* ಭಯೋತ್ದಾದಕ ಶಂಕೆ, 2021ರ ನವೆಂಬರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದ ವ್ಯಕ್ತಿ* ಹೂತಿದ್ದ ಶವ ಹೊರತೆಗೆಯಲು 6 ತಿಂಗಳ ಬಳಿಕ ಕೋರ್ಟ್ ಆದೇಶ* ಕುಟುಂಬಕ್ಕೆ ಹಸ್ತಾಂತರಿಸುವಂತೆ ಜಮ್ಮು ಕಾಶ್ಮೀರ ಹೈಕೋರ್ಟ್ ಆದೇಶ
ಶ್ರೀನಗರ(ಮೇ.28): 2021ರ ನವೆಂಬರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದ, ಭಯೋತ್ಪಾದಕನೆಂದು ಕರೆಯಲ್ಪಟ್ಟ ನಾಗರಿಕನ ಶವವನ್ನು ಹೊರತೆಗೆದು, ಅಂತಿಮ ವಿಧಿ ವಿಧಾನಗಳನ್ನು ಪೂರೈಸಲು ಅವರ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಜಮ್ಮು ಕಾಶ್ಮೀರ ಹೈಕೋರ್ಚ್ ಶುಕ್ರವಾರ ಆದೇಶಿಸಿದೆ.
ಸಾವಿಗೀಡಾದ ಅಮಿರ್ ಮರ್ಗಿ ಶವ ಕೊಳೆತು ಹಾಳಾಗಿದ್ದರೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಿದ್ದರೆ, ಅವರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಮೃತನ ಶರೀರವನ್ನು ಅಂತಿಮ ಸಂಸ್ಕಾರಕ್ಕೆ ನೀಡದೇ ತೆಗೆದುಕೊಂಡು ಹೋಗಿರುವುದು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಅಮಿರ್‌ನ ತಂದೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
2021ರ ನ.15ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಾಲ್ವರಲ್ಲಿ ಅಮಿರ್ ಸಹ ಒಬ್ಬನಾಗಿದ್ದ. ಇವರೆಲ್ಲರನ್ನೂ ಉಗ್ರರು ಎಂದು ನಿರ್ಧರಿಸಿ ಕುಪ್ವಾರಾದಲ್ಲಿ ಹೂತುಹಾಕಲಾಗಿತ್ತು.
ಕಾಶ್ಮೀರ: ಲಷ್ಕರ್‌ನ ಐವರು ಹೈಬ್ರಿಡ್ ಉಗ್ರರ ಬಂಧನ
ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಐವರು ಹೈಬ್ರಿಡ್ ಉಗ್ರರನ್ನು 2 ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸೋಮವಾರ ಬಂಧಿಸಲಾಗಿದೆ. ಕಳೆದ ತಿಂಗಳು ಬಾರಾಮುಲ್ಲಾದಲ್ಲಿ ನಡೆದ ಸರಪಂಚ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಇದರಲ್ಲಿ ಸೇರಿದ್ದಾರೆ. ಈ ಉಗ್ರರ ಬಂಧನ ಪೊಲೀಸ್ ಇಲಾಖೆಗೆ ಸಿಕ್ಕ ದೊಡ್ಡ ಜಯ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಬಂಧಿತರಿಂದ 15 ಪಿಸ್ತೂಲುಗಳು, 30 ಬುಲೆಟ್ ಮ್ಯಾಗಜಿನ್‌ಗಳು ಸೇರಿದಂತೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉಗ್ರರು ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಏಕೆಂದರೆ ಇವರು ಉಗ್ರ ಚಟುವಟಿಕೆಗಳಿದ್ದಾಗ ಅವುಗಳನ್ನು ಪೂರೈಸಿ ನಂತರ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ. ಹೀಗಾಗಿ ಇವರಿಗೆ ಹೈಬ್ರೀಡ್ ಭಯೋತ್ಪಾದಕರು ಎನ್ನುತ್ತಾರೆ.
93ರ ಮುಂಬೈ ಸ್ಫೋಟ ಕೇಸಿನ 4 ಆರೋಪಿಗಳು 29 ವರ್ಷದ ಬಳಿಕ ಸೆರೆ
257 ಜನರನ್ನು ಬಲಿಪಡೆದ 1993 ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟ ಪ್ರಕರಣದ 4 ಆರೋಪಿಗಳನ್ನು ಗುಜರಾತ್ ಭಯೋತ್ಪಾದಕ ನಿಗ್ರಹ ಸಂಸ್ಥೆಯ ಅಧಿಕಾರಿಗಳು ಸುಮಾರು 29 ವರ್ಷಗಳ ನಂತರ ಬಂಧಿಸಿದ್ದಾರೆ. ಮುಂಬೈ ನಿವಾಸಿಯಾದ ಅಬು ಬಕರ್, ಸೈಯ್ಯದ್ ಖುರೇಷಿ, ಮೊಹಮ್ಮದ್ ಶೊಯೇಬ್ ಖುರೇಷಿ ಹಾಗೂ ಮೊಹಮ್ಮದ್ ಯುಸೂಫ್ ಇಸ್ಮಾಯಿತ್ ಬಂಧಿತ ಆರೋಪಿಗಳು.
ತಮ್ಮ ನೈಜ ಹೆಸರುಗಳನ್ನು ಮರೆಮಾಚಿ ನಕಲಿ ದಾಖಲೆಗಳನ್ನು ಬಳಸಿ ಪಾಸ್‌ಪೋರ್ಚ್‌ಗಳನ್ನು ತಯಾರಿಸಿಕೊಂಡಿದ್ದರು. ಈ ನಾಲ್ವರನ್ನು ಮೇ 12 ರಂದು ಅಹಮದಾಬಾದಿನ ಸರ್ದಾರ್‌ನಗರದಿಂದ ಬಂಧಿಸಲಾಗಿದೆ.
