ನಾನು ಸಾವರ್ಕರ್ ಅಲ್ಲ ರಾಹುಲ್: ಪೊಲೀಸ್ ನೋಟಿಸ್‌ಗೆ ರಾಗಾ ಗರಂ
ಮಹಿಳೆಯರನ್ನು ಇಂದಿಗೂ ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರದ (Jammu kashmir) ಶ್ರೀನಗರದಲ್ಲಿ ಭಾರತ್ ಜೋಡೋ (Bharat jodo yatra) ಯಾತ್ರೆ ವೇಳೆ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆ ಪಡೆಯಲು ಅವರ ನಿವಾಸಕ್ಕೆ ದಿಲ್ಲಿ ಪೊಲೀಸರು ಧಾವಿಸಿ 2 ತಾಸು ಕಾದ ಘಟನೆ ನಡೆದಿದೆ.
ನವದೆಹಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆಗಾಗಿ ದೆಹಲಿ ಪೊಲೀಸರು ರಾಹುಲ್ ವಿಚಾರಣೆಗೆ ಮುಂದಾಗಿರುವ ಹೊತ್ತಿನಲ್ಲೇ ಪಕ್ಷದ ನಾಯಕ ರಾಹುಲ್ ಗಾಂಧಿ ಫೋಟೊವೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಾವರ್ಕರ್ ಸಮಝಾ ಕ್ಯಾ, ನೇಮ್ ಇಸ್ ರಾಹುಲ್ ಗಾಂಧಿ (ನನ್ನನ್ನೇನು ಸಾವರ್ಕರ್ ಅಂದುಕೊಂಡಿದ್ದೀರಾ? ನಾನು ರಾಹುಲ್ ಗಾಂಧಿ) ಎಂದು ಬರೆದುಕೊಂಡಿದೆ. ಬಂಧನದಲ್ಲಿದ್ದ ವೇಳೆಗೆ ತನಗೆ ಕ್ಷಮಾಪಣೆ ನೀಡಿ ಎಂದು ಸಾವರ್ಕರ್ ಬ್ರಿಟೀಷರಿಗೆ ಪತ್ರ ಬರೆದಿದ್ದರು ಎಂದು ಕಾಂಗ್ರೆಸ್ ಹಿಂದಿನಿಂದಲೂ ಆರೋಪಿಸುತ್ತಿದೆ. ಈ ನಡುವೆ ಇತ್ತೀಚಿನ ಲಂಡನ್ ಭಾಷಣ ಸಂಬಂಧ ರಾಹುಲ್ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ. ಹೀಗಾಗಿ ಸಾವರ್ಕರ್ ವಿಷಯ ಮುಂದಿಟ್ಟುಕೊಂಡು, ಅವರ ರೀತಿ ರಾಹುಲ್ ಕ್ಷಮೆ ಕೇಳಲ್ಲ ಎಂದು ಕಾಂಗ್ರೆಸ್ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಕಿರೆಣ್ ರಿಜಿಜು, ಕೈ ಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ವೀರ ಸಾವರ್ಕರ್ ಅವರ ಆತ್ಮಕ್ಕೆ ಅವಮಾನ ಮಾಡಬೇಡಿ ಎಂದಿದ್ದಾರೆ.
ಪೊಲೀಸ್ ನೋಟಿಸ್‌ಗೆ ರಾಹುಲ್ ಗರಂ
ಇನ್ನೊಂದೆಡೆ ಮಹಿಳೆಯರನ್ನು ಇಂದಿಗೂ ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರದ (Jammu kashmir) ಶ್ರೀನಗರದಲ್ಲಿ ಭಾರತ್ ಜೋಡೋ (Bharat jodo yatra) ಯಾತ್ರೆ ವೇಳೆ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆ ಪಡೆಯಲು ಅವರ ನಿವಾಸಕ್ಕೆ ದಿಲ್ಲಿ ಪೊಲೀಸರು ಧಾವಿಸಿ 2 ತಾಸು ಕಾದ ಘಟನೆ ನಡೆದಿದೆ. ಪೊಲೀಸ್ ನೋಟಿಸ್‌ಗೆ 4 ಪುಟದಲ್ಲಿ ಪ್ರಾಥಮಿಕ ಉತ್ತರ ನೀಡಿರುವ ರಾಹುಲ್, ‘ಇದು ಕಂಡು ಕೇಳರಿಯದ ಕ್ರಮ. ನಾನು ಹೇಳಿಕೆ ನೀಡಿ 45 ದಿನ ಆಯಿತು. ಈಗ ನೋಟಿಸ್ ನೀಡಿದ್ದೀರಿ. ಅಲ್ಲದೆ, ಉತ್ತರ ಪಡೆಯಲು ಅಷ್ಟುಗಡಿಬಿಡಿ ಏಕೆ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ದೇಶದ್ರೋಹಿ ಅಂತ ಕರೀಬೇಡಿ: ರಾಹುಲ್‌ಗಾಂಧಿ
ಇದಲ್ಲದೆ, ‘ನೋಟಿಸ್‌ಗೆ ಸುದೀರ್ಘ ಉತ್ತರ ನೀಡಲು 8-10 ದಿನ ಕಾಲಾವಕಾಶ ಬೇಕು’ ಎಂದೂ ಕೋರಿದ್ದಾರೆ.
ಆಗಿದ್ದೇನು?:
ಈ ಹಿಂದೆ ನೋಟಿಸ್ ನೀಡಲು 2 ದಿನ ಆಗಮಿಸಿ ಕ್ರಮವಾಗಿ 2 ಹಾಗೂ ಒಂದೂವರೆ ತಾಸುಗಳ ಕಾಲ ಪೊಲೀಸರು ಕಾದಿದ್ದರು. ಇದೀಗ ಹೇಳಿಕೆ ದಾಖಲಿಸಿಕೊಳ್ಳುವಾಗಲೂ ಹಾಗೆಯೇ ಆಗಿದೆ. ಬೆಳಗ್ಗೆ 10ಕ್ಕೇ ರಾಹುಲ್ ಹೇಳಿಕೆ ಪಡೆಯಲು ದಿಲ್ಲಿ ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ (sagar preet hooda) ನೇತೃತ್ವದ ತಂಡ, ತುಘಲಕ್ ಲೇನ್ (Tughalak line) ನಿವಾಸಕ್ಕೆ ಬಂತು. 2 ತಾಸು ಕಾದ ಬಳಿಕ 12 ಗಂಟೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ 1 ಗಂಟೆಗೆ ನಿರ್ಗಮಿಸಿತು.
‘ಶ್ರೀನಗರದಲ್ಲಿ ನೀವು ಹೇಳಿಕೆ ನೀಡಿದ್ದರೂ ದಿಲ್ಲಿಯಲ್ಲೂ ನಿಮ್ಮ ಯಾತ್ರೆ ಸಾಗಿತ್ತು. ಹೀಗಾಗಿ ಲೈಂಗಿಕ ದೌರ್ಜನ್ಯವಾಗಿದೆ ಎಂದು ಯಾವ ಮಹಿಳೆ ನಿಮ್ಮನ್ನು ಸಂಪರ್ಕಿಸಿದ್ದಾರೆ ಎಂಬ ಕುರಿತು ಹೇಳಿಕೆ ನೀಡಿ. ಅಂದರೆ ಆ ಸಂತ್ರಸ್ತರಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತದೆ’ ಎಂದು ಪೊಲೀಸರು ರಾಹುಲ್‌ಗೆ ನೋಟಿಸ್ ನೀಡಿದ್ದರು. ಇದಕ್ಕೆ ಸಂಜೆ 4 ಗಂಟೆಗೆ 10 ಅಂಶದ ಉತ್ತರ ನೀಡಿರುವ ರಾಹುಲ್, ‘ಪೊಲೀಸರ ಕ್ರಮ ಕಂಡು ಕೇಳರಿಯದ್ದು. ಅದಾನಿ ವಿರುದ್ಧ ನಾನು ಮಾಡಿದ ಆರೋಪಕ್ಕೂ ಈ ಕ್ರಮಕ್ಕೂ ಏನಾದರೂ ಸಂಬಂಧ ಇದೆಯೇ? ನಾನು ಹೇಳಿಕೆ ನೀಡಿ 45 ದಿನ ಆಯಿತು. ಈಗ ಏಕೆ ನೋಟಿಸ್ ನೀಡಿ ಉತ್ತರ ಪಡೆಯಲು ಗಡಿಬಡಿ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ರಾಹುಲ್ ಅವರು, ‘ಅನೇಕ ರಾಜಕೀಯ ನಾಯಕರು ಇಂಥ ಹೇಳಿಕೆ ನೀಡಿದ್ದಾರೆ. ಅವರನ್ನು ನೀವು ಯಾವತ್ತಾದರೂ ಪ್ರಶ್ನಿಸಿದ್ದೀರಾ?’ ಎಂದು ಡಿಸಿಪಿ ಹೂಡಾ ಅವರಿಗೆ ನೇರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.
ಅತ್ಯಾಚಾರ ಹೇಳಿಕೆ ಕುರಿತು ಉತ್ತರ ಸಲ್ಲಿಸಿದ ರಾಹುಲ್ ಗಾಂಧಿ, ಇದರಲ್ಲಿ ತನಿಖೆ ನಡೆಯಲ್ಲ ಎಂದ ದೆಹಲಿ ಪೊಲೀಸ್!
ಕಾಂಗ್ರೆಸ್ ಕಿಡಿ:
ದೆಹಲಿ ಪೊಲೀಸರ ನಡೆಯನ್ನು ರಾಜಕೀಯ ದ್ವೇಷ (ಹಾಗೂ ಕಿರುಕುಳದ ಭೀಕರ ಪ್ರಕರಣ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ರಾಜಕೀಯ ಎದುರಾಳಿಗಳ ವಿರುದ್ಧ ಇಂತಹ ಕಸರತ್ತು ನಡೆಸುವ ಮೂಲಕ ಕೇಂದ್ರ ಸರ್ಕಾರ ಕೆಟ್ಟಸಂಪ್ರದಾಯ ಹುಟ್ಟುಹಾಕುತ್ತಿದೆ. ಒಂದು ವೇಳೆ ಬಿಜೆಪಿ ಆಳ್ವಿಕೆಯಲ್ಲಿಲ್ಲದ ರಾಜ್ಯಗಳಲ್ಲಿ ಕೇಂದ್ರ ಸಚಿವರೂ ಹೇಳಿಕೆ ನೀಡಿದರೆ, ಅವರು ಇದೇ ರೀತಿಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್, ಜೈರಾಮ್ ರಮೇಶ್, ಅಭಿಷೇಕ್ ಸಿಂಘ್ವಿ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ, ‘ಕಾನೂನಿನ ಪ್ರಕಾರವೇ ಉತ್ತರ ನೀಡುತ್ತೇವೆ. ಇದಕ್ಕಾಗಿ ಸಮಯ ಬೇಕು’ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.