9 ವರ್ಷದ ಬಾಲಕನನ್ನು ರಾಮಲಲ್ಲಾ ಮೂರ್ತಿಯನ್ನಾಗಿ ಮಾಡಿದ ಮೇಕಪ್ ಆರ್ಟಿಸ್ಟ್!
ಅಸ್ನೋಲ್‌ನ ನಿವಾಸಿಯಾಗಿರುವ 9 ವರ್ಷ ಅಬೀರ್ ಡೇಗೇ ಅಚ್ಚರಿ ಎನಿಸುವಂಥ ಮೇಕಪ್ ಮಾಡಲಾಗಿದ್ದು, ನೋಡಡಿದ ತಕ್ಷಣ ಅಯೋಧ್ಯೆಯ ರಾಮ ಮಂದಿರದ ಒಳಗಿರುವ ರಾಮಲಲ್ಲಾನ ಮೂರ್ತಿಯ ರೀತಿಯಂತೇ ಕಂಡಿದ್ದಾನೆ.
ನವದೆಹಲಿ (ಮಾ.20): ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿಯ ಒಳಗಿರುವ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ್ದು ಯಾರು ಎಂದರೆ, ಇಡೀ ಕನ್ನಡಿಗರು ಎದೆಯ ಮೇಲೆ ಕೈಯಿಟ್ಟಕೊಂಡು ಮೈಸೂರಿನ ಅರುಣ್ ಯೋಗಿರಾಜ್ ಹೆಸರನ್ನು ಹೇಳುತ್ತಾರೆ. ಆದರೆ, ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ಮೂರ್ತಿಯ ರೀತಿಯಲ್ಲೇ 9 ವರ್ಷದ ಬಾಲಕನಿಗೆ ಅದ್ಭುತವಾಗಿ ಆಶಿಶ್ ಕುಂಡು ಎನ್ನುವವರು ಮೇಕಪ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಅಸ್ನೋಲ್ ಮೂಲದ ಮೇಕಪ್ ಆರ್ಟಿಸ್ಟ್ ಆಗಿರುವ ಆಶಿಶ್ ಕುಂಡು ತಮ್ಮ ರಾಮಲಲ್ಲಾ ರೀತಿಯ ಮೇಕಪ್‌ಗಾಗಿಯೇ ಸಾಕಷ್ಟು ಸುದ್ದಿಯಾಗಿದ್ದಾರೆ. ಕಳೆದ ಮಂಗಳವಾರ ತನ್ನ ಪತ್ನಿಯ ಸಹಾಯದಿಂದ 9 ವರ್ಷದ ಬಾಲಕನಿಗೆ ರಾಮಲಲ್ಲಾ ವಿಗ್ರಹದ ರೀತಿಯಲ್ಲೇ ಮೇಕಪ್ ಮಾಡಿದ್ದಾರೆ. ಅವರ ಮೇಕಪ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ ಕೆಲವೊಂದು ಮೇಕಪ್ ಸಾಮಗ್ರಿಗಳನ್ನು ಸ್ವತಃ ಆಶಿಶ್ ಅವರೇ ಸಿದ್ದಪಡಿಸಿದ್ದರೆ, ಇನ್ನೂ ಕೆಲವನ್ನು ಅಸ್ನೋಲ್ ಮೋಹಿಸೇಲಾ ಪ್ರದೇಶದಿಂದ ಖರೀದಿ ಮಾಡಿದ್ದಾರೆ. ತಮ್ಮ ಊರಿನವರೇ ಆದ 9 ವರ್ಷದ ಬಾಲಕ ಅಬೀರ್ ಡೇಗೆ ಅವರು ರಾಮಲಲ್ಲಾ ಮೂರ್ತಿಯ ರೀತಿ ಮೇಕಪ್ ಮಾಡಿದ್ದಾರೆ. ಇವರ ಮೇಕಪ್ ಎಷ್ಟ ಅದ್ಭುತವಾಗಿದೆಯೆಂದರೆ, ಶ್ರೀರಾಮ ಮಂದಿರದ ಗರ್ಭಗೃಹದಲ್ಲಿರುವ ರಾಮಲಲ್ಲಾನ ರೀತಿಯಂತೆ ಅಬೀರ್ ಡೇ ಕಾಣುತ್ತಾನೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಮೂರ್ತಿ ಅನಾವರಣವಾದ ದಿನದಿಂದಲೂ ಆಶಿಶ್ ಕುಂಡು ಯಾರಿಗಾದರೂ ಇದೇ ರೀತಿಯ ಮೇಕಪ್ ಮಾಡಬೇಕು ಎಂದು ಬಯಸಿದ್ದರಂತೆ. ಆದರೆ, ಕೆಲವೊಂದು ಕಾರಣದಿಂದಾಗಿ ಇದು ಈವರೆಗೂ ಸಾಧ್ಯವಾಗಿರಲಿಲ್ಲ.
ಕೆಲವು ವಾರಗಳ ಹಿಂದ ಅಬೀರ್ ಡೇ ಅವರ ಪೋಷಕರನ್ನು ಭೇಟಿಯಾದ ಆಶಿಶ್ ಕುಂಡು, ಅವರ ಮಗನನ್ನು ಅಯೋಧ್ಯೆಯಲ್ಲಿರುವ ಶ್ರೀರಾಮನ ಮೂರ್ತಿಯ ರೀತಿ ಮೇಕಪ್ ಮಾಡುವುದಾಗಿ ಹೇಳಿದ್ದಾರೆ. ಆಶಿಶ್ ಇದನ್ನು ಹೇಳುತ್ತಿದ್ದಂತೆ ಅಬೀರ್ ಅವರ ಪೋಷಕರು ಕೂಡ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.
ಆಶಿಶ್ ಮೇಕಪ್ ಆರ್ಟಿಸ್ಟ್ ಆಗಿದ್ದರೆ, ಅವರ ಪತ್ನಿ ರೂಬಿ, ಅಸ್ನೋಲ್‌ನಲ್ಲಿ ತಮ್ಮದೇ ಆದ ಬ್ಯೂಟಿ ಪಾರ್ಲರ್‌ಅನ್ನು ಹೊಂದಿದ್ದಾರೆ. ಬೆಳಗಿನ ಹೊತ್ತು ಇವರಿಬ್ಬರು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿದರೆ, ರಾತ್ರಿಯ ವೇಳೆ ಅಬೀರ್ ಡೇಗೆ ರಾಮಲಲ್ಲಾ ಮೂರ್ತಿಯ ರೀತಿ ಮೇಕಪ್ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಅಂದಾಜು ಒಂದು ತಿಂಗಳ ಕೆಲಸದ ಬಳಿಕ, ಆಶಿಶ್ ಹಾಗೂ ರೂಬಿ, ಅಬೀರ್‌ಗೆ ಬೇಕಾದ ಕಾಸ್ಟ್ಯೂಮ್, ಆಭರಣ ಹಾಗೂ ಮೇಕಪ್‌ಅನ್ನು ಸಿದ್ದಮಾಡಿದ್ದರು. ಬೆಂಡುಗಳನ್ನು ಬಳಸಿ ಆಭರಣಗಳನ್ನು ಸಿದ್ದಮಾಡಲಾಗಿತ್ತು.
ಆಬೀರ್ ಡೇ ರಾಮಲಲ್ಲಾ ಮೂರ್ತಿಯ ರೀತಿ ಬಟ್ಟೆ ಹಾಕಿಕೊಂಡು ನೀಡಿರುವ ಪೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಯೋಧ್ಯೆಯಲ್ಲಿರುವ ಶ್ರೀರಾಮ, ಜೀವಂತ ರೂಪದಲ್ಲಿ ಬಂದಿರುವಂತೆ ಕಾಣುತ್ತಿದೆ ಎನ್ನುವ ಮೂಲಕ ಆಶಿಶ್ ಹಾಗೂ ರೂಬಿ ದಂಪತಿಯ ಕೆಲಸವನ್ನು ಶ್ಲಾಘಿಸಿದ್ದಾರೆ.