IAF Helicopter Crash : ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ
ಕೂನೂರಿನ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ
ಕಳೆದ ಕೆಲ ದಿನಗಳಿಂದ ಜೀವನ್ಮರಣದ ಹೊರಾಟ ನಡೆಸುತ್ತಿದ್ದ ವರುಣ್ ಸಿಂಗ್
ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ನಿಧನ
ಬೆಂಗಳೂರು (ಡಿ.15): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ತೀವ್ರಗಾಯಗೊಂಡು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಬುಧವಾರ ನಿಧನರಾದರು. ಡಿಸೆಂಬರ್ 8 ರಂದು ಸಂಭವಿಸಿದ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದ ವರುಣ್ ಸಿಂಗ್ ಅವರಿಗೆ ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ತೀವ್ರ ಹೋರಾಟದ ನಡುವೆಯೂ ಬುಧವಾರ ಅವರು ಅಸುನೀಗಿದರು ಎಂದು ಭಾರತೀಯ ವಾಯುಸೇನೆ ಟ್ವಿಟರ್ ಮೂಲಕ ಸುದ್ದಿ ಪ್ರಕಟಿಸಿದೆ.
ತಮಿಳುನಾಡಿನ ಕೂನೂರಿನ( Coonoor in Tamil Nadu) ನೀಲಗಿರಿ ಅರಣ್ಯದಲ್ಲಿ ವಾಯುಸೇನೆಯ Mi-17V5 ಹೆಲಿಕಾಪ್ಟರ್ ಪತನಗೊಂಡಿತ್ತು. ಈ ವಿಮಾನದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್(Bipin Rawat), ಪತ್ನಿ ಮಧುಲಿಕಾ ರಾವತ್(Madhulika rawat) ಸೇರಿದಂತೆ 13 ಸೇನಾಧಿಕಾರಿಗಳು ನಿಧನರಾಗಿದ್ದರು. ಈ ಅಪಘಾತದಲ್ಲಿ ಬದುಕಿಳಿದ ಏಕೈಕ ಯೋಧ ಹೆಲಿಕಾಪ್ಟರ್ ಕ್ಯಾಪ್ಟನ್ ವರುಣ್ ಸಿಂಗ್. ಅಪಘಾತ ಸ್ಥಳದಿಂದ ಆ್ಯಂಬುಲೆನ್ಸ್ ಮೂಲಕ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಅಫಘಾತವಾದ ದಿನದಿಂದಲೂ ಲೈಫ್ ಸಪೋರ್ಟ್ ನಲ್ಲಿದ್ದ ವರುಣ್ ಸಿಂಗ್ ಅವರ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥನೆ ಸಲ್ಲಿಸುತ್ತಿತ್ತು.
"08 ಡಿಸೆಂಬರ್ 21 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಇಂದು ಬೆಳಿಗ್ಗೆ ನಿಧನರಾದ ಧೈರ್ಯಶಾಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನವನ್ನು ತಿಳಿಸಲು ಐಎಎಫ್ ತೀವ್ರ ದುಃಖಿತವಾಗಿದೆ. ವರುಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ ಕುಟುಂಬದ ಜೊತೆ ಶೋಕದಲ್ಲಿ ಭಾಗಿಯಾಗಿದ್ದೇವೆ" ಎಂದು ಐಎಎಫ್ (IAF ) ಟ್ವಿಟರ್ ನಲ್ಲಿ ಪ್ರಕಟಿಸಿದೆ.
"ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ದೇಶಕ್ಕೆ ಅವರ ಶ್ರೀಮಂತ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ದೇಹದಲ್ಲಿ ಶೇಕಡಾ 90 ರಷ್ಟು ಸುಟ್ಟ ಗಾಯಗಳಾಗಿದ್ದವು. ಅಪಘಾತದಿಂದ ರಕ್ತ ಸ್ರಾವವಾಗಿದೆ. ಅಪಘಾತದ ಗಾಯ , ಸುಟ್ಟ ಗಾಯದಿಂದ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತೀವ್ರ ನಿಗಾ ಘಟಕದಲ್ಲಿ ನುರಿತ ವೈದ್ಯರ ತಂಡ ವರುಣ್ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಕೆಲ ದಿನಗಳ ಹಿಂದೆ ಮಗನ ಆರೋಗ್ಯದ ಕುರಿತಾಗಿ ಮಾತನಾಡಿದ್ದ ಅವರ ತಂದೆ ಕರ್ನಲ್ (ನಿವೃತ್ತ)ಕೆ.ಪಿ.ಸಿಂಗ್ (KP Singh) ತಮ್ಮ ಮಗ ಜೀವನ್ಮರಣದ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತಾನೆ ಎಂದು ಹೇಳಿದ್ದರು.
IAF Helicopter Crash: ನನ್ನ ಮಗ ಗೆದ್ದು ಬರುತ್ತಾನೆ: ಕ್ಯಾ ವರುಣ್ ತಂದೆ ವಿಶ್ವಾಸ
ವರುಣ್ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ. ಏನನ್ನೂ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಪ್ರತಿ ಗಂಟೆಗೊಮ್ಮೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಮತ್ತು ಶ್ರೇಷ್ಠ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ವರುಣ್ ಈ ಜೀವನ್ಮರಣ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದಿದ್ದರು. ಕಮಾಂಡ್ ಆಸ್ಪತ್ರೆಯಲ್ಲಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯು ಸೇರಿದಂತೆ ಹಲವು ಗಣ್ಯರು ದೌಡಾಯಿಸಿ ಆರೋಗ್ಯ ವಿಚಾರಿಸಿದ್ದರು.