ಕೊರೋನಾ ವೈರಸ್​ ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಲಾಕ್​​ಡೌನ್​ ಆದೇಶ ಜಾರಿಗೊಳಿಸಲಾಗಿದೆ. ಹೀಗಿರುವಾಗ ದೇಶದ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ನಾನು ದೇಶದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಂ ಮೋದಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಸಲುವಾಗಿ ಲಾಕ್​ಡೌನ್​​ಗೆ ಸಹಕರಿಸಲೇಬೇಕು. ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕು. ಜಗತ್ತಿನಲ್ಲಿ ಆರೋಗ್ಯ ಭಾಗ್ಯವೇ ಎಲ್ಲಕ್ಕಿಂತ ದೊಡ್ಡದು ಎಂದಿದ್ದಾರೆ

ಯಾರೂ ಕೂಡ ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸುತ್ತಿಲ್ಲ ಎಂದು ನನಗೆ ಗೊತ್ತು. ಆದರೆ ಕೆಲವರು ಹಾಗೆ ಮಾಡ್ತಿದ್ದಾರೆ. ಅವರಿಗೆ ನಾನು ಹೇಳುವುದೆಂದರೆ ನೀವು ಲಾಕ್​ಡೌನ್​​ ಅನುಸರಿಸದಿದ್ರೆ, ಕೊರೋನಾ ವೈರಸ್​​ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋದು ಕಷ್ಟವಾಗುತ್ತದೆ. ಲಾಕ್​ಡೌನ್​ ಉಲ್ಲಂಘಿಸೋರು ತಮ್ಮ ಜೀವದ ಜೊತೆ ಆಟವಾಡ್ತಿದ್ದಾರೆ ಅಂತ ಮೋದಿ ಹೇಳಿದ್ದಾರೆ.

ಕೆಲವರು ಕೊರೋನಾ ವಿರುದ್ಧ ಮನೆಯ ಒಳಗಲ್ಲ, ಹೊರಗೆ ನಿಂತು ಹೋರಾಡ್ತಿದ್ದಾರೆ. ವೈದ್ಯರು, ನರ್ಸ್​​ಗಳು, ಪ್ಯಾರಾಮೆಡಿಕಲ್​ ಸಿಬ್ಬಂದಿ. ಇವರೆಲ್ಲಾ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಸೈನಿಕರು ಅಂತ ಮೋದಿ ವೈದ್ಯಕೀಯ ಸಿಬ್ಬಂದಿಯ ಸೇವೆಗೆ ಕೃತಜ್ಞತೆ ಸಲ್ಲಿಸಿದ್ರು.

ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಆಗ್ರಾದ ಅಶೋಕ್ ಕಪೂರ್ ಅವರು, ತಮ್ಮ ಇಡೀ ಕುಟುಂಬದ ಆರು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎಲ್ಲರೂ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ ಎಂದರು.

ಇದೇ ವೇಳೆ ಮೋದಿ ನಿಮ್ಮ ಅನುಭವವನ್ನ ಆಡಿಯೋ ಮೂಲಕ ಹಂಚಿಕೊಳ್ಳಿ. ಅದನ್ನ ಎಲ್ಲರಿಗೂ ತಲುಪುವಂತೆ ವೈರಲ್ ಮಾಡಿ ಎಂದು ಹೇಳಿದ್ದಾರೆ.

"