ಅಮೆರಿಕದಲ್ಲಿ ಎರಡು ಪ್ರತ್ಯೇಕ ಕಾರು ಅಪಘಾತಗಳಲ್ಲಿ ಹೈದರಾಬಾದ್‌ನ ನಾಲ್ವರು ಮತ್ತು ಕ್ಲೀವ್‌ಲ್ಯಾಂಡ್ ಸ್ಟೇಟ್ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಒಂದು ಘಟನೆಯಲ್ಲಿ ಕಾರು ಬೆಂಕಿಗೆ ಆಹುತಿಯಾಗಿ ನಾಲ್ವರು ಸಜೀವ ದಹನವಾಗಿದ್ದರೆ,.

ನವದೆಹಲಿ (ಜು.8): ಅಮೆರಿಕದಲ್ಲಿ ಟ್ರಕ್ ಒಂದು ಕಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್‌ನ ನಾಲ್ವರು ಜನರ ಕುಟುಂಬದ ವಾಹನ ಬೆಂಕಿಗೆ ಆಹುತಿಯಾಯಿತು. ತೇಜಸ್ವಿನಿ, ಶ್ರೀ ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಪ್ರವಾಸಕ್ಕೆಂದು ಅಮೆರಿಕದ ಡಲ್ಲಾಸ್‌ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಯಿತು. ಕುಟುಂಬದ ನಾಲ್ವರು ಸದಸ್ಯರು ಸಾವು ಕಂಡಿದ್ದಾರೆ. ಇಡೀ ಕಾರು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲೇ ಎಲ್ಲರೂ ಸಜೀವ ದಹನವಾಗಿದ್ದಾರೆ. ಮೃತರ ಶವಗಳನ್ನು ಅಂತಿಮ ವಿಧಿವಿಧಾನಗಳಿಗಾಗಿ ಹೈದರಾಬಾದ್‌ಗೆ ತರಲಾಗುತ್ತದೆ.

ಇದೇ ರೀತಿಯ ಘಟನೆಯಲ್ಲಿ, ನ್ಯೂಯಾರ್ಕ್‌ನಲ್ಲಿ ನಡೆದ ಮಾರಕ ರಸ್ತೆ ಅಪಘಾತದಲ್ಲಿ ಕ್ಲೀವ್‌ಲ್ಯಾಂಡ್ ಸ್ಟೇಟ್ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಕಾನ್ಸುಲೇಟ್ ಮಂಗಳವಾರ ತಿಳಿಸಿದೆ. ವಿದ್ಯಾರ್ಥಿಗಳನ್ನು 20 ವರ್ಷದ ಮಾನವ್ ಪಟೇಲ್ ಮತ್ತು 23 ವರ್ಷದ ಸೌರವ್ ಪ್ರಭಾಕರ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಲ್ಯಾಂಕಾಸ್ಟರ್ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಮೇ 10 ರಂದು ಪೂರ್ವ ಕೊಕಾಲಿಕೊ ಟೌನ್‌ಶಿಪ್‌ನಲ್ಲಿ ಅಪಘಾತ ಸಂಭವಿಸಿದಾಗ ಪ್ರಭಾಕರ್ ಕಾರು ಚಾಲನೆ ಮಾಡುತ್ತಿದ್ದರು. ಪ್ರಭಾಕರ್ ಮತ್ತು ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಹನವು ರಸ್ತೆಯಿಂದ ಹೊರಬಂದು, ಮರಕ್ಕೆ ಡಿಕ್ಕಿ ಹೊಡೆದು ನಂತರ ಸೇತುವೆಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.

"ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳಾದ ಮಾನವ್ ಪಟೇಲ್ ಮತ್ತು ಸೌರವ್ ಪ್ರಭಾಕರ್ ಪ್ರಾಣ ಕಳೆದುಕೊಂಡ ದುರದೃಷ್ಟಕರ ರಸ್ತೆ ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಯಿತು" ಎಂದು ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.