ನವದೆಹಲಿ(ಜೂ.29): ದೇಶಾದ್ಯಂತ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೊರೋನಾ ವೈರಸ್‌ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿರುವವರಿಗಾಗಿ ಮನೆಯಲ್ಲೇ ಸ್ವಯಂ ಟೆಸ್ಟ್‌ ಮಾಡಿಕೊಳ್ಳುವ ಕಿಟ್‌ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೆಹಲಿ ಐಐಟಿ ಹಾಗೂ ರಾಷ್ಟ್ರೀಯ ರಾಸಾಯನಿಕ ಲ್ಯಾಬೋರೇಟರಿ (ಎನ್‌ಸಿಎಲ್‌) ಇದನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಸಂಭವವಿದೆ.

SSLC ಪರೀಕ್ಷೆ ಬರೆದಿದ್ದ ಮತ್ತಿಬ್ಬರು ಮಕ್ಕಳಿಗೆ ಕೊರೋನಾ ಸೋಂಕು!

ಐಐಟಿ ಜತೆಗೂಡಿರುವ ಎನ್‌ಸಿಎಲ್‌ ಎಂಬುದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಅಧೀನದಲ್ಲಿರುವ ಸಂಸ್ಥೆ. ಈ ಎರಡೂ ಸಂಸ್ಥೆಗಳ ಪ್ರಯೋಗಕ್ಕೆ ಮೈಕ್ರೋಸಾಫ್ಟ್‌ ಕಂಪನಿಯ ಭಾರತೀಯ ಘಟಕ ನೆರವು ಒದಗಿಸಿದೆ. ಒಂದು ತಿಂಗಳಲ್ಲಿ ಈ ಕಿಟ್‌ ಸಿದ್ಧವಾಗುವ ನಿರೀಕ್ಷೆ ಇದೆ.

ಎಲಿಸಾ (ಎಂಜೈಮ್‌ ಲಿಂಕ್‌್ಡ ಇಮ್ಯುನೋಅಸ್ಸೇ) ಆಧರಿತ ರಕ್ತ ಪರೀಕ್ಷೆ ಕಿಟ್‌ ಅನ್ನು ಈ ಸಂಸ್ಥೆಗಳು ಅಭಿವೃದ್ಧಿಪಡಿಸಲು ಮುಂದಾಗಿವೆ. ಈ ಕಿಟ್‌ ಮೂಲಕ ಅತ್ಯಂತ ತ್ವರಿತಗತಿಯಲ್ಲಿ ಫಲಿತಾಂಶ ದೊರೆಯಲಿದೆ. ಈಗ ಪರೀಕ್ಷೆಗೆಂದು ನಿಗದಿಯಾಗಿರುವ ಶುಲ್ಕಕ್ಕಿಂತ ಕಡಿಮೆ ದರಕ್ಕೆ ಈ ಕಿಟ್‌ ಸಿಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಕರಿಲ್ಲ!

ಸದ್ಯ ಕೊರೋನಾಗೆ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಅನ್ನು ನಡೆಸಲಾಗುತ್ತಿದೆ. ಆದರೆ ಇದನ್ನು ಪ್ರಯೋಗಾಲಯದಲ್ಲೇ ಮಾಡಬೇಕು. ಹಲವು ತಾಸು ಸಮಯ ಹಿಡಿಯುತ್ತದೆ. ಮಾದರಿ ಸಂಗ್ರಹಿಸುವಾಗ, ಅದನ್ನು ನಿರ್ವಹಿಸುವಾಗ ಅಪಾಯ ಕಟ್ಟಿಟ್ಟಬುತ್ತಿ ಎಂಬ ವಾತಾವರಣವಿದೆ ಎಂದು ದೆಹಲಿ ಐಐಟಿ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಅನುರಾಗ್‌ ಎಸ್‌. ರಾಥೋರ್‌ ತಿಳಿಸಿದ್ದಾರೆ.