ಮಧ್ಯಪ್ರದೇಶದ ಶಿವಪುರಿ ಬಳಿ ವಾಯುಪಡೆಯ ಮಿರಾಜ್ 2000 ಫೈಟರ್ ಜೆಟ್ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಹೊರಗೆ ಹಾರಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
ವಾಯುಸೇನೆಗೆ ಸೇರಿದ ಫೈಟರ್ ಜೆಟೊಂದು ತರಬೇತಿ ವೇಳೆ ಪತನಗೊಂಡಿದೆ. ಮಧ್ಯಪ್ರದೇಶದ ಶಿವಪುರಿ ಬಳಿ ವಾಯುಪಡೆಯ ಮಿರಾಜ್ 2000 ಫೈಟರ್ ಜೆಟ್ ವಿಮಾನ ಪತನಗೊಂಡಿದೆ. ಎರಡು ಸೀಟುಗಳ ಈ ಮೀರಜ್ 2000 ಫೈಟರ್ ಜೆಟ್ ವಿಮಾನವೂ ಎಂದಿನಂತೆ ತರಬೇತಿ ಹಾರಾಟದಲ್ಲಿದ್ದಾಗ ಈ ಘಟನೆ ನಡೆದಿದೆ. ಘಟನೆ ನಡೆಯುವ ವೇಳೆ ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು, ಇಬ್ಬರೂ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ ಎಂದು ವಾಯುಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ನತದೃಷ್ಟ ಫೈಟರ್ ಜೆಟ್‌ನಲ್ಲಿದ್ದ ಪೈಲಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಈ ಘಟನೆಗೆ ಏನು ಕಾರಣ ಇರಬಹುದು ಎಂಬುದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ನಿರ್ಮಿಸಿದ ಬಹುಪಾತ್ರ ನಿರ್ವಹಣೆಯ ಫೈಟರ್ ಜೆಟ್ ಮಿರಾಜ್ 2000, 1978 ರಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತು. ಫ್ರೆಂಚ್ ವಾಯುಪಡೆಯು ಇದನ್ನು 1984 ರಲ್ಲಿ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿತು, ಒಟ್ಟು 600 ಮಿರಾಜ್ 2000 ಜೆಟ್‌ಗಳನ್ನು ಉತ್ಪಾದಿಸಿ ಅದರಲ್ಲಿ 50 ಪ್ರತಿಶತವನ್ನು ಭಾರತ ಸೇರಿದಂತೆ ಎಂಟು ದೇಶಗಳಿಗೆ ರಫ್ತು ಮಾಡಲಾಗಿತ್ತು ಎಂದು ಡಸಾಲ್ಟ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಮಿರಾಜ್ 2000 ಫೈಟರ್ ಜೆಟ್‌ನ ಸಿಂಗಲ್ ಸೀಟರ್ ಆವೃತ್ತಿಯೂ ಇದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತ ಗೆಲವು ದಾಧಿಸಲು ಮಿರಾಜ್ 2000 ವಿಮಾನವೂ ಪ್ರಮುಖ ಪಾತ್ರವಹಿಸಿತ್ತು.. ಅದು ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಪಡೆಗಳು ಆಕ್ರಮಿಸಿಕೊಂಡಿರುವ ಬೆಟ್ಟಗಳ ತುದಿಗಳ ಮೇಲೆ ಅತ್ಯಂತ ನಿಖರತೆಯೊಂದಿಗೆ ಲೇಸರ್-ಗೈಡೆಡ್ ಬಾಂಬ್‌ಗಳನ್ನು ಹಾಕಿತು.
