ಮುಂಬೈ (ಆ. 18) ಶಿವ ಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ವೈದ್ಯರ ಕುರಿತಾಗಿ ನೀಡಿದ್ದ ಹೇಳಿಕೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೊರೋನಾ ವಿರುದ್ಧದ ಹೋರಾಟ ಉಲ್ಲೇಖ ಮಾಡುತ್ತ ಮಾತನಾಡಿದ್ದ ರಾವತ್ ಕಾಂಪೌಂಡರ್ ಗಳು ವೈದ್ಯರಿಗಿಂತ ಬೆಸ್ಟ್ ಎಂದು ಹೇಳಿಕೆ ನೀಡಿದ್ದರು.

ವೈದ್ಯರಿಗೆ ಏನೂ ಗೊತ್ತಿಲ್ಲ. ಅವರಿಗಿಂತಲೂ ಕಾಂಪೌಂಡರ್ ಎಷ್ಟು ಉತ್ತಮ. ನಾನು ಯಾವಾಗಲೂ ಕಾಂಪೌಂಡರ್ ನಿಂದಲೇ ಔಷಧಿಗಳನ್ನು ತರಿಸಿಕೊಳ್ಳುತ್ತೇನೆ. ವೈದ್ಯರಿಂದ ಎಂದಿಗೂ ಔಷಧಿ ಪಡೆದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ನಿರ್ಲಕ್ಷ್ಯದಿಂದಾಗಿ ಇಂದು ನಾವು ಕೊರೋನಾ ಪರಿಸ್ಥಿತಿ ಎದುರಿಸುವಂತಾಗಿದೆ ಎಂದೆಲ್ಲಾ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು

ರಾವತ್ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರ ಹೇಳಿಕೆ ಸಂಬಂಧ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೂ ಪತ್ರ ಬರೆದಿರುವ ಮಂಡಳಿ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೃತ್ತಿ ಅಪಮಾನಿಸಿದ ಅವರು ಸಂವಿಧಾನಾತ್ಮಕ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು  ಹೇಳಿದೆ. 

ಈ ನಡುವೆ ಉಲ್ಟಾ ಹೊಡೆದಿರುವ ರಾವತ್, ನಾನು ವೈದ್ಯರ ಕುರಿತಾಗಿ ಮಾತಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ. ಕೊರೋನಾ ಸಾಂಕ್ರಾಮಿಕದಂತಹ ಸಮಯದಲ್ಲಿ ವೈದ್ಯರು, ನರ್ಸ್ ಗಳು ಹಾಗೂ ವೈದ್ಯ ಸಿಬ್ಬಂದಿ ಕೊಡುಗೆ ಅಪಾರ. ವಿಶ್ವ ಆರೋಗ್ಯ ಸಂಸ್ಥೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರೆ ಇಂದು ಇಡೀ ವಿಶ್ವ ಕೊರೋನಾದಿಂದ ಬಳಲುವಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದನ್ನು ತಿರುಚಲಾಗಿದೆ ಎಂದಿದ್ದಾರೆ.