ಲಖನೌ(ಡಿ.20): ಬಾಬರಿ ಮಸೀದಿಗೆ ಬದಲಿಯಾಗಿ ಅಯೋಧ್ಯೆಯ ಧನ್ನೀಪುರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. 5 ಎಕರೆ ವಿಸ್ತೀರ್ಣದ ಹಚ್ಚಹಸಿರಿನ ಪ್ರದೇಶದ ನಡುವೆ ಗಾಜಿನ ಗುಮ್ಮಟ ಹೊಂದಿರುವ ದುಂಡಾಕಾರದ ಮಸೀದಿ, ಅದರ ಹಿಂದೆ ಆಸ್ಪತ್ರೆ ಇರುವ ಚಿತ್ರ ನೀಲನಕ್ಷೆಯಲ್ಲಿದೆ.

ಮಸೀದಿ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ಜ.26ರ ಗಣರಾಜ್ಯೋತ್ಸವದಂದು ಚಾಲನೆ ನೀಡಲಾಗುವುದು. ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ ಅದಾಗಿರುವ ಹಿನ್ನೆಲೆಯಲ್ಲಿ ಜ.26ರಂದು ಕಾಮಗಾರಿಗೆ ಚಾಲನೆ ನೀಡಲು ಮಸೀದಿ ನಿರ್ಮಾಣ ಹೊಣೆ ಹೊತ್ತಿರುವ ಇಂಡೋ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ನಿರ್ಧರಿಸಿದೆ.

ದೇಶದಲ್ಲಿರುವ ಉಳಿದೆಲ್ಲಾ ಮಸೀದಿಗಳಿಗಿಂತ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ವಿಭಿನ್ನವಾಗಿದ್ದು, ಆಕರ್ಷಣೀಯವಾಗಿದೆ. ಅತ್ಯಾಧುನಿಕ ಶೈಲಿಯಲ್ಲಿದೆ. ಆಸ್ಪತ್ರೆ ಕಟ್ಟಡ ಸಹ ಗಮನಸೆಳೆಯುವಂತಿದೆ. ಮಸೀದಿಯಲ್ಲಿ 2 ಸಾವಿರ ಮಂದಿ ಕೂರಬಹುದಾಗಿದೆ.

ಇಂಡೋ ಇಸ್ಲಾಮಿಕ್‌ ಕೇಂದ್ರ, ಸಮುದಾಯ ಅಡುಗೆ ಕೋಣೆ ಹಾಗೂ ಮ್ಯೂಸಿಯಂ ಅನ್ನು ನಿರ್ಮಾಣ ಮಾಡಲು ಫೌಂಡೇಶನ್‌ ಉದ್ದೇಶಿಸಿದೆ. ಲಖನೌ ಮೂಲದ ವಾಸ್ತು ಶಿಲ್ಪಿ ಪ್ರೊ

ಎಸ್‌.ಎಂ. ಅಖ್ತರ್‌ ಅವರು ಈ ಮಸೀದಿಯನ್ನು ವಿನ್ಯಾಸಗೊಳಿಸಿದ್ದಾರೆ. ಈ ಮಸೀದಿ ಬಾಬ್ರಿ ಮಸೀದಿಯ ವಿನ್ಯಾಸವನ್ನು ಹೊಂದಿಲ್ಲ. ಅಲ್ಲದೆ ಉದ್ದೇಶಿತ ಮಸೀದಿಗೆ ಯಾವುದೇ ಸಾಮ್ರಾಟ ಅಥವಾ ರಾಜನ ಹೆಸರನ್ನು ಇಡುವುದಿಲ್ಲ ಎಂದು ಈಗಾಗಲೇ ಟ್ರಸ್ಟ್‌ ತಿಳಿಸಿದೆ. ಎರಡನೇ ಹಂತದ ಕಾಮಗಾರಿ ವೇಳೆ ಆಸ್ಪತ್ರೆಯನ್ನು ವಿಸ್ತರಿಸುವ ಉದ್ದೇಶವನ್ನೂ ಟ್ರಸ್ಟ್‌ ಹೊಂದಿದೆ.

ಅಯೋಧ್ಯೆಯ ರಾಮಜನ್ಮಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಹಂಚಿಕೆ ಮಾಡಿದ್ದ ಸುಪ್ರೀಂಕೋರ್ಟ್‌, ಅಯೋಧ್ಯೆ ಹೊರವಲಯದಲ್ಲಿ 5 ಎಕರೆ ಜಮೀನನ್ನು ಮಸೀದಿ ನಿರ್ಮಾಣಕ್ಕೆ ನೀಡಿ 2019ರಲ್ಲಿ ತೀರ್ಪು ನೀಡಿತ್ತು. ಅಯೋಧ್ಯೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದರು.

ಮಸೀದಿ ಸಮುಚ್ಛಯದಲ್ಲೇ ಏನೇನಿರುತ್ತೆ?

* 2000 ಜನರು ಕೂರಬಹುದಾದ ಮಸೀದಿ

* ಇಂಡೋ ಇಸ್ಲಾಮಿಕ್‌ ಕೇಂದ್ರ

* ಸಮುದಾಯ ಅಡುಗೆ ಕೋಣೆ

* ಮ್ಯೂಸಿಯಂ

* ಸೂಪರ್‌ ಸ್ಪೆಷ್ಟಾಲಿಟಿ ಆಸ್ಪತ್ರೆ