3 ವರ್ಷದ ಬಾಲಕ ಬ್ರೈನ್ ಡೆಡ್: ಅಂಗಾಂಗ ದಾನ ಮೂಲಕ ನಾಲ್ವರ ಜೀವ ಉಳಿಸಿದ ಪೋಷಕರು
ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿಂತಿದ್ದ ಬೈಕ್ ಬಿದ್ದಿದ್ದರಿಂದ ಆತನ ತಲೆಬುರುಡೆಯಲ್ಲಿ ರಕ್ತಸ್ರಾವವಾಗಿದೆ. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವಾಡಿಯಾ ಮಕ್ಕಳ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ ಬಾಲಕ ಬ್ರೈನ್ ಡೆಡ್ ಆಗಿದ್ದಾನೆ.
ಮುಂಬೈ (ಜೂನ್ 24, 2023): ಮುಂಬೈನ ಡೊಂಬಿವಿಲಿಯ ಮೂರು ವರ್ಷದ ಬಾಲಕ ತನ್ನ ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ರೂ, ಅಂಗಾಂಗ ದಾನ ಮಾಡುವ ಮೂಲಕ ನಾಲ್ಕು ಜನರ ಜೀವವನ್ನು ಉಳಿಸಿದ್ದಾನೆ. ಬ್ರೈನ್ ಡೆಡ್ ಎಂದು ಘೋಷಿಸಿದ ನಂತರ ಬಾಲಕನ ಪೋಷಕರು ಇತರರಿಗೆ ಸಹಾಯ ಮಾಡಲು ನಿರ್ಧರಿಸಿದರು. ಇನ್ನು, ಈ ಬಾಲಕ ಮುಂಬೈನ ಅತ್ಯಂತ ಕಿರಿಯ ದಾನಿಗಳಲ್ಲಿ ಒಬ್ಬ ಎಂದು ವಲಯ ಕಸಿ ಸಮನ್ವಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿಂತಿದ್ದ ಬೈಕ್ ಬಿದ್ದಿದ್ದರಿಂದ ಆತನ ತಲೆಬುರುಡೆಯಲ್ಲಿ ರಕ್ತಸ್ರಾವವಾಗಿದೆ. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವಾಡಿಯಾ ಮಕ್ಕಳ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಬಾಲಕನ ಸ್ಥಿತಿ ತೀರಾ ಹದಗೆಟ್ಟಿತ್ತು ಮತ್ತು ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. ನಂತರ ಅವರ ಪೋಷಕರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ ನಂತರ, ಮೂತ್ರಪಿಂಡಗಳನ್ನು ಕ್ರಮವಾಗಿ ಪರೇಲ್‌ನ ಗ್ಲೋಬಲ್ ಆಸ್ಪತ್ರೆ ಮತ್ತು ಪೆದ್ದಾರ್ ರಸ್ತೆಯ ಜಸ್ಲೋಕ್ ಆಸ್ಪತ್ರೆಯಲ್ಲಿ ಕೊನೆಯ ಹಂತದ ರೋಗಿಗಳಿಗೆ ನೀಡಲಾಯಿತು.
ಇದನ್ನು ಓದಿ: ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಖ್ಯಾತ ನಟಿ ನಿಧನ: ಅಂಗಾಂಗ ದಾನ ಮಾಡಿದ ಕುಟುಂಬ
ಸ್ಥಳೀಯವಾಗಿ ವಯಸ್ಸಿಗೆ ಅನುಗುಣವಾಗಿ ಸ್ವೀಕರಿಸುವವರು ಲಭ್ಯವಿಲ್ಲದ ಕಾರಣ, ಹೃದಯವನ್ನು ಚೆನ್ನೈಗೆ ಕಳುಹಿಸಲಾಗಿದೆ. ಪೊವೈನಲ್ಲಿರುವ ಎಲ್.ಎಚ್.ಹೀರಾನಂದನಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಯಕೃತ್ತನ್ನು ಒದಗಿಸಲಾಗಿದೆ. ಇನ್ನು, ಈ ಬಗ್ಗೆ ವಾಡಿಯಾ ಆಸ್ಪತ್ರೆಯ ಸಿಇಒ ಮಿನ್ನಿ ಬೋಧನ್ವಾಲಾ ಪೋಷಕರನ್ನು ಶ್ಲಾಘಿಸಿದ್ದು, "ಅವರು ತಮ್ಮ ಊಹಿಸಲಾಗದ ದುಃಖವನ್ನು ಸಹಾನುಭೂತಿ ಮತ್ತು ಉದಾರತೆಯ ಅಸಾಧಾರಣ ಕ್ರಿಯೆಯಾಗಿ ಪರಿವರ್ತಿಸಿದರು, ಅದು ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ’’ ಎಂದೂ ಹೇಳಿದ್ದಾರೆ.
ಈ ಮಧ್ಯೆ, ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಹೊಸ ಮಾರ್ಗಸೂಚಿಗಳ ಪ್ರಕಾರ, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ದಾನಿಯ ದೇಹದ ಸುತ್ತಲೂ ನಿಂತು ನಮಸ್ಕರಿಸಿದರು.
ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್ ಕೀ ಬಾತ್ ಭಾಷಣದಲ್ಲಿ ಜನತೆಗೆ ಮೋದಿ ಕರೆ
ಮನ್ ಕೀ ಬಾತ್‌ನಲ್ಲಿಅಂಗಾಂಗ ದಾನ ಪ್ರೋತ್ಸಾಹಿಸಿದ್ದ ಮೋದಿ
ಅಂಗಾಂಗ ದಾನದ ಬಗ್ಗೆ ಪ್ರಧಾನಿ ಮೋದಿ ಸಹ ಮಾತನಾಡಿದ್ದಾರೆ. 99ನೇ ಮನ್ ಕೀ ಬಾತ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ, ಅಂಗಾಂಗ ದಾನದಂಥ ಮಾನವೀಯ ಕೆಲಸ ಮಾಡಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೇ ‘ಈ ನಿಟ್ಟಿನಲ್ಲಿ ನಮ್ಮ ಏಕರೂಪ ನೀತಿಯನ್ನು ರೂಪಿಸುತ್ತಿದ್ದು, ಅಂಗಾಂಗ ದಾನ ಪ್ರಕ್ರಿಯೆ ಇದರಿಂದ ಸರಳವಾಗಲಿದೆ’ ಎಂದಿದ್ದಾರೆ.
ಭಾನುವಾರ ‘ಮನ್ ಕೀ ಬಾತ್’ ರೇಡಿಯೋ ಭಾಷಣದ 99ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ‘ಮರಣಾನಂತರ ಅಂಗಾಂಗ ದಾನ ಮಾಡುವವರು ಅದನ್ನು ಸ್ವೀಕರಿಸುವವರಿಗೆ ‘ದೇವರ ಸಮಾನ’ ಆಗಿರುತ್ತಾರೆ. ಇತ್ತೀಚೆಗೆ ದೇಶದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿದ್ದು ತೃಪ್ತಿದಾಯಕವಾಗಿದೆ’ ಎಂದರು. ಅಲ್ಲದೇ ತಮ್ಮ ಮೃತ ಕುಟುಂಬ ಸದಸ್ಯರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡ ಕುಟುಂಬಸ್ಥರ ನಿರ್ಧಾರವನ್ನು ಮೋದಿ ಶ್ಲಾಘಿಸಿದರು.
ಇದನ್ನೂ ಓದಿ: ನಿನ್ನಂಥಾ ಮಗಳು ಇಲ್ಲ..ಅಪ್ಪನಿಗೆ ಯಕೃತ್ತು ದಾನ ಮಾಡಿದ 17 ವರ್ಷದ ಮಗಳು