ರಾಷ್ಟ್ರರಾಜಧಾನಿಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ಮೂರು ಗಂಟೆ ಗುಡುಗು ಸಹಿತ ಭಾರಿ ಮಳೆಯಿಂದ ಅಪಾಯದ ಸಾಧ್ಯತೆಯೂ ಇದೆ. ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ದೆಹಲಿ (ಅ.30) ಅರ್ನಾಬ್ ಚಂಡ ಮಾರುತದಿಂದ ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ಭಾರಿ ಮಳೆಗೆ ಅನಾಹುತಗಳು ಸಂಭವಿಸಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಮೂರು ಗಂಟೆ ದೆಹಲಿಯಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯುಭಾರ ಕುಸಿತ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹಮಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

40 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದಿದೆ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಹಾಗೂ ಗುರುಗ್ರಾಮದ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಆರಂಭಿಕ ಹಂತದಲ್ಲಿ ಸಾಧಾರಣ ಮಳೆಯಾಗಲಿದ್ದು, ಒಂದೇ ಸಮನೆ ಮಳೆ ಪ್ರಮಾಣ ಏರಿಕೆಯಾಗಲಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ದೆಹಲಿ ರಸ್ತೆಗಳು, ತಗ್ಗು ಪ್ರದೇಶಗಳಿಗೆ ಆತಂಕ

ಭಾರಿ ಮಳೆಯಿಂದ ದೆಹಲಿ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಇದರಿಂದ ಟ್ರಾಫಿಕ್ ಜಾಮ್ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಲಿದೆ. ಹೀಗಾಗಿ ವಾಹನ ಸವಾರರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿ ಪೊಲೀಸರು ಸೂಚಿಸಿದ್ದಾರೆ. ನೀರು ನಿಂತ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವಾಗ ಅತೀವ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಮರಗಳ ಕೆಳಗೆ, ಕಂಪೌಂಡ್ ಪಕ್ಕದಲ್ಲಿ ನಿಲ್ಲದಂತೆ ಸೂಚನೆ

ಸಿಡಿಲು ಮತ್ತು ಬಿರುಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಬೃಹತ್ ಮರಗಳು, ವಿದ್ಯುತ್ ಕಂಬಗಳು ಹಾಗೂ ಹಳೆಯ ಕಟ್ಟಡಗಳ ಕೆಳಗೆ ನಿಲ್ಲದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ, ಮನೆಗಳ ವಿದ್ಯುತ್ ಉಪಕರಣಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಮತ್ತು ಜಲಾವೃತ ಪ್ರದೇಶಗಳಿಂದ ದೂರವಿರಲು ಸೂಚಿಸಲಾಗಿದೆ.

ಮುಂದಿನ ಕೆಲವು ಗಂಟೆಗಳಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (IGI Airport) ಹೊರಡುವ ಹಾಗೂ ಆಗಮಿಸುವ ವಿಮಾನಗಳ ಸಂಚಾರದಲ್ಲೂ ವಿಳಂಬ ಉಂಟಾಗುವ ಸಾಧ್ಯತೆಯಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನಗಳ ವೇಳಾಪಟ್ಟಿಯನ್ನು ಆಯಾ ಸಂಸ್ಥೆಗಳ ಮೂಲಕ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.