ಸ್ವಾತಂತ್ರ್ಯವೂ ಬೇಕು, ಪತಿಯ ಜೊತೆಗೆ ಇರುವುದು ಕಷ್ಟವಾಗಿದೆ ಎಂದ ಮಹಿಳೆಯೊಬ್ಬರಿಗೆ ಪಾಠ ಮಾಡಿರುವ ಕೋರ್ಟ್ ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರಲಾರದು ಎನ್ನುವ ಮೂಲಕ ಹೇಳಿದ್ದೇನು ಕೇಳಿ..
ಪತಿ ಅಥವಾ ಪತ್ನಿ ಇಬ್ಬರೂ ದಾಂಪತ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ವಿವಾಹದ ಅರ್ಥವೇ ಒಗ್ಗಟ್ಟು ಮತ್ತು ಸಹಕಾರವಾಗಿದೆ. ವಿವಾಹ ಸಂಬಂಧದಲ್ಲಿ ಪತಿ ಅಥವಾ ಪತ್ನಿ ಸಂಪೂರ್ಣವಾಗಿ ಸ್ವತಂತ್ರವಾಗಿ ಬದುಕಲು ಬಯಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ವಿವಾಹ ಮತ್ತು ಸ್ವಾತಂತ್ರ್ಯ ಒಟ್ಟಿಗೇ ಇರಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಒಬ್ಬ ವ್ಯಕ್ತಿ ಸ್ವತಂತ್ರವಾಗಿರಲು ಬಯಸಿದರೆ, ಅಂಥವರು ಮದುವೆಯಾಗಬಾರದು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠವು ಹೇಳಿದೆ.
ಮದುವೆ ಎಂದರೆ ಎರಡು ಆತ್ಮಗಳು ಮತ್ತು ಇಬ್ಬರು ವ್ಯಕ್ತಿಗಳ ಒಟ್ಟಿಗೆ ಸೇರುವುದು. ಮದುವೆಯಲ್ಲಿ ಪತಿ ಮತ್ತು ಪತ್ನಿ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಪರಸ್ಪರ ಅವಲಂಬಿತರಾಗಿರುವುದು ಸಹಜ. ಯಾವುದೇ ಪತಿ ಅಥವಾ ಪತ್ನಿ ನಾನು ನನ್ನ ಸಂಗಾತಿಯ ಮೇಲೆ ಅವಲಂಬಿತನಾಗಲು ಬಯಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮದುವೆಯ ಅರ್ಥ ಪರಸ್ಪರ ಸಹಕಾರ ಮತ್ತು ಒಗ್ಗಟ್ಟು. ಆದ್ದರಿಂದ ಮದುವೆಯೂ ಬೇಕು, ಸ್ವಾತಂತ್ರ್ಯವೂ ಬೇಕು ಎಂದು ಹೇಳುವುದು ಸರಿಯಲ್ಲ. ಇದು ಭಾವನಾತ್ಮಕವಾಗಿಯೂ ಅವಲಂಬಿತ ಆಗಿರುವ ಕಾರಣ ಎಲ್ಲವೂ ಒಟ್ಟಿಗೇ ಆಗಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ದಂಪತಿಯ ನಡುವಿನ ಜಗಳ ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳ ಕುರಿತಾದ ಕೇಸಿನ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ನಾಗರತ್ನ ಅವರು. ಮುರಿದ ಕುಟುಂಬದ ಹೊರೆಯನ್ನು ಚಿಕ್ಕ ಮಕ್ಕಳು ಏಕೆ ಹೊರಬೇಕು ಎಂದು ದಂಪತಿಯನ್ನು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಪತಿ ಸಿಂಗಪುರದಲ್ಲಿ, ಪತ್ನಿ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. ಪತಿಯ ವರ್ತನೆಯಿಂದಾಗಿ ಸಿಂಗಪುರಕ್ಕೆ ಹಿಂತಿರುಗುವುದು ಸಾಧ್ಯವಿಲ್ಲ ಎಂದು ಪತ್ನಿ ಆರೋಪಿಸಿದರು. ಯಾವುದೇ ಆರ್ಥಿಕ ಸಹಾಯವಿಲ್ಲದೆ ಮಕ್ಕಳನ್ನು ಬೆಳೆಸುತ್ತಿರುವುದಾಗಿ ಆಕೆ ಹೇಳಿದರು. ಮತ್ತೊಂದೆಡೆ, ಅವರಿಬ್ಬರಿಗೂ ಸಿಂಗಪುರದಲ್ಲಿ ಉತ್ತಮ ಉದ್ಯೋಗಗಳಿವೆ, ಆದರೆ ಪತ್ನಿ ಮಕ್ಕಳೊಂದಿಗೆ ಹಿಂತಿರುಗಲು ನಿರಾಕರಿಸುತ್ತಿದ್ದಾಳೆ ಎಂದು ಪತಿ ಹೇಳಿದರು. ವಿಚಾರಣೆಯ ಸಮಯದಲ್ಲಿ, ಪತ್ನಿ ಯಾರನ್ನೂ ಅವಲಂಬಿಸಲು ಬಯಸುವುದಿಲ್ಲ ಎಂದು ಹೇಳಿದರು. ಇದರ ಬಗ್ಗೆ ನ್ಯಾಯಮೂರ್ತಿ ನಾಗರತ್ನ ಅವರು, ನೀವು ಯಾರನ್ನೂ ಅವಲಂಬಿಸಲು ಬಯಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ನೀವು ಏಕೆ ಮದುವೆಯಾದಿರಿ? ಪತ್ನಿ ಯಾವಾಗಲೂ ತನ್ನ ಗಂಡನ ಮೇಲೆ ಭಾವನಾತ್ಮಕವಾಗಿ ಅವಲಂಬಿತರಾಗಿರುತ್ತಾಳೆ ಎಂದರು.
ಇದೇ ವೇಳೆ ಕೋರ್ಟ್ ದಂಪತಿಗೆ ಹೊಂದಾಣಿಕೆಯ ಪಾಠವನ್ನು ಮಾಡಿದೆ. ದಂಪತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳುವಂತೆ ನ್ಯಾಯಮೂರ್ತಿಗಳು ತಿಳಿಸಿದರು. ನ್ಯಾಯಾಲಯವು ಪತಿಗೆ ಅವರ ಜನ್ಮದಿನದಂದು ಮಕ್ಕಳೊಂದಿಗೆ ಸಮಯ ಕಳೆಯಲು ಮತ್ತು ವಾರಾಂತ್ಯದಲ್ಲಿ ಮಧ್ಯಂತರ ಕಸ್ಟಡಿಯನ್ನು ಪಡೆಯಲು ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
