* ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ* ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಅರೆಸ್ಟ್‌* ಕುಕೃತ್ಯ ಎಸಗಿದವರಲ್ಲಿ ಮೂವರು ಅಪ್ರಾಪ್ತರು

ಹೈದರಾಬಾದ್(ಜೂ.04): ಕಳೆದ ವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಹುದ್ದೀನ್ ಮಲಿಕ್ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದ್ದು, ಎರಡನೇ ಆರೋಪಿ ಒಮರ್ ಖಾನ್ ನನ್ನು ಇಂದು ಬಂಧಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಶ್ಚಿಮ ವಲಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜೋಯಲ್ ಡೇವಿಸ್, ಪ್ರಕರಣದಲ್ಲಿ 5 ಜನರನ್ನು ಗುರುತಿಸಲಾಗಿದ್ದು, 3 ಮಂದಿ ಅಪ್ರಾಪ್ತರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ 5 ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. 

ಡಿಸಿಪಿ ಜೋಯಲ್ ಡೇವಿಸ್ ಮಾತನಾಡಿ, 'ಸಂತ್ರಸ್ತೆಗೆ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆಕೆ ಒಬ್ಬ ಆರೋಪಿಯನ್ನು ಮಾತ್ರ ಹೆಸರಿಸಲು ಸಾಧ್ಯವಾಯಿತು. ಇದರ ನಂತರ, ಎಲ್ಲರನ್ನೂ ಹಿಡಿಯಲು ತಕ್ಷಣ ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಯಿತು.' ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

17 ವರ್ಷದ ಸಂತ್ರಸ್ತೆ ಮೇ 28 ರಂದು ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಳು. ಅದೇ ಸಮಯದಲ್ಲಿ ಹೈದರಾಬಾದ್ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸಂತ್ರಸ್ತೆ ಶಂಕಿತ ಆರೋಪಿಗಳೊಂದಿಗೆ ಪಬ್‌ನ ಹೊರಗೆ ನಿಂತಿರುವುದನ್ನು ಕಾಣಬಹುದು. ಆರೋಪಿ ಮೊದಲು ಸಂತ್ರಸ್ತೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾನೆ. ನಂತರ ನಿಲ್ಲಿಸಿದ್ದ ಕಾರಿನೊಳಗೆ ಆಕೆಯ ಮೇಲೆ ಹಲ್ಲೆ ನಡೆಸಿ ನಂತರ ಎಲ್ಲರೂ ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಇತರ ಆರೋಪಿಗಳು ಕಾರಿನ ಹೊರಗೆ ಕಾವಲು ಕಾಯುತ್ತಿದ್ದರು.

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು 5 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 323 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 9 ಮತ್ತು 10 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತೆಲಂಗಾಣದಲ್ಲಿ ಸಾಮೂಹಿಕ ಅತ್ಯಾಚಾರದ ಸುದ್ದಿ ಬೆಳಕಿಗೆ ಬಂದ ನಂತರ ಸಂಚಲನ ಉಂಟಾಗಿತ್ತು. ರಾಜ್ಯ ಸರ್ಕಾರದ ಸಚಿವ ಕೆ.ಟಿ.ರಾಮರಾವ್ ಅವರು ಶುಕ್ರವಾರ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.