ಅಪಘಾತವಾದರೆ ನಾವೆಷ್ಟು ಸುರಕ್ಷಿತ: ಭಾರತದಲ್ಲೇ ಸಾಧ್ಯ ಇನ್ನು ವಾಹನ ಸುರಕ್ಷತಾ ಪರೀಕ್ಷೆ
ವಾಹನಗಳ ಸುರಕ್ಷತೆಯನ್ನು ಪರೀಕ್ಷೆಗೆ ಗುರಿಪಡಿಸುವ ದೇಶದ ಮೊದಲ ವಾಹನ ಸುರಕ್ಷತಾ ಸಾಮರ್ಥ್ಯ ಪರೀಕ್ಷಗೆ ಮಂಗಳವಾರ ಚಾಲನೆ ನೀಡಲಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ಉದ್ಘಾಟಿಸಿದ್ದಾರೆ
ನವದೆಹಲಿ: ವಾಹನಗಳ ಸುರಕ್ಷತೆಯನ್ನು ಪರೀಕ್ಷೆಗೆ ಗುರಿಪಡಿಸುವ ದೇಶದ ಮೊದಲ ವಾಹನ ಸುರಕ್ಷತಾ ಸಾಮರ್ಥ್ಯ ಪರೀಕ್ಷಗೆ ಮಂಗಳವಾರ ಚಾಲನೆ ನೀಡಲಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ಉದ್ಘಾಟಿಸಿದ್ದಾರೆ.
ಕಾರು ಹಾಗೂ ಅದಕ್ಕಿಂತ ಅಧಿಕ ತೂಕದ (3.5 ಟನ್‌ಗೂ ಹೆಚ್ಚು ತೂಕದ) ವಾಹನಗಳ ಸುರಕ್ಷತಾ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂದರೆ ವಾಹನ ಅಪಘಾತವಾದ ಸಂದರ್ಭದಲ್ಲಿ ಅದರೊಳಗಿದ್ದ ಪ್ರಯಾಣಿಕರು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬುದರ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಗೆ ‘ಭಾರತ್ ಎಸಿಎಪಿ’ (Bharat New Car Assessment Program) ಎಂದು ಹೆಸರಿಡಲಾಗಿದೆ.
ಈಗ ಕೇಂದ್ರ ಸಚಿವರು ಇದಕ್ಕೆ ಸಾಂಕೇತಿಕ ಚಾಲನೆ ನೀಡಿದ್ದು, 2023ರ ಅ.1ರಿಂದ ಸುರಕ್ಷತಾ ಪರೀಕ್ಷೆ ಅಧಿಕೃತವಾಗಿ ಆರಂಭವಾಗಲಿದೆ. ವಿದೇಶದಲ್ಲಿ ಈ ಪರೀಕ್ಷೆಗೆ 2.5 ಕೋಟಿ ರು. ಖರ್ಚಾಗುತ್ತದೆ. ಆದರೆ ಭಾರತದಲ್ಲಿ ಕೇವಲ 60 ಲಕ್ಷ ರು. ತಗಲುತ್ತದೆ. ವಾಹನ ತಯಾರಿಕಾ ಕಂಪನಿಗಳು ಸ್ವಯಂಪ್ರೇರಿತವಾಗಿ ಇಲ್ಲಿ ತಮ್ಮ ವಾಹನಗಳನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಬಹುದು. ಇದರಲ್ಲಿ ದೊರಕಿದ ಫಲಿತಾಂಶ ಆಧರಿಸಿ ಶೂನ್ಯದಿಂದ 5ರವರೆಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಸಚಿವ ಗಡ್ಕರಿ ಹೇಳಿದರು.
ಆಟೋಮೊಬೈಲ್ ಉದ್ಯಮವು ಪರೀಕ್ಷೆಯನ್ನು ಸ್ವಾಗತಿಸಿದ್ದು, ವಾಹನಗಳ ಸುರಕ್ಷತೆ (vehical safety) ಹೆಚ್ಚಿಸಲು ಈ ಪರೀಕ್ಷೆ ನೆರವಾಗುತ್ತದೆ ಎಂದಿದೆ.