ನವದೆಹಲಿ(ಏ.27): ಕೊರೋನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಮತ್ತೊಮ್ಮೆ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿವೆ. ಭಾನುವಾರ ಸಂಜೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,975 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 26,917ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದು ಒಂದು ದಿನದ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚಿನ ಕೊರೋನಾ ವೈರಸ್‌ ಪ್ರಕರಣಗಳಾಗಿವೆ. ಇದೇ ವೇಳೆ ದೇಶದೆಲ್ಲೆಡೆ 47 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 826ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಶನಿವಾರ 1720 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದು ಈವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು.

ಬಯೋಕಾನ್‌ನಲ್ಲಿ ರೆಡಿಯಾಗ್ತಿದೆ ಮಹಾಮಾರಿ ಕೊರೋನಾಗೆ ಲಸಿಕೆ!

ಇನ್ನೊಂದೆಡೆ ಪಿಟಿಐ ಸುದ್ದಿಸಂಸ್ಥೆ ಪ್ರಕಾರ, ಭಾನುವಾರ ಒಂದೇ ದಿನ 1375 ಹೊಸ ಕೊರೋನಾ ವೈರಸ್‌ ಪ್ರಕರಣಗಳು, 50 ಸಾವುಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 27451 ಹಾಗೂ ಮೃತರ ಸಂಖ್ಯೆ 873ಕ್ಕೆ ಏರಿದೆ. ಆರೋಗ್ಯ ಇಲಾಖೆ ಶನಿವಾರ ಸಂಜೆಯಿಂದ ಭಾನುವಾರ ಸಂಜೆವರೆಗಿನ ಮಾಹಿತಿ ನೀಡಿದರೆ, ಪಿಟಿಐ ಸುದ್ದಿಸಂಸ್ಥೆ ರಾಜ್ಯಗಳು ಆಯಾ ದಿನ ನೀಡುವ ಅಂಕಿ-ಸಂಖ್ಯೆ ಆಧರಿಸಿ ವರದಿ ಮಾಡಿದೆ. ಹೀಗಾಗಿ ಪಿಟಿಐ ನೀಡಿರುವ ಒಟ್ಟು ಸೋಂಕು, ಸಾವಿನ ಸಂಖ್ಯೆಗಳು ಆರೋಗ್ಯ ಇಲಾಖೆಗಿಂತ ಹೆಚ್ಚಿವೆ.

ಪ್ಲಾಸ್ಮಾ ಥೆರಪಿ ಪಡೆದ ದೇಶದ ಮೊದಲ ರೋಗಿ ಗುಣಮಖ, ಆಸ್ಪತ್ರೆಯಿಂದ ಬಿಡುಗಡೆ!

ಮಹಾರಾಷ್ಟ್ರದಲ್ಲಿ 8000ಕ್ಕೇರಿಕೆ:

ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ವರದಿಯಾಗುತ್ತಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 8000ದ ಗಡಿ ಮುಟ್ಟಿದೆ. ಭಾನುವಾರ ಹೊಸದಾಗಿ 440 ಪ್ರಕಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,068ಕ್ಕೇರಿದೆ. ಭಾನುವಾರ 19 ಮಂದಿ ಸಾವಿಗೀಡಾಗಿದ್ದು ಒಟ್ಟು ಮೃತರ ಸಂಖ್ಯೆ 342ಕ್ಕೇರಿದೆ. ಇವೆಲ್ಲದರ ಮಧ್ಯೆ ಆಶಾದಾಯಕ ಬೆಳವಣಿಗೆಯೆಂದರೆ ದೇಶದಲ್ಲಿ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 6 ಸಾವಿರ ಗಡಿ ದಾಟಿದೆ. ತಮಿಳುನಾಡಿನಲ್ಲಿ ಒಂದೇ ದಿನ 60 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 1000 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.