ಪಟನಾ(ಡಿ.29): ‘ನನಗೆ ಮುಖ್ಯಮಂತ್ರಿ ಆಗಲು ಮನಸ್ಸಿರಲಿಲ್ಲ. ಬಿಜೆಪಿಗೆ ಅದರದ್ದೇ ಆದ ಮುಖ್ಯಮಂತ್ರಿ ನೇಮಿಸಲು ಅವಕಾಶವಿತ್ತು. ಆದರೆ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಆದೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಜೆಡಿಯುಗೆ ಕಮ್ಮಿ ಸ್ಥಾನ ಬಂದ ಕೂಡಲೇ ನಿತೀಶ್‌ ಸಿಎಂ ಆಗಲು ಹಿಂದೇಟು ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳನ್ನು ನಿತೀಶ್‌ ದೃಢೀಕರಿಸಿದ್ದಾರೆ.

ಇದನ್ನು ಖಚಿತಪಡಿಸಿದ ಬಿಜೆಪಿ ಮುಖಂಡ ಸುಶೀಲ್‌ ಮೋದಿ, ‘ನಿತೀಶ್‌ಗೆ ಹೊಣೆ ಹೊರುವ ಮನಸ್ಸಿರಲಿಲ್ಲ. ಆದರೆ ಬಿಜೆಪಿ-ಜೆಡಿಯು ನಿತೀಶ್‌ ಹೆಸರಲ್ಲಿ ಒಗ್ಗೂಡಿ ಕಣಕ್ಕಿಳಿದಿದ್ದವು. ಹಾಗಾಗಿ ಅವರನ್ನು ಮನವೊಲಿಸಿದೆವು. ರಾಜ್ಯ ಸರ್ಕಾರ 5 ವರ್ಷ ಪೂರೈಸಲಿದೆ’ ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ ಕಾಯ್ದೆ ಬಗ್ಗೆ ಗರಂ:

ಬಿಜೆಪಿ ರಾಜ್ಯಗಳಲ್ಲಿ ಜಾರಿಗೆ ಬರುತ್ತಿರುವ ಲವ್‌ ಜಿಹಾದ್‌ ಕಾಯ್ದೆ ಹಾಗೂ ಅರುಣಾಚಲ ಪ್ರದೇಶದಲ್ಲಿ ತನ್ನ 6 ಶಾಸಕರನ್ನು ಬಿಜೆಪಿ ಸೆಳೆದ ಬಗ್ಗೆ ಮಿತ್ರಪಕ್ಷ ಜೆಡಿಯು ಅತೃಪ್ತಿ ವ್ಯಕ್ತಪಡಿಸಿದೆ. ‘ಅಂತರ್‌ ಧರ್ಮೀಯ ಮದುವೆ ಎಂಬುದು ಇಬ್ಬರ ಪ್ರಾಪ್ತ ವಯಸ್ಕರ ವೈಯಕ್ತಿಕ ಆಯ್ಕೆ. ಈ ವಿಷಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಬಾರದು’ ಎಂದು ಪಕ್ಷದ ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಇನ್ನು ‘ಅರುಣಾಚಲ ವಿದ್ಯಮಾನವು ಮೈತ್ರಿ ರಾಜಕೀಯಕ್ಕೆ ಒಳ್ಳೇದಲ್ಲ’ ಎಂದು ಅವರು ಕಿಡಿಕಾರಿದ್ದಾರೆ.