೇ ಹಂತಕ್ಕೆ ವಿಸ್ತರಣೆ ಆಗುತ್ತಾ? ಅಥವಾ ವಿಸ್ತರಣೆ ಆದರೂ ಹಲವು ಚಟುವಟಿಕೆಗಳ ಆರಂಭಕ್ಕೆ ವಿನಾಯಿತಿ ಸಿಗುತ್ತಾ ಎಂಬುದು ಈ ವೇಳೆ ಸ್ಪಷ್ಟವಾಗುವ ನಿರೀಕ್ಷೆಯಿದೆ.

ಕೊರೋನಾ ಸೋಂಕು ವ್ಯಾಪಿಸಲು ಆರಂಭವಾದ ನಂತರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ನಡೆಸುತ್ತಿರುವ 4ನೇ ಸಂವಾದ ಇದಾಗಿದೆ. ಕೊರೋನಾ ವೈರಸ್‌ ಸೋಂಕು ಹರಡುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರ ಜತೆಗೆ, ಆರ್ಥಿಕ ಚಟುವಟಿಕೆಗೂ ಉತ್ತೇಜನ ನೀಡುವ ಅನಿವಾರ್ಯತೆಯಲ್ಲಿ ಸರ್ಕಾರ ಇದೆ. ಈಗಾಗಲೇ ಲಾಕ್‌ಡೌನ್‌ ಅನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಈ ನಡುವೆ, ಸೋಂಕು ಅಧಿಕವಾಗಿರುವ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಂಡು, ಇತರೆಡೆ ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ನೀಡುವ ಕುರಿತು ಚರ್ಚಿಸಲಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ, ಲಾಕ್‌ಡೌನ್‌ ವಿಸ್ತರಣೆಗೆ ದಿಲ್ಲಿ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ ಒಲವು ತೋರಿವೆ. ಕನಿಷ್ಠ ಪಕ್ಷ ಹಾಟ್‌ಸ್ಪಾಟ್‌ಗಳಲ್ಲಾದರೂ ಲಾಕ್‌ಡೌನ್‌ ಮುಂದುವರಿಸಬೇಕು ಎಂಬುದು ಅವುಗಳ ನಿಲುವಾಗಿದೆ. ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶಗಳು ಕೇಂದ್ರ ಸರ್ಕಾರ ಹೊರಡಿಸುವ ಮಾರ್ಗಸೂಚಿ ಪಾಲಿಸುತ್ತೇವೆ ಎಂದು ಹೇಳಿವೆ. ಇನ್ನು ಅಸ್ಸಾಂ, ಕೇರಳ ಹಾಗೂ ಬಿಹಾರಗಳು ಮೋದಿ ಜತೆಗಿನ ಸಂವಾದದ ಬಳಿಕ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿವೆ.

ಕೋವಿಡ್‌ ವಿರುದ್ಧ ಹೋರಾಟ: 'ಕೊರೋನಾ ಜಾತಿ, ಧರ್ಮ ನೋಡಿ ಬರುವುದಿಲ್ಲ'

ಬೆಳಗ್ಗೆ 10ಕ್ಕೆ ಆರಂಭವಾಗುವ ಮೋದಿ ಜತೆಗಿನ ಸಿಎಂಗಳ ಸಂವಾದದಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಯಾವ್ಯಾವ ಹೊಸ ಕ್ರಮಗಳನ್ನು ಅನುಸರಿಸಬೇಕು ಎಂಬ ಕುರಿತು ಒಂದು ಹಂತದಲ್ಲಿ ಚರ್ಚೆ ನಡೆಯಲಿದೆ. ಇನ್ನೊಂದು ಹಂತದಲ್ಲಿ, ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲು ಹಂತ ಹಂತವಾಗಿ ಹೇಗೆ ಲಾಕ್‌ಡೌನ್‌ ತೆರವು ಮಾಡಬೇಕು ಎಂಬುದರ ಚರ್ಚೆ ಕೂಡ ಏರ್ಪಡಲಿದೆ ಎಂದು ಮೂಲಗಳು ಹೇಳಿವೆ.

ಎಲ್ಲೆಲ್ಲಿ ಕೊರೋನಾ ಸೋಂಕು ಇಲ್ಲವೋ ಅಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಅಂಗಡಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಶನಿವಾರದಿಂದಲೇ ಅನುಮತಿ ನೀಡಿದೆ. ಇದು ಮುಂದಿನ ಹಂತದಲ್ಲಿ ಮೋದಿ ಅವರು ಕೈಗೊಳ್ಳುವ ಕ್ರಮದ ಮುನ್ಸೂಚನೆ ಎಂದು ಹೇಳಲಾಗಿದೆ.

ಇನ್ನು ಮುಖ್ಯಮಂತ್ರಿಗಳ ಸಭೆಗೆ ಪೂರ್ವಭಾವಿಯಾಗಿ ಸಂಪುಟ ಕಾರ್ಯದರ್ಶಿ ರಾಜೀವ ಗೌಬಾ ಅವರು ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಶನಿವಾರ ಸಂವಾದ ನಡೆಸಿದ್ದಾರೆ. ಈ ವೇಳೆ, ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ನಿಮ್ಮ ರಾಜ್ಯದ ಕಾರ್ಮಿಕರನ್ನು ಕರೆತರಲು ಯೋಜನೆಗಳೇನು? ವಿದೇಶದಲ್ಲಿ ಸಿಲುಕಿದ ನಿಮ್ಮ ರಾಜ್ಯದವರನ್ನು ಕರೆತರುವುದು ಹೇಗೆ? ಮೇ 3ರ ನಂತರ ಲಾಕ್‌ಡೌನ್‌ನಿಂದ ನಿಮಗೆ ಯಾವ ವಿನಾಯಿತಿ ಬೇಕು? ಎಂಬ ಪ್ರಶ್ನೆಗಳನ್ನು ರಾಜ್ಯಗಳಿಗೆ ಕೇಳಿದ್ದಾರೆ. ಹೊರರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಇದು ಪ್ರಧಾನಿ ಜತೆಗಿನ ಸಿಎಂಗಳ ಸಭೆಯಲ್ಲಿ ಕೂಡ ಹೆಚ್ಚು ಚರ್ಚೆಗೆ ಒಳಪಡಬಹುದು ಎಂದು ಮೂಲಗಳು ತಿಳಿಸಿವೆ.

ಜನರಿಗೆ ಮಾದರಿಯಾಗಲು ಸಚಿವರು, ಸಂಸದರು, ಶಾಸಕರಿಗೆ ಸಲಹೆ ಕೊಟ್ಟ ಬಿಎಸ್‌ವೈ

ಲಾಕ್‌ಡೌನ್‌ ಬಯಸಿರುವ ರಾಜ್ಯಗಳು: ದಿಲ್ಲಿ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್‌

ಕೇಂದ್ರದ ಸೂಚನೆಗೆ ಕಾಯುವ ರಾಜ್ಯಗಳು: ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ

ನಿರ್ಧಾರ ಕೈಗೊಳ್ಳದ ರಾಜ್ಯಗಳು: ಅಸ್ಸಾಂ, ಕೇರಳ, ಬಿಹಾರ