ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬ ನಿಷ್ಠಾವಂತ ನಾಯಕ ಮಣಿಶಂಕರ್ ಅಯ್ಯರ್ ನೀಡಿದ ಸ್ಫೋಟಕ ಹೇಳಿಕೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ರಾಜಕೀಯದಲ್ಲಿ ನನ್ನನ್ನು ಬೆಳೆಸಿದ್ದು, ಮುಗಿಸಿದ್ದು ಕೂಡ ಗಾಂಧಿ ಕುಟುಂಬವೇ ಎಂದಿದ್ದಾರೆ. 

ನವದೆಹಲಿ(ಡಿ.15) ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಗಾಂಧಿ ಕುಟುಂಬ ಆತ್ಯಾಪ್ತ. ಇಂದಿರಾ ಗಾಂಧಿ ಕಾಲದಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿದ್ದ ನಾಯಕ. ಇಷ್ಟೇ ಅಲ್ಲ ಗಾಂಧಿ ಕುಟುಂಬ, ಕಾಂಗ್ರೆಸ್ ಪಕ್ಷಕ್ಕಾಗಿ ಅದೆಂತಾ ಹೇಳಿಕೆ ನೀಡಲು, ಪಕ್ಷದ ಸಿದ್ಧಾಂತ, ನಿರ್ಧಾರ ಸಮರ್ಥಿಸಿಕೊಳ್ಳಲು ಹಿಂದೂ ಮುಂದೆ ನೋಡದೆ ಮಾತಿಗಿಳಿಯುತ್ತಿದ್ದ ನಾಯಕ. ಇದೇ ಕಾರಣದಿಂದ ಮಣಿಶಂಕರ್ ಅಯ್ಯರ್ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಪರಮೋಚ್ಚ ನಾಯಕರ ವಿರುದ್ಧವೇ ಗುಡುಗಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೆಳೆಸಿದ್ದು ಗಾಂಧಿ ಕುಟುಂಬ, ಆದರೆ ನನ್ನ ಕರಿಯರ್ ಮುಗಿಸಿದ್ದು ಕೂಡ ಗಾಂಧಿ ಕುಟುಂಬ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಣಿಶಂಕರ್ ಅಯ್ಯರ್ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಳೆದ 10 ವರ್ಷದಿಂದ ಸೋನಿಯಾ ಗಾಂಧಿ, ರಾಹುಲ್ ಗಾಂದಿ ಸೇರಿದಂತೆ ಪ್ರಮುಖ ನಾಯಕರ ಭೇಟಿಯಾಗಲು ನನಗೆ ಅವಕಾಶ ನೀಡಿಲ್ಲ. 2 ಬಾರಿ ಪ್ರಿಯಾಂಕಾ ಗಾಂಧಿ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಪಾರ್ಟಿ ನಾಯಕರೂ ದೂರವಾಗಿದ್ದಾರೆ ಎಂದು 82 ವರ್ಷದ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಹಿಂದೆ ಭಾರತದಲ್ಲಿ ಐಎಫ್‌ಎಸ್‌ ಮೇಲ್ಜಾತಿ ಸೇವೆ ಆಗಿತ್ತು: ಮಣಿಶಂಕರ್ ಅಯ್ಯರ್

ಸಂದರ್ಶನದಲ್ಲಿ ಮಣಿಶಂಕರ್ ಅಯ್ಯರ್ ಕೆಲ ಸ್ಫೋಟಕ ಮಾಹಿತಿಗಳನ್ನು ಹೇಳಿದ್ದಾರೆ. 10 ವರ್ಷಗಳ ಹಿಂದೆ ಪಕ್ಷವನ್ನು ಸಮರ್ಥಿಸಿ ನೀಡಿದ ಹೇಳಿಕೆ ವಿವಾದವಾಗಿತ್ತು. ಬಳಿಕ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಈ ಘಟನೆ ಬಳಿಕ ಗಾಂಧಿ ಕುಟುಂಬ ಎಲ್ಲಾ ಸಂಪರ್ಕ ಕಡಿತಗೊಂಡಿತು. ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ರಾಹುಲ್ ಗಾಂಧಿ ಜೊತೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಪ್ರಿಯಾಂಕಾ ಗಾಂಧಿ ಜೊತೆ 2 ಬಾರಿ ಭೇಟಿಯಾಗಿದ್ದೇನೆ. ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ಶುಭಕೋರಲು ನನಗೆ ಅವಕಾಶವಿರಲಿಲ್ಲ. ಹೀಗಾಗಿ ಪ್ರಿಯಾಂಕಾ ಗಾಂಧಿಗೆ ಕರೆ ಮಾಡಿ ಶುಭಾಶಯ ತಿಳಿಸುವಂತೆ ಸೂಚಿಸಿದ್ದೆ. ಪ್ರಿಯಾಂಕಾ ಗಾಂಧಿ ಒಂದೆರೆಡು ಭಾರಿ ಫೋನ್ ಮಾಡಿದ್ದಾರೆ. ಇಷ್ಟೇ ಸಂಪರ್ಕ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಪಕ್ಷ ನನ್ನನ್ನು ಉಚ್ಚಾಟನೆ ಮಾಡಿದಾಗ ಕಾರಣ ಕೇಳಿದ್ದೆ. ಇದೀಗ 10 ವರ್ಷಗಳೇ ಉರುಳಿದೆ. ಆದರೆ ಕಾರಣ ಸ್ಪಷ್ಟವಾಗಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಸಿದ್ದ ಮಣಿಶಂಕರ್ ಅಯ್ಯರ್ ಇದೀಗ ಗಾಂಧಿ ಕುಟುಂಬದಿಂದ ದೂರವಾಗಿದ್ದಾರೆ. ಇದೇ ಗಾಂಧಿ ಕುಟುಂಬ ಮಣಿಶಂಕರ್ ಅಯ್ಯರ್ ರಾಜಕೀಯದ ಆರಂಭದ ದಿನಗಳಲ್ಲಿ ನೆರವಿಗೆ ನಿಂತಿತ್ತು. 

Scroll to load tweet…

ಮಣಿಶಂಕರ್ ಅಯ್ಯರ್ ಇದೇ ವೇಳೆ ಗಾಂಧಿ ಕುಟುಂಬದ ಹೊರತಾಗಿ ಯಾರಿಗೂ ಅವಕಾಶ ನೀಡಲಿಲ್ಲ. ಸಮರ್ಥವಾಗಿ ಸರ್ಕಾರ, ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಗಾಂಧಿ ಕುಟುಂಬ ಬಿಟ್ಟುಕೊಡಲಿಲ್ಲ ಅನ್ನೋದನ್ನು ಪರೋಕ್ಷವಾಗಿ 2012ರ ಘಟನೆ ಹೇಳುವ ಮೂಲಕ ವಿವರಿಸಿದ್ದಾರೆ. 2012ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಂಡಾಂತರ ಎದುರಾಗಿತ್ತು. ಕಾರಣ ಯುಪಿಎ ಸರ್ಕಾರ ಆಡಳಿತದಲ್ಲಿತ್ತು. ಪ್ರಧಾನಿಯಾಗಿ ಮನ್‌ಮೋಹನ್ ಸಿಂಗ್ ಸೇವೆ ಸಲ್ಲಿಸುತ್ತಿದ್ದರು. ಆದರೆ ಮನ್‌ಮೋಹನ್ ಸಿಂಗ್‌ಗೆ 6 ಬೈಪಾಸ್ ಸರ್ಜರಿ ಆಗಿತ್ತು. ಇತ್ತ ಸೋನಿಯಾ ಗಾಂಧಿಗೂ ತೀವ್ರ ಅನಾರೋಗ್ಯ ಕಾಡಿತ್ತು. ಹೀಗಾಗಿ ಸರ್ಕಾರ ಹಾಗೂ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬೇಕಿತ್ತು. ಇದು ಅತ್ಯಂತ ಕ್ಲಿಷ್ಟ ಸಂದರ್ಭವಾಗಿತ್ತು. ಎರಡೂ ಜವಾಬ್ದಾರಿಯನ್ನು ಅಂದರೆ ಪಕ್ಷ ಇಮೇಜ್ ವರ್ಧಿಸಿ, ಸರ್ಕಾರವನ್ನು ಸಮರ್ಥವಾಗಿ ಮುನ್ನಡಸಬೇಕಿದ್ದ ಜವಾಬ್ದಾರಿ ಇತ್ತು. ಈ ಎಲ್ಲವನ್ನೂ ನಿಭಾಯಿಸಬಲ್ಲ, ಅತ್ಯಂತ ಕ್ಲೀನ್ ಇಮೇಜ್ ಹಾಗೂ ಎಲ್ಲರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ನಾಯಕ ಪಕ್ಷದಲ್ಲಿದ್ದರು. ಅದು ಪ್ರಣಬ್ ಮುಖರ್ಜಿ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.