ನವದೆಹಲಿ(ಜೂ.29): ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರ ಜತೆ ಘರ್ಷಣೆಗಿಳಿದು ಕೈಸುಟ್ಟುಕೊಂಡಿದ್ದರೂ ಚೀನಾ ತನ್ನ ನರಿ ಬುದ್ಧಿಯನ್ನು ಬಿಟ್ಟಿಲ್ಲ. ಗಲ್ವಾನ್‌ ನದಿಯ ಸಮೀಪದ ವಿವಾದಿತ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ಭಾರೀ ಕುತಂತ್ರ ನಡೆಸಿರುವ ಸಂಗತಿ ಉಪಗ್ರಹ ಚಿತ್ರದಿಂದ ಬಯಲಾಗಿದೆ.

ಗಡಿಯಲ್ಲಿ ಚೀನಾದ ಮಾರ್ಷಲ್‌ ಆರ್ಟ್ಸ್‌ ಫೈಟರ್ಸ್‌: ತಿರುಗೇಟಿಗೆ ಭಾರತದ ಘಾತಕ್‌ ಕಮಾಂಡೋ ಸಜ್ಜು!

ಗಲ್ವಾನ್‌ ಕಣಿವೆಯಲ್ಲಿ ಗಲ್ವಾನ್‌ ನದಿ ತಿರುಗುವ ಸ್ಥಳವೊಂದಿದೆ. ಆ ಜಾಗದ ಕುರಿತು ವಿವಾದವಿದೆ. ನದಿ ತಿರುವಿನವರೆಗೂ ಭಾರತೀಯ ಸೈನಿಕರು ಗಸ್ತು ತಿರುಗುತ್ತಿದ್ದರು. ಆದರೆ ಕೇವಲ 33 ದಿನಗಳಲ್ಲಿ ಜಾಗವನ್ನು ಕಬಳಿಸಿದ್ದೂ ಅಲ್ಲದೆ ಟೆಂಟ್‌ ಎಬ್ಬಿಸಿ ನಿರ್ಮಾಣ ಕಾಮಗಾರಿಗಳನ್ನೂ ಕೈಗೆತ್ತಿಕೊಂಡಿದೆ. ಈ ಮೂಲಕ ಭಾರತೀಯ ಯೋಧರು ಗಸ್ತು ತಿರುಗದಂತೆ ಮಾಡಿಬಿಟ್ಟಿದೆ.

ಮ್ಯಾಕ್ಸರ್‌ ಹಾಗೂ ಪ್ಲಾನೆಟ್‌ ಲ್ಯಾಬ್ಸ್‌ಗಳು ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳ ಪ್ರಕಾರ, ಮೇ 22ರಂದು ಗಲ್ವಾನ್‌ ನದಿ ತಿರುಗುವ ಸ್ಥಳದಲ್ಲಿ ಒಂದು ಟೆಂಟ್‌ ಹಾಗೂ 20 ಯೋಧರು ಕಂಡುಬರುತ್ತಾರೆ. ಆದರೆ ಅದು ಗಸ್ತು ತಿರುಗುವ ಭಾರತೀಯ ಯೋಧರೋ ಅಥವಾ ಚೀನಾ ಸೈನಿಕರೋ ಎಂಬುದು ಸ್ಪಷ್ಟವಿಲ್ಲ.

ಚೀನಾದಿಂದ ಬರುವ ವಿದ್ಯುತ್‌ ಉಪಕರಣಗಳಲ್ಲಿ ವೈರಸ್‌?

ಭಾರತ- ಚೀನಾ ನಡುವೆ ಘರ್ಷಣೆ ಸಂಭವಿಸಿದ ಜೂ.15ರ ಮರುದಿನವಾದ ಜೂ.16ರಂದು ಅಲ್ಲಿ ನಿರ್ಮಾಣ ಚಟುವಟಿಕೆ ಆರಂಭಗೊಂಡಿರುವುದು ಕಂಡುಬಂದಿದೆ. ಅಂದರೆ, ಘರ್ಷಣೆ ಮರುದಿನವೇ ಪರಿಸ್ಥಿತಿಯ ಲಾಭ ಪಡೆದು ಚೀನಾ ನಿರ್ಮಾಣ ಆರಂಭಿಸಿದೆ. ಜೂ.25ರ ವೇಳೆಗೆ ಅಲ್ಲಿ ಸರ್ವಸಜ್ಜಿತ ಟೆಂಟ್‌ಗಳು ತಲೆ ಎತ್ತಿವೆ.

ಜೂ.15ರಂದು ಘರ್ಷಣೆ ಸಂಭವಿಸಿದ್ದು ಈ ನದಿ ದಂಡೆಯ ಆಸುಪಾಸಿನಲ್ಲೇ. ಈಗ ನದಿ ತಿರುವಿನಲ್ಲಿ ಚೀನಾ ತನ್ನ ನೆಲೆ ಸ್ಥಾಪಿಸಿರುವುದರಿಂದ ಭಾರತೀಯರ ಸೈನಿಕರ ನಿಯೋಜನೆಯನ್ನು ಸುಲಭವಾಗಿ ಗಮನಿಸಬಹುದಾಗಿದೆ.