ತಾಯಿ ಶವಸಂಸ್ಕಾರದ ಬೆನ್ನಲ್ಲೇ ಕೆಲಸಕ್ಕೆ ಹಾಜರಾದ ವೈದ್ಯರು!| ತಾಯಿ ಸಾವಿನ ದುಃಖದಲ್ಲೂ ಕರ್ತವ್ಯ ನಿಷ್ಠೆ

ವಡೋದರಾ(ಏ.19): ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಅವಿರತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಗುಜರಾತಿನಲ್ಲಿ ಇಬ್ಬರು ವೈದ್ಯರು ತಮ್ಮ ತಾಯಂದಿರು ನಿಧನದ ದುಃಖದ ನಡುವೆಯೂ ಕೆಲವೇ ಗಂಟೆಗಳಲ್ಲಿ ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಎಸ್‌ಎಸ್‌ಜಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಶಿಲ್ಪಾ ಪಟೇಲ್‌ ಅವರ ತಾಯಿ ಕಾಂತಾ ಅಂಬಾಲಾಲ್‌ ಪಟೇಲ್‌ (77) ಕೊರೋನಾದಿಂದ ಗುರುವಾರ ಮಧ್ಯಾಹ್ನ 3.30ರ ಸಮಯದಲ್ಲಿ ನಿಧನರಾಗಿದ್ದರು. ತಾಯಿಯ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಪೂರೈಸಿದ ಶಿಲ್ಲಾ, 6 ಗಂಟೆಯ ಬಳಿಕ ಪಿಪಿಇ ಕಿಟ್‌ ಧರಿಸಿ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ತವ್ಯವೇ ಮುಖ್ಯ ಎಂದು ತಾಯಿ ಹೇಳಿದ್ದ ಮಾತಿನಂತೆ ಶಿಲ್ಪಾ ನಡೆದುಕೊಂಡಿದ್ದಾರೆ.

ಅದೇ ರೀತಿ ಗುಜರಾತಿನ ಇನ್ನೊಬ್ಬ ವೈದ್ಯ ರಾಹುಲ್‌ ಪಾರ್ಮರ್‌ ಅವರ ತಾಯಿ ಕಾಂತಾ ಪಾರ್ಮರ್‌ (67) ಅನಾರೋಗ್ಯ ಸಮಸ್ಯೆಯಿಂದ ಗಾಂಧಿನಗರದಲ್ಲಿ ಗುರುವಾರ ನಿಧನರಾಗಿದ್ದರು. ಕೋವಿಡ್‌ ನಿರ್ವಹಣೆ ನೋಡಲ್‌ ಅಧಿಕಾರಿಯಾಗಿರುವ ರಾಹುಲ್‌ ಪಾರ್ಮಕರ್‌ ತಾಯಿಯ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿ ಶುಕ್ರವಾರ ಪುನಃ ಕೆಲಸಕ್ಕೆ ಹಾಜರಾಗಿದ್ದಾರೆ. ಇದೊಂದು ನೈಸರ್ಗಿಕ ಸಾವು. ಹೀಗಾಗಿ ಕುಟುಂಬದ ಜೊತೆ ಅಂತ್ಯಕ್ರಿಯೆಯನ್ನು ಮುಗಿಸಿ ಕೆಲಸಕ್ಕೆ ಮರಳಿದ್ದೇನೆ ಎಂದು ಪಾರ್ಮರ್‌ ಹೇಳಿದ್ದಾರೆ.