ಜರ್ಮನಿಯ ಲುಫ್ತಾನ್ಸ ವಿಮಾನದಲ್ಲಿ ಈ ಘಟನೆ ನಡೆದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಪತಿಯನ್ನು ಕೆಳಗಿಳಿಸಿ ಸೆಕ್ಯುರಿಟಿಗೆ ಒಪ್ಪಿಸಲಾಗಿದೆ.

ನವದೆಹಲಿ (ನ.29): ಬ್ಯಾಂಕಾಕ್‌ನಿಂದ ಜರ್ಮನಿಯ ಮ್ಯೂನಿಚ್‌ಗೆ ಹೋಗುತ್ತಿದ್ದ ಲುಫ್ಥಾನ್ಸಾ ಏರ್‌ಲೈನ್ಸ್ ವಿಮಾನ ಎಲ್‌ಎಚ್‌ 772, ನವೆಂಬರ್ 29 ರ ಬುಧವಾರ ಬೆಳಿಗ್ಗೆ 10:26 ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಗಂಡ-ಹೆಂಡತಿ ವಿಮಾನದಲ್ಲಿಯೇ ಜಗಳ ಮಾಡಿಕೊಂಡ ಕಾರಣದಿಂದಾಗಿ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ದೆಹಲಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪತಿ-ಪತ್ನಿಯ ನಡುವಿನ ಗಲಾಟೆಗೆ ಕಾರಣವೇನು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿಮಾನದ ಸಿಬ್ಬಂದಿ ಮೊದಲು ಪಾಕಿಸ್ತಾನದಲ್ಲಿ ಇಳಿಯಲು ಅನುಮತಿ ಕೇಳಿದರು, ಆದರೆ ಪಾಕಿಸ್ತಾನ ಪ್ರಾಧಿಕಾರ ಇದಕ್ಕೆ ನಿರಾಕರಿಸಿತ್ಉತ. ಇದಾದ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿತ್ತು. ಆರಂಭದಲ್ಲಿ ಪತಿ-ಪತ್ನಿಯ ನಡುವೆ ವಾಗ್ವಾದ ನಡೆದಿದ್ದು, ಕ್ರಮೇಣ ಜಗಳಕ್ಕೆ ತಿರುಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇದಾದ ಬಳಿಕ ವಿಮಾನವನ್ನು ಬೇರೆಡೆಗೆ ತಿರುಗಿಸಲು ಸಿಬ್ಬಂದಿ ನಿರ್ಧರಿಸಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, 53 ವರ್ಷದ ಜರ್ಮನ್ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಪತ್ನಿ ಥೈಲ್ಯಾಂಡ್ ಮೂಲದವರು. ಮಹಿಳೆ ತನ್ನ ಗಂಡನ ಕೆಟ್ಟ ನಡವಳಿಕೆಯ ಬಗ್ಗೆ ವಿಮಾನದ ಪೈಲಟ್‌ಗೆ ದೂರು ನೀಡಿದ್ದಳು ಮತ್ತು ಅವರ ಮಧ್ಯಸ್ಥಿಕೆಗೆ ಕೋರಿದ್ದಳು. ಪತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕೆ ಆರೋಪ ಮಾಡಿದ್ದರು. ಪತಿ ವಿಮಾನದಲ್ಲಿ ಆಹಾರವನ್ನು ಎಸೆದು, ಲೈಟರ್‌ನಿಂದ ಬೆಡ್‌ಶೀಟ್ ಅನ್ನು ಸುಡಲು ಪ್ರಯತ್ನಿಸಿದ್ದಲ್ಲದೆ, ಪತ್ನಿಯ ಮೇಲೆ ಕೂಗಾಡಿದ ಆರೋಪ ಹೊರಿಸಲಾಗಿದೆ. ಅವರು ಸಿಬ್ಬಂದಿಯ ಮಾತನ್ನೂ ಕೇಳಲು ನಿರಾಕರಿಸಿದರು. ವಿಮಾನದಲ್ಲಿಯೇ ಗಲಾಟೆ ಮಾಡುತ್ತಿದ್ದ ದಂಪತಿಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಿ ಭದ್ರತೆಗೆ ಒಪ್ಪಿಸಲಾಗಿದೆ.

ಜರ್ಮನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವ ಲುಫ್ಥಾನ್ಸಾ ಏರ್‌ಲೈನ್ಸ್ ಮಾಧ್ಯಮ ವರದಿಗಳ ಪ್ರಕಾರ, ಆರೋಪಿಯು ದೆಹಲಿ ಪೊಲೀಸರ ವಶದಲ್ಲಿಯೇ ಇರುತ್ತಾನೆಯೇ ಅಥವಾ ಅವನನ್ನು ಬೇರೆ ವಿಮಾನದಲ್ಲಿ ಜರ್ಮನಿಗೆ ಕಳುಹಿಸಲಾಗುತ್ತದೆಯೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಲುಫ್ಥಾನ್ಸ ಏರ್‌ಲೈನ್ಸ್ ಈ ವಿಷಯದಲ್ಲಿ ಜರ್ಮನ್ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸುತ್ತಿದೆ.

ಹಾಗಿದ್ದರೂ, ಈ ವಿಷಯದಲ್ಲಿ ಲುಫ್ತಾನ್ಸಾ ಏರ್‌ಲೈನ್ಸ್‌ನಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ವಿಮಾನದಲ್ಲಿದ್ದ ಇತರ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ವಿಮಾನದಲ್ಲಿ ಜಗಳವಾಡುತ್ತಿದ್ದ ವ್ಯಕ್ತಿ ಮದ್ಯ ಸೇವಿಸಿದ್ದ ಎನ್ನಲಾಗಿದೆ.

ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ ಪ್ರಖ್ಯಾತ ಏರ್‌ಲೈನ್ಸ್‌ ಸಿಇಒ!

ಈ ಹಿಂದೆ ನವೆಂಬರ್ 20 ರಂದು ಜೈಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಬಳಿಕ ಬೆಂಗಳೂರು ತಲುಪಿದ ಪ್ರಯಾಣಿಕರನ್ನು ಬಂಧಿಸಲಾಗಿತ್ತು. 32ರ ಹರೆಯದ ವ್ಯಕ್ತಿ ಪಾನಮತ್ತನಾಗಿದ್ದ ಮತ್ತು ಹಲವು ಬಾರಿ ಎಚ್ಚರಿಕೆ ನೀಡಿದರೂ ಶಾಂತವಾಗಿರಲಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದರು. ಆದರೆ, ಬಳಿಕ ಜಾಮೀನು ಪಡೆದಿದ್ದರು. ನವೆಂಬರ್ 23 ರಂದು, ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ, ಜೆಡ್ಡಾದಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲಾಗಿತ್ತು. ಇಲ್ಲಿ ರೋಗಿಯನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅತ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಭಾರತ ಮತ್ತು ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ