ಬ್ರಾಹ್ಮಣ ದೃಷ್ಟಿಕೋನದ ಬಿಜೆಪಿ ಭಾರತದಲ್ಲಿರಲು ಬಯಸುವುದಿಲ್ಲ, ಮೊಯಿತ್ರಾ ಮತ್ತೊಂದು ವಿವಾದ!
- ಕಾಳಿ ಮಾತೆ ಕುರಿತು ವಿವಾದಾತ್ಮ ಹೇಳಿಕೆ ನೀಡಿದ್ದ ಮಹುವಾ
- ಕಾಳಿ ಮದ್ಯ ಸೇವಿಸುವ, ಮಾಂಸ ತಿನ್ನುವ ದೇವತೆ ಎಂದ ಮಹುವಾ
- ಮಹುವಾ ಮೊಯಿತ್ರಾ ವಿರುದ್ಧ ಕೇಸು, ಕೆರಳಿದ ಟಿಎಂಸಿ ಸಂಸದೆ
ಕೋಲ್ಕತಾ(ಜು.07): ಲೀನಾ ಮಣಿಮೇಕಲೈ ಅವರ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ವಿವಾದಕ್ಕೆ ತುಪ್ಪ ಸುರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಇದೀಗ ಸಮರ್ಥನೆ ಮಾಡುವಾಗ ಭಾರತದಲ್ಲಿ ಇರಲು ಬಯಸುವುದಿಲ್ಲ ಅನ್ನೋ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿಯ ಪಿತೃಪ್ರಭುತ್ವದ ಬ್ರಾಹ್ಮಣ ದೃಷ್ಟಿಕೋನದ ಭಾರತದಲ್ಲಿರಲು ಬಯಸುವುದಿಲ್ಲ ಎಂದಿದ್ದಾರೆ.
ಚಿತ್ರದ ಪೋಸ್ಟ್ ವಿವಾದದ ಬೆನ್ನಲ್ಲೇ ಮೊಯಿತ್ರಾ, ನನ್ನ ಪ್ರಕಾರ ಕಾಳಿ ಮಾಂಸ ಸೇವಿಸುವ ಹಾಗೂ ಮದ್ಯವನ್ನು ಸ್ವೀಕರಿಸುವ ದೇವತೆ’ ಎಂದಿದ್ದರು. ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ಪ್ರಕರಣ ದಾಖಲಿಸಿತ್ತು. ಇದರಿಂದ ಕೆರಳಿದ ಮೊಯಿತ್ರಾ, ನನ್ನ ಮಾತನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಬಿಜೆಪಿ ಎಷ್ಟೇ ದೂರು ದಾಖಲಿಸಿದರೂ ನಾನು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಬಿಜೆಪಿ, ಪಿತೃಪ್ರಭುತ್ವದ ಬ್ರಾಹ್ಮಣ ದೃಷ್ಟಿಕೋನ ಹೊಂದಿದೆ. ಇಂತಹ ಬಿಜೆಪಿ ದೃಷ್ಟಿಕೋನದ ಭಾರತದಲ್ಲಿ ಬದುಕಲು ಬಯಸುವುದಿಲ್ಲ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಇದೀಗ ಮಹುವಾ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ.
ಈ ವಿವಾದಕ್ಕೆ ಕಾರಣ ಕಾಳಿ ಚಿತ್ರದ ಪೋಸ್ಟರ್
ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಚಿತ್ರದ ಪೋಸ್ಟರ್‌ನಲ್ಲಿ ದೇವಿ ಕಾಳಿಯಂತೆ ವಸ್ತ್ರಧರಿಸಿದ ಮಹಿಳೆಯೊಬ್ಬಳು ಸಿಗರೆಟ್ ಸೇದುತ್ತಿದ್ದು, ಸಲಿಂಗಿಗಳ ಪ್ರೈಡ್ ಧ್ವಜವನ್ನು ಹಿಡಿದಿರುವುದನ್ನು ಚಿತ್ರಿಸಲಾಗಿದೆ. ಈ ಚಿತ್ರವನ್ನು ಸಮರ್ಥಿಸಿಕೊಳ್ಳಲು ಟಿಎಂಸಿ ಸಂಸದೆ ಮೊಯಿತ್ರಾ ಕಾಳಿ ಮಾಂಸ ಸೇವಿಸುವ, ಮದ್ಯ ಸ್ವೀಕರಿಸುವ ದೇವಿ ಅನ್ನೋ ಹೇಳಿಕ ನೀಡಿ ವಿವಾದ ಸೃಷ್ಟಿಸಿದ್ದರು.
ಮಧ್ಯಪ್ರದೇಶದಲ್ಲಿ ಕೇಸು:
ಈ ನಡುವೆ ಕಾಳಿ ಕುರಿತ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮಹುವಾ ಅವರ ವಿರುದ್ಧ ರಾಜ್ಯ ಗೃಹ ಸಚಿವರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ, ‘ಹೇಳಿಕೆ ಸಂಬಂಧ ಕೂಡಲೇ ಮಹುವಾ ಅವರನ್ನು ಬಂಧಿಸಬೇಕು. ಇಲ್ಲದೇ ಹೋದಲ್ಲಿ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಬಂಗಾಳ ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹುವಾ ಸಮರ್ಥನೆ:
ಭಾರಿ ಆಕ್ರೋಶ ವ್ಯಕ್ತವಾದ ಹೊರತಾಗಿಯೂ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಮಹುವಾ, ‘ನಾನು ಕೂಡಾ ಕಾಳಿ ದೇವಿಯ ಆರಾಧಕಿ. ಕೇಸರಿ ಗೂಂಡಾಗಳ ಬೆದರಿಕೆ ನಾನು ಹೆದರಲ್ಲ. ಸತ್ಯ ತನ್ನ ಬೆಂಬಲಕ್ಕೆ ಯಾವುದೇ ಶಕ್ತಿಯನ್ನು ಬಯಸುವುದಿಲ್ಲ. ಜೈ ಮಾ ಕಾಳಿ’ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮಗೆ ಎಚ್ಚರಿಕೆ ನೀಡಿದ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್ ಇಟ್ಟು ವಿಕೃತಿ ಮೆರೆದಿದ್ದಕ್ಕೆ ವಿಶ್ವದಾದ್ಯಂತ ಹಿಂದೂ ಸಮುದಾಯ ವ್ಯಕ್ತಪಡಿಸಿದ ಭಾರೀ ಆಕ್ರೋಶ, ಕೊನೆಗೂ ಪರಿಣಾಮ ಬೀರಿದ್ದು, ಕೆನಡಾ ಮೂಲದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ಮುಂಬರುವ ಪ್ರದರ್ಶನವನ್ನು ಕೆನಡಾದಲ್ಲಿ ರದ್ದುಗೊಳಿಸಲಾಗಿದೆ. ಈ ನಡುವೆ ಕಾಳಿ ಚಿತ್ರದ ಬಗ್ಗೆ ಲೀನಾ ಮಾಡಿದ್ದ ಪೋಸ್ಟ್ ಅನ್ನು ಟ್ವೀಟರ್ ಕೂಡಾ ರದ್ದುಪಡಿಸಿದೆ. ಕಾನೂನಾತ್ಮಕ ಬೇಡಿಕೆ ಅನ್ವಯ ಪೋಸ್ಟ್ ತೆಗೆದು ಹಾಕಲಾಗಿದೆ ಎಂದು ಹಳೆಯ ಪೋಸ್ಟ್ ಜಾಗದಲ್ಲಿ ಟ್ವೀಟರ್ ಸ್ಪಷ್ಟನೆ ನೀಡಿದೆ.