ರಷ್ಯಾದಲ್ಲಿ ಸಂಭವಿಸಿದ ಭೂಕಂಪದಿಂದ ಹಲವು ದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪ್ರಾಣಿಗಳು ನೈಸರ್ಗಿಕ ವಿಕೋಪಗಳನ್ನು ಮುನ್ಸೂಚಿಸುವ ಅದ್ಭುತ ಸಾಮರ್ಥ್ಯ ಹೊಂದಿವೆ. ನಾಯಿಗಳು, ಆನೆಗಳು, ಹಾವುಗಳು ಮುಂತಾದ ಪ್ರಾಣಿಗಳು ವಿಕೋಪದ ಮುನ್ಸೂಚನೆಗಳನ್ನು ತಮ್ಮ ಸೂಕ್ಷ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತವೆ.

ರಷ್ಯಾದ ದೂರದ ಪೂರ್ವ ಭಾಗದ ಕಮ್ಚಟ್ಕಾ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 8.8 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ರಷ್ಯಾ, ಜಪಾನ್ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಈ ಭೂಕಂಪದಿಂದ ರಷ್ಯಾದ ದೂರದ ಪೂರ್ವ ಪ್ರದೇಶಗಳು ನಡುಗಿದ್ದು, ಜಪಾನ್‌ನಲ್ಲಿ ಭೀಕರ ಸುನಾಮಿಯ ಅಲೆಗಳು ಜನರನ್ನು ಭಯಭೀತಗೊಳಿಸಿವೆ. ಅಮೆರಿಕದ ಕರಾವಳಿ ಪ್ರದೇಶಗಳಿಗೂ ಎಚ್ಚರಿಕೆ ಜಾರಿಯಾಗಿದ್ದು, 3 ಮೀಟರ್ ಎತ್ತರದ ಸುನಾಮಿ ಅಲೆಗಳು ಏಳುವ ಸಂಭವವಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ನೈಸರ್ಗಿಕ ವಿಕೋಪ ಪ್ರಾಣಿಗಳಿಗೆ ಮುಂಚಿತವಾಗಿ ಹೇಗೆ ಗೊತ್ತಾಗುತ್ತೆ?

ನೈಸರ್ಗಿಕ ವಿಕೋಪದ ಮುನ್ಸೂಚನೆನೈಸರ್ಗಿಕ ವಿಕೋಪಗಳಾದ ಭೂಕಂಪ ಮತ್ತು ಸುನಾಮಿಗಳ ಮೊದಲು ಪ್ರಾಣಿಗಳು ಮನುಷ್ಯರಿಗಿಂತ ಮುಂಚಿತವಾಗಿ ಅಪಾಯವನ್ನು ಗ್ರಹಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ. ಆನೆಗಳು, ಎಮ್ಮೆಗಳು, ನಾಯಿಗಳು, ಹಾವುಗಳು, ಮೀನುಗಳು ಮತ್ತು ಪಕ್ಷಿಗಳು ಸೇರಿದಂತೆ ವಿವಿಧ ಪ್ರಾಣಿಗಳು ಭೂಕಂಪದ ಮೊದಲು ಉಂಟಾಗುವ ಸೂಕ್ಷ್ಮ ಕಂಪನಗಳನ್ನು ಅಥವಾ ಗಾಳಿಯ ಒತ್ತಡದ ಬದಲಾವಣೆಯನ್ನು ತಮ್ಮ ಸೂಕ್ಷ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತವೆ. ತಜ್ಞರ ಪ್ರಕಾರ, ಈ ಇಂದ್ರಿಯಗಳು ಪರಿಸರದ ಸಣ್ಣ ಬದಲಾವಣೆಗಳನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ, ಇದರಿಂದಾಗಿ ಪ್ರಾಣಿಗಳು ಅಸಾಮಾನ್ಯವಾಗಿ ವರ್ತಿಸುತ್ತವೆ. ಪ್ರಾಣಿಗಳ ವರ್ತನೆಯ ಲಕ್ಷಣಗಳು, ನಾಯಿಗಳು ಭೂಮಿಯ ಮೇಲ್ಮೈಯ ಸೂಕ್ಷ್ಮ ಕಂಪನಗಳನ್ನು ಮೊದಲೇ ಗ್ರಹಿಸಿ, ಜೋರಾಗಿ ಬೊಗಳುತ್ತವೆ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತವೆ.

ಆನೆಗಳು ಸುನಾಮಿಯ ಅಪಾಯವನ್ನು ಬೇಗನೆ ಗ್ರಹಿಸಿ ಕರಾವಳಿ ಪ್ರದೇಶಗಳಿಂದ ದೂರವಾಗುತ್ತವೆ. ಹಾವುಗಳು ಭೂಮಿಯ ಚಲನೆಯನ್ನು ಗುರುತಿಸಿ ಸರಿದಾಡುತ್ತವೆ, ಆದರೆ ಮೀನುಗಳು ಸುನಾಮಿ ಅಥವಾ ಪ್ರವಾಹದ ಅಪಾಯವನ್ನು ಗ್ರಹಿಸಿ ವೇಗವಾಗಿ ಈಜುತ್ತವೆ. ಪಕ್ಷಿಗಳು ವಿಕೋಪದ ಮೊದಲು ಅಸಹಜವಾಗಿ ವರ್ತಿಸಿ ಗುಂಪಿನಲ್ಲಿ ಹಾರಾಟ ನಡೆಸುತ್ತವೆ. ಹಸುಗಳು ಮತ್ತು ಎಮ್ಮೆಗಳಂತಹ ದನಗಳು ಕೆಟ್ಟ ಹವಾಮಾನದ ಸಂದರ್ಭದಲ್ಲಿ ವಿಶ್ರಾಂತಿಯಿಲ್ಲದೆ ಓಡಾಡುವುದನ್ನು ಗಮನಿಸಬಹುದು.

ಈ ಘಟನೆಯು ಪ್ರಾಣಿಗಳು ನೈಸರ್ಗಿಕ ವಿಕೋಪಗಳನ್ನು ಮುನ್ಸೂಚಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿವೆ. ಮನುಷ್ಯರಿಗೆ ಒಂದು ರೀತಿಯ ನೈಸರ್ಗಿಕ ಎಚ್ಚರಿಕೆಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.