ಚಿತ್ರನಟರೇ ದೇವರೆಂದು ನಂಬುವ ದೊಡ್ಡ ವರ್ಗವೇ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ಜನರು ಹಾದಿ ತಪ್ಪಿದ್ದರಿಂದ ಒಂದೇ ವರ್ಷದಲ್ಲಿ 20 ಸಾವಿರ ಕೋಟಿ ಕಳಕೊಂಡಿದ್ದಾರೆ 45 ಕೋಟಿ ಜನರು! ಏನಿದು ವಿಷ್ಯ?
ಆನ್‌ಲೈನ್ ಗೇಮಿಂಗ್ ಮೂಲಕ ಪ್ರತಿ ವರ್ಷ ಏನಿಲ್ಲವೆಂದರೂ 45 ಕೋಟಿ ಜನರು 20 ಸಾವಿರ ಕೋಟಿಗೂ ಅಧಿಕ ಹಣವನ್ನು ಕಳೆದುಕೊಳ್ಳುತ್ತಿರುವ ಆತಂಕದ ವಿಷಯ ಇದೀಗ ರಿವೀಲ್ ಆಗಿದೆ. ಒಂದಿಷ್ಟು ಲಕ್ಷದ ದುಡ್ಡಿನ ಆಸೆಗೆ ಬಿದ್ದು, ಹಲವು ಸೆಲೆಬ್ರಿಟಿಗಳು ಈ ಗೇಮಿಂಗ್ ಪ್ರಚಾರ ಮಾಡುತ್ತಿರುವ ಕಾರಣ, ಅವರನ್ನೇ ತಮ್ಮ ದೇವರು ಎಂದು ನಂಬಿಕೊಂಡಿರುವ ಅಭಿಮಾನಿಗಳು ಅವರನ್ನೇ ಅನುಸರಿಸಿರುವುದೇ ಇದಕ್ಕೆ ಪ್ರಮುಖ ಕಾರಣವೂ ಆಗಿದೆ. ದುಡ್ಡು ಪಡೆದು ರಾಸಾಯನಿಕ, ವಿಷಪೂರಿತ ಕೂಲ್ಡ್ರಿಂಕ್ಸ್, ಹಿಟ್ಟು, ಸೋಪು, ಶ್ಯಾಂಪೂ ಇತ್ಯಾದಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು, ತಮ್ಮ ಅಭಿಮಾನಿಗಳಿಗೆ ಅದನ್ನು ಖರೀದಿಸುವಂತೆ ಪ್ರೇರೇಪಿಸುವುದು ಸಾಗುತ್ತಲೇ ಇದೆ. ಒಂದೆಡೆ, ತಾವು ಮಾಡುವ ಜಾಹೀರಾತುಗಳ ಪ್ರಾಡಕ್ಟ್ಗಳನ್ನು ತಾವು ಬಳಸದೇ ಹೋದರೂ ಜಾಹೀರಾತಿನಲ್ಲಿ ಮಾತ್ರ ಅದನ್ನು ಸೇವಿಸಿದಂತೆ ಇಲ್ಲವೇ ಉಪಯೋಗಿಸಿದಂತೆ ಜನರನ್ನು ಮರುಳು ಮಾಡುವ ನಟ-ನಟಿಯರು, ಇನ್ನೊಂದೆಡೆ, ಅವುಗಳನ್ನು ಬಳಸಿ ತಾವೂ ಹೀರೋ, ಹೀರೋಯಿನ್ ಆಗಿಬಿಟ್ವಿ ಎಂದು ಖುಷಿಪಡುವ ಅಭಿಮಾನಿಗಳು! ಇದು ಎಗ್ಗಿಲ್ಲದೇ ಸಾಗಿದೆ.
ಆದರೆ, ಇದೀಗ ಇಂಥದ್ದೇ ಸೆಲೆಬ್ರಿಟಿಗಳನ್ನು ಅನುಸರಿಸಿ ಕೋಟಿ ಕೋಟಿ ಕಳೆದುಕೊಂಡು ಕೊನೆಗೆ ಬೀದಿಗೆ ಬಿದ್ದು, ಸಾವಿನ ಹಾದಿಯನ್ನೂ ತುಳಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಆನ್‌ಲೈನ್ ಮನಿ ಗೇಮಿಂಗ್ ಅನ್ನು ಕೊನೆಗೂ ನಿಲ್ಲಿಸುವ ಬಹುದೊಡ್ಡ ಮಸೂದೆಯೀಗ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ಆಘಾತಕಾರಿ ಸಂಖ್ಯೆಯೂ ಹೊರಕ್ಕೆ ಬಂದಿದೆ. 45 ಕೋಟಿ ಜನರು 20 ಸಾವಿರ ಕೋಟಿಗೂ ಅಧಿಕ ಹಣವನ್ನು ಕಳೆದುಕೊಂಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ!
ಅಂದಹಾಗೆ ಲೋಕಸಭೆಯಲ್ಲಿ, ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅಂಗೀಕಾರಗೊಂಡಿದೆ. ಈ ಮಸೂದೆಯು ವಿತ್ತೀಯ ಅಂಶಗಳೊಂದಿಗೆ ಆನ್‌ಲೈನ್ ಆಟಗಳ ಸಂಪೂರ್ಣ ನಿಷೇಧವನ್ನು ಒದಗಿಸುತ್ತದೆ. ಮುಂಬರುವ ಸಮಯದಲ್ಲಿ, ಆನ್‌ಲೈನ್ ಫ್ಯಾಂಟಸಿ ಕ್ರೀಡೆಗಳು ಪೋಕರ್, ರಮ್ಮಿ ಮತ್ತು ಕಾರ್ಡ್ ಆಟಗಳಂತಹ ಆನ್‌ಲೈನ್ ಬೆಟ್ಟಿಂಗ್‌ನ ಮೇಲೆ ಕುಣಿಕೆಯನ್ನು ಬಿಗಿಗೊಳಿಸುತ್ತವೆ. ಈ ಮಸೂದೆಯು ಆನ್‌ಲೈನ್ ಗೇಮಿಂಗ್ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವುದರ ಜೊತೆಗೆ ಇ-ಸ್ಪೋರ್ಟ್‌ಗಳ ಗುರುತಿಸುವಿಕೆ ಮತ್ತು ಪ್ರಚಾರವನ್ನು ಸಹ ಒಳಗೊಂಡಿದೆ. ಆನ್‌ಲೈನ್ ಆಟಗಳನ್ನು ಆಡುವವರ ವಿರುದ್ಧ ಯಾವುದೇ ಕಾನೂನು ಕ್ರಮ ಇರುವುದಿಲ್ಲ. ಹಣದ ಆಟಗಳ ಕೆಟ್ಟ ಪರಿಣಾಮಗಳನ್ನು ಎದುರಿಸುವುದು ಇದರ ಉದ್ದೇಶವಾಗಿದೆ. ಇದಾಗಲೇ ಆನ್‌ಲೈನ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ (Prakash Raj), ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ನಟರಿಗೆ ನೋಟಿಸ್ ಕೂಡ ಜಾರಿಯಾಗಿತ್ತು.
ಉದ್ದೇಶವೇನು?
ಹಾನಿಕಾರಕ ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳಿಗೆ ಸಂಬಂಧಿಸಿದ ಜಾಹೀರಾತುಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ನಿಷೇಧಿಸುವುದು ಈ ಕಾನೂನಿನ ಉದ್ದೇಶ ಎಂದು ಸರ್ಕಾರ ಹೇಳುತ್ತದೆ. ಗೇಮಿಂಗ್ ಮತ್ತು ಬೆಟ್ಟಿಂಗ್ ವ್ಯಸನವು ಜನರಿಗೆ ಆರ್ಥಿಕ ನಷ್ಟವನ್ನುಂಟುಮಾಡುವುದಲ್ಲದೆ, ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಗೂ ಕಾರಣವಾಗಿದೆ ಎಂದು ಸರ್ಕಾರ ನಂಬುತ್ತದೆ. ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಗೇಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಕಠಿಣ ಶಿಕ್ಷೆ
ಆನ್‌ಲೈನ್ ಮನಿ ಗೇಮಿಂಗ್ ಸೇವೆಗಳನ್ನು ಒದಗಿಸುವುದರಿಂದ ಮೂರು ವರ್ಷಗಳವರೆಗೆ ಶಿಕ್ಷೆ ಅಥವಾ ಒಂದು ಕೋಟಿಯವರೆಗೆ ದಂಡ ಅಥವಾ ಎರಡೂ ವಿಧಿಸಬಹುದು. ಇವುಗಳಿಗೆ ಜಾಹೀರಾತು ನೀಡುವವರಿಗೆ 2 ವರ್ಷಗಳವರೆಗೆ ಶಿಕ್ಷೆ, ಐವತ್ತು ಲಕ್ಷದವರೆಗೆ ದಂಡ ಅಥವಾ ಎರಡೂ ವಿಧಿಸಬಹುದು. ಮನಿ ಗೇಮ್‌ಗಳಿಗೆ ಹಣಕಾಸು ವಹಿವಾಟು ಸೌಲಭ್ಯವನ್ನು ಒದಗಿಸಿದ್ದಕ್ಕಾಗಿ ಮೂರು ವರ್ಷಗಳವರೆಗೆ ಶಿಕ್ಷೆ ಅಥವಾ 1 ಕೋಟಿಯವರೆಗೆ ದಂಡ ವಿಧಿಸಬಹುದು. ಪುನರಾವರ್ತಿತ ಅಪರಾಧಗಳಿಗೆ ಕಠಿಣ ಶಿಕ್ಷೆಯ ಬಗ್ಗೆಯೂ ಉಲ್ಲೇಖವಿದೆ. ಇದರಲ್ಲಿ 3-5 ವರ್ಷಗಳ ಜೈಲು ಶಿಕ್ಷೆ ಮತ್ತು ಎರಡು ಕೋಟಿಯವರೆಗೆ ದಂಡವೂ ಸೇರಿದೆ.
ಉದ್ಯಮದ ಕಳವಳ!
ಈ ಮಸೂದೆಯು 'ಉದ್ಯೋಗ ಸೃಷ್ಟಿಸುವ ಉದ್ಯಮ'ವನ್ನು ಕೊನೆಗೊಳಿಸುತ್ತದೆ ಎಂದು ಉದ್ಯಮ ಹೇಳುತ್ತದೆ. ಇದರಿಂದಾಗಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗುವ ಮತ್ತು 400 ಕ್ಕೂ ಹೆಚ್ಚು ಕಂಪೆನಿಗಳು ಮುಚ್ಚುವ ಅಪಾಯವಿದೆ ಎಂದು ಹೇಳಲಾಗಿದೆ.
ಸರ್ಕಾರವು ಉದ್ಯಮದಿಂದಲೇ ಸ್ವಯಂ ನಿಯಂತ್ರಣ ಕಾರ್ಯವಿಧಾನ ಬರಬೇಕೆಂದು ಬಯಸಿದೆ ಎಂದು ಮೂಲಗಳು ಹೇಳುತ್ತವೆ. ಸರ್ಕಾರವು ಸ್ವಯಂ ನಿಯಂತ್ರಣ ಸಂಸ್ಥೆ (SRO) ಕಾರ್ಯವಿಧಾನದ ಬಗ್ಗೆ ಉದ್ಯಮದೊಂದಿಗೆ ಸಮಾಲೋಚಿಸಿ ಮಾತನಾಡಿತ್ತು. ಆದರೆ ಅಂತಹ ಯಾವುದೇ ಚೌಕಟ್ಟು ಉದ್ಯಮದಿಂದ ಮುಂದೆ ಬರಲಿಲ್ಲ. ಅದರ ನಂತರ ಸರ್ಕಾರ ಅದನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಂಡಿತು.
