ಪ್ಲಾಸ್ಮಾ ಥೆರಪಿ ಪಡೆದ ದೇಶದ ಮೊದಲ ರೋಗಿ ಗುಣಮಖ, ಆಸ್ಪತ್ರೆಯಿಂದ ಬಿಡುಗಡೆ!
ಕೊರೋನಾ ತಡೆಗೆ ಪ್ಲಾಸ್ಮಾ ಥೆರಪಿ ಹೊಸ ಆಶಾಕಿರಣ| ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಪಡೆದ ದೇಶದ ಮೊದಲ ರೋಗಿ ಗುಣಮಖ, ಆಸ್ಪತ್ರೆಯಿಂದ ಬಿಡುಗಡೆ| ಬೇರೆ ಚಿಕಿತ್ಸೆ ಫಲ ನೀಡದ್ದರಿಂದ ಪ್ಲಾಸ್ಮಾ ಥೆರಪಿ. ಇದರಲ್ಲೇ ರೋಗಿ ಗುಣಮುಖ
ನವದೆಹಲಿ(ಏ.27): ಔಷಧವಿಲ್ಲದ ಕಾರಣಕ್ಕೆ ವಿಶ್ವಾದ್ಯಂತ ಕೊರೋನಾ ವೈರಸ್‌ಗೆ 2 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿರುವಾಗಲೇ, ದೇಶದಲ್ಲಿ ಆ ವೈರಾಣು ನಿಗ್ರಹಕ್ಕೆ ಹೊಸ ಆಶಾಕಿರಣವೊಂದು ಗೋಚರಿಸಿದೆ. ‘ಪ್ಲಾಸ್ಮಾ ಥೆರಪಿ’ ಮೂಲಕ ಕೊರೋನಾ ಸೋಂಕಿತರನ್ನು ಗುಣಪಡಿಸುವ ಚಿಕಿತ್ಸೆ ದೇಶದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿದೆ. ಈ ವಿಧಾನದಡಿ ಚಿಕಿತ್ಸೆ ಪಡೆದ ದೇಶದ ಪ್ರಥಮ ವ್ಯಕ್ತಿಯೊಬ್ಬರು ದೆಹಲಿಯಲ್ಲಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಹೀಗಾಗಿ ಕೊರೋನಾಗೆ ಪ್ಲಾಸ್ಮಾ ಥೆರಪಿ ಪ್ರಬಲ ಚಿಕಿತ್ಸೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
49 ವರ್ಷದ ಈ ವ್ಯಕ್ತಿಗೆ ಏ.4ರಂದು ಸೋಂಕು ಪತ್ತೆಯಾಗಿತ್ತು. ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ದಿನೇ ದಿನೇ ಆರೋಗ್ಯ ಹದೆಗೆಡುತ್ತಾ ಹೋಗಿತ್ತು. ಜೊತೆಗೆ ಅವರಲ್ಲಿ ನ್ಯುಮೋನಿಯಾ ಮತ್ತು ಟೈಪ್ 1 ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅಂತಿಮವಾಗಿ ಏ.8ರಂದು ರೋಗಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ವೈದ್ಯರು ನೀಡಿದ ಯಾವುದೇ ಚಿಕಿತ್ಸೆ ಫಲ ಕೊಡದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೇ ಪ್ಲಾಸ್ಮಾ ಥೆರಪಿ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದರು.
ಪ್ಲಾಸ್ಮಾ ಥೆರಪಿಗೆ ದಿಲ್ಲಿಯಲ್ಲಿ ಆರಂಭದಲ್ಲೇ ಯಶಸ್ಸು!
ಈ ಮನವಿಗೆ ಕೇಂದ್ರ ಸರ್ಕಾರ ಕೂಡ ಸಮ್ಮತಿಸಿದ್ದ ಹಿನ್ನೆಲೆಯಲ್ಲಿ ಏ.14ರ ರಾತ್ರಿಯಿಂದ ರೋಗಿಗೆ ಸಾಮಾನ್ಯ ಚಿಕಿತ್ಸೆ ಜೊತೆಗೆ ಪ್ಲಾಸ್ಮಾ ಥೆರಪಿಯನ್ನೂ ಆರಂಭಿಸಲಾಯಿತು. ಈ ಚಿಕಿತ್ಸೆ ಬಳಿಕ ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು, ಏ.18ರಂದು ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದು ಹಾಕಲಾಯಿತು. ನಂತರದ ದಿನಗಳಲ್ಲಿ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಭಾನುವಾರ ಅವರನ್ನು ಮನೆಗೆ ಕಳುಹಿಸಿಕೊಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪ್ಲಾಸ್ಮಾ ಥೆರಪಿ?
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಆ್ಯಂಟಿಬಾಡಿ (ಪ್ರತಿಕಾಯ) ಉತ್ಪತ್ತಿಯಾಗಿರುತ್ತವೆ. ಇಂಥ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣವನ್ನು ತೆಗೆದು, ಮತ್ತೊಬ್ಬ ರೋಗಿಗೆ ನೀಡುವುದೇ ಪ್ಲಾಸ್ಮಾ ಥೆರಪಿ. ಈ ಮೂಲಕ ರೋಗಿಯ ದೇಹಕ್ಕೆ ಕೊರೋನಾ ವಿರುದ್ಧ ಸೆಣಸಾಡುವ ಶಕ್ತಿಯನ್ನು ಒದಗಿಸಿಕೊಡಲಾಗುತ್ತದೆ.
ರಾಜ್ಯದಲ್ಲೂ ಶೀಘ್ರ ಪ್ಲಾಸ್ಮಾ ಥೆರಪಿ: ಕೇಂದ್ರ ಸರ್ಕಾರದ ಅನುಮತಿ!
ಯಾರು ಪ್ಲಾಸ್ಮಾ ಕೊಡಬಹುದು?
ಕೊರೋನಾದಿಂದ ಚೇತರಿಸಿಕೊಂಡು ನಂತರದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ 14 ದಿನಗಳ ಬಳಿಕ ವ್ಯಕ್ತಿಯೊಬ್ಬರು ಪ್ಲಾಸ್ಮಾ ದಾನ ಮಾಡಬಹುದು. ಒಬ್ಬ ವ್ಯಕ್ತಿ ನೀಡುವ ಪ್ಲಾಸ್ಮಾವನ್ನು ಇಬ್ಬರು ರೋಗಿಗಳ ಚಿಕಿತ್ಸೆಗೆ ಬಳಸಬಹುದು.