Asianet Suvarna News Asianet Suvarna News

ಕಳೆದ 10 ವರ್ಷದಲ್ಲಿ 4ನೇ ಬಾರಿ ನಿತೀಶ್‌ ಪಲ್ಟಿ; 2025ರ ವಿಧಾನಸಭೆ ಚುನಾವಣೇಲಿ 20 ಸೀಟೂ ಗೆಲ್ಲಲ್ಲ: ಪ್ರಶಾಂತ್ ಕಿಶೋರ್

ಜೆಡಿಯು ನಾಯಕ ನಿತೀಶ್‌ ಕುಮಾರ್‌ 2025ರ ವಿಧಾನಸಭೆ ಚುನಾವಣೆಯಲ್ಲಿ 20 ಸೀಟು ಕೂಡ ಗೆಲ್ಲುವುದಿಲ್ಲ ಎಂದು ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ.

how strategist prashant kishor reacted to nitish kumar s latest flip flop ash
Author
First Published Jan 29, 2024, 3:26 PM IST

ನವದೆಹಲಿ (ಜನವರಿ 29, 2024): ಬಿಹಾರದಲ್ಲಿ ಅಧಿಕಾರದಲ್ಲಿರುವ ವಿಪಕ್ಷಗಳ ಮೈತ್ರಿಕೂಟದಲ್ಲಿ ಮತ್ತೆ ಬಿರುಕು ಉಂಟಾಗಿದ್ದು, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮೈತ್ರಿಕೂಟ ತೊರೆದು ಮತ್ತೆ ಬಿಜೆಪಿ ತೆಕ್ಕೆಗೆ ಮರಳಿದ್ದಾರೆ. ನಿತೀಶ್‌ ಕುಮಾರ್‌ ಮೈತ್ರಿಕೂಟವನ್ನು ಬದಲಾಯಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ 10 ವರ್ಷಗಳಲ್ಲಿ ಅವರು 4ನೇ ಬಾರಿ ಮೈತ್ರಿಕೂಟ ಬದಲಾವಣೆಗೆ ಮುಂದಾಗಿದ್ದಾರೆ.

2013ರಲ್ಲಿ ಬಿಜೆಪಿಯಿಂದ ಆರ್‌ಜೆಡಿಗೆ:
ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ನಿತೀಶ್‌ ಕುಮಾರ್‌ 2014ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಿದ ವಿಷಯಕ್ಕೆ ಬೇಸರಗೊಂಡು ಎನ್‌ಡಿಎ ತೊರೆದಿದ್ದರು. ಎನ್‌ಡಿಎ ಜೊತೆಗಿನ 17 ವರ್ಷಗಳ ಬಂಧದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಜೊತೆ ಸೇರಿ ಮುಂದಿನ ಚುನಾವಣೆಯ ಸಿದ್ಧತೆಯನ್ನು ಆರಂಭಿಸಿದರು.

ಇದನ್ನು ಓದಿ: ನಿತೀಶ್‌ ಗೋಸುಂಬೆ, ದ್ರೋಹಿ: ವಿಪಕ್ಷಗಳ ಕಟುಟೀಕೆ; ಕಸದ ತೊಟ್ಟಿಗೇ ಕಸ ಹೋಗಿದೆ ಎಂದು ಲಾಲೂ ಪುತ್ರಿ ವ್ಯಂಗ್ಯ

2016ರಲ್ಲಿ ಮತ್ತೆ ಬಿಜೆಪಿಗೆ:
2015ರ ಬಿಹಾರ ವಿಧಾನಸಭೆ ಚುನಾವನೆಯಲ್ಲಿ ಜೆಡಿಯು, ಆರ್‌ಜೆಡಿ ನೇತೃತ್ವದ ಸರ್ಕಾರ ರಚನೆಯಾದರೂ ಆಂತರಿಕ ಗಲಭೆಗಳಿಂದಾಗಿ ನಿತೀಶ್‌ 2016ರಲ್ಲಿ ಮೈತ್ರಿಕೂಟ ತೊರೆದು ಬಿಜೆಪಿ ಜೊತೆ ಕೈ ಜೋಡಿಸಿದರು. ಈ ವೇಳೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಜಿಎಸ್‌ಟಿ, ಅಪನಗದೀಕರಣಗಳನ್ನು ನಿತೀಶ್‌ ಹೊಗಳಿದ್ದರು. ಅಲ್ಲದೇ ಈ ವೇಳೆ ಸಿಬಿಐ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.

2022ರಲ್ಲಿ ಬಿಜೆಪಿಗೆ ಗುಡ್‌ ಬೈ:
ಬಿಜೆಪಿ ಜತೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದ ನಿತೀಶ್‌, ಬಿಹಾರಕ್ಕೆ ಇಬ್ಬರು ಉಪಮುಖ್ಯಮಂತ್ರಿಗಳ ನೇಮಕ ಮತ್ತು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮತ್ತೊಮ್ಮೆ ಬಿಜೆಪಿ ಮೈತ್ರಿಕೂಟವನ್ನು ತೊರೆದರು. ಇದಾದ ಬಳಿಕ ಆರ್‌ಜೆಡಿ ಜೊತೆ ಸೇರಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಿದರು.

ಇಂಡಿಯಾ ಕೂಟಕ್ಕೆ ನಿತೀಶ್‌ ಪ್ರಹಾರ: ಇನ್ನು ಎನ್‌ಡಿಎ ಬಿಡಲ್ಲ; ಬಿಹಾರ ಸಿಎಂ ಸ್ಪಷ್ಟೋಕ್ತಿ

2024ರಲ್ಲಿ ಮತ್ತೆ ಬಿಜೆಪಿಗೆ:
ಇಂಡಿಯಾ ಮೈತ್ರಿಕೂಟದಲ್ಲಿ ಸೀತಾರಾಂ ಯಚೂರಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಮುಖ ಸ್ಥಾನ ನೀಡಿರುವುದು ಮತ್ತು ರಾಜ್ಯದಲ್ಲಿನ ಆರ್‌ಜೆಡಿಯ ಕುಟುಂಬ ರಾಜಕಾರಣವನ್ನು ವಿರೋಧಿಸಿರುವ ಅವರು ಈಗ ಮತ್ತೆ ಬಿಜೆಪಿ ಸ್ನೇಹ ಸಂಪಾದಿಸಿದ್ದಾರೆ.

ನಿತೀಶ್ 6359 ದಿನ ಸಿಎಂ ಹುದ್ದೆಯಲ್ಲಿ!
ಪಟನಾ: ದಾಖಲೆಯ 9ನೇ ಸಲ ಬಿಹಾರ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌, 6359 ದಿನ ಸಿಎಂ ಹುದ್ದೆಯಲ್ಲಿದ್ದಾರೆ. ಬಿಹಾರ ಮಟ್ಟಿಗೆ ಇದೂ ಕೂಡ ದಾಖಲೆ. ನಿತೀಶ್ ನಂತರದ ಸ್ಥಾನದಲ್ಲಿ ಶ್ರೀಕೃಷ್ಣ ಸಿಂಗ್‌ ಇದ್ದಾರೆ. ಅವರು 3199 ದಿನ ಸಿಎಂ ಹುದ್ದೆಯಲ್ಲಿದ್ದರು.

ನಿತೀಶ್‌ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದೇಕೆ? ನಿತೀಶ್‌ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!

2025 ರ ವಿಧಾನಸಭೆ ಚುನಾವಣೇಲಿ ನಿತೀಶ್‌ 20 ಸೀಟು ಗೆಲ್ಲೋದಿಲ್ಲ: ಪಿಕೆ
ಪಟನಾ: ಬಿಹಾರದಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಸಂಬಂಧ ಕಡಿದುಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜೆಡಿಯು ನಾಯಕ ನಿತೀಶ್‌ ಕುಮಾರ್‌ 2025ರ ವಿಧಾನಸಭೆ ಚುನಾವಣೆಯಲ್ಲಿ 20 ಸೀಟು ಕೂಡ ಗೆಲ್ಲುವುದಿಲ್ಲ ಎಂದು ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ.

ನಿತೀಶ್‌ ಜೊತೆ ಸೇರಿಯೇ ಚುನಾವಣಾ ತಂತ್ರಗಾರಿಕೆ ಆರಂಭಿಸಿ, ಈಗ ನಿತೀಶ್‌ರ ಕಡು ವಿರೋಧಿಯಾಗಿ ರೂಪುಗೊಂಡಿರುವ ಪ್ರಶಾಂತ್‌ ಕಿಶೋರ್‌, ‘ನಿತೀಶ್‌ ಒಬ್ಬ ವಂಚಕ. ಬಿಹಾರದ ಜನರನ್ನು ಮೂರ್ಖರನ್ನಾಗಿಸುತ್ತಾ ರಾಜಕಾರಣ ನಡೆಸುತ್ತಿದ್ದಾರೆ. ಬಿಜೆಪಿ ಜೊತೆಗಿನ ಅವರ ಮೈತ್ರಿ ಮುಂದಿನ ವಿಧಾನಸಭೆ ಚುನಾವಣೆಯವರೆಗೂ ಉಳಿಯುವುದಿಲ್ಲ. ಯಾರ ಜೊತೆ ಮೈತ್ರಿ ಮಾಡಿಕೊಂಡು ಅವರು ಚುನಾವಣೆಗೂ ಹೋದರೂ 2025ರಲ್ಲಿ ಅವರ ಪಕ್ಷ 20 ಸೀಟು ಗೆಲ್ಲುವುದಿಲ್ಲ. ಇದು ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios