ಕೇದಾರನಾಥ ಯಾತ್ರೆ ಕುದುರೆಗೆ ಬಲವಂತವಾಗಿ ಗಾಂಜಾ ನೀಡಿ ಹಿಂಸೆ, ವಿಡಿಯೋದಿಂದ ಎಚ್ಚೆತ್ತ ಪೊಲೀಸ್!
ದೇವ ಭೂಮಿ ಉತ್ತರಖಂಡದಲ್ಲಿ ಅಮಾನವೀಯ ಘಟನೆ ನಡೆದಿದೆ. ಕೇದರಾನಾಥ ಯಾತ್ರೆಗೆ ಯಾತ್ರಿಕರನ್ನ ಹೊತ್ತೊಯ್ಯುವ ಕುದುರೆಗೆ ಬಲವಂತವಾಗಿ ಗಾಂಜಾ ನೀಡಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಉತ್ತರಖಂಡ(ಜೂ.23): ಪವಿತ್ರ ಕ್ಷೇತ್ರ ಉತ್ತರಖಂಡದ ಕೇದಾರನಾಥದಲ್ಲೇ ಅತ್ಯಂತ ಕೆಟ್ಟ ಹಾಗೂ ಚಿತ್ರ ಹಿಂಸೆ ನೀಡಿದ ಘಟನೆ ನಡೆದಿದೆ. ಕೇದಾರನಾಥ ಯಾತ್ರೆ ಕೈಗೊಳ್ಳುವ ಯಾತ್ರಿಕರನ್ನು ಹೊತ್ತೊಯ್ಯುವ ಕುದುರೆಗೆ ಬಲವಂತವಾಗಿ ಗಾಂಜಾ ನೀಡಿದ ಘಟನೆ ನಡೆದಿದೆ. ಕುದುರೆ ನಿರ್ವಾಹಕರು ಬಲವಂತವಾಗಿ ಕುದುರೆ ಬಾಯಿಗೆ ಗಾಂಜಾ ಇಟ್ಟು ಮೂಗು ಬಾಯಿ ಮುಚ್ಚಿ ಧೂಮಪಾನ ಮಾಡಿಸಿದ್ದಾರೆ. ಪ್ರಾಣಿ ಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿ ಇದೀಗ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕೇದಾರನಾಥ ಯಾತ್ರೆಯಲ್ಲಿ ಹೆಚ್ಚಾಗಿ ಯಾತ್ರಿಕರು ಕುದುರೆ ಬಳಕೆ ಮಾಡುತ್ತಾರೆ. ಬೆಟ್ಟ ಏರಿ ಸಾಗಲು ಕುದರೆ ಸಾವರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಕುದುರೆ ಸವಾರಿ ಹಾಗೂ ಕುದರೆ ನಿರ್ವಾಹಕರು ಅತೀ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ಈ ವಿಡಿಯೋ ಹೊರಬಂದ ಬೆನ್ನಲ್ಲೇ ಪ್ರಾಣಿ ಹಿಂಸೆ ಜೊತೆಗೆ ಯಾತ್ರಿಕರ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ.
ಕೇದಾರನಾಥ ಯಾತ್ರಿಕರ ಮೇಲೆ ಕುದುರೆ ಸೇವೆ ಸಿಬ್ಬಂದಿಗಳಿಂದಲೇ ಹಲ್ಲೆ, ವಿಡಿಯೋ ವೈರಲ್!
ಈ ವಿಡಿಯೋದಲ್ಲಿ ಇಬ್ಬರು ಕುದುರೆ ನಿರ್ವಾಹಕರು ಕುದುರೆಯ ಬಾಯಿಗೆ ಗಾಂಜಾ ಇಟ್ಟಿದ್ದಾರೆ. ಬಳಿಕ ಇಬ್ಬರು ಕುದುರೆಯ ಬಾಯಿ ಹಾಗೂ ಮೂಗು ಗಟ್ಟಿಯಾಗಿ ಮುಚ್ಚಿ ಹಿಡಿದಿದ್ದಾರೆ. ಕುದುರೆ ಚಡಪಡಿಸುತ್ತಿದ್ದರೂ ಕುದುರೆಗೆ ಗಾಂಜಾ ಸೇವಿಸುವಂತೆ ಮಾಡಿದ್ದಾರೆ. ಒಂದು ಬಾರಿ ಮಾತ್ರವಲ್ಲ, ಹಲವು ಬಾರಿ ಈ ರೀತಿ ಮಾಡಿದ್ದಾರೆ. ಕುದುರೆ ನಿರ್ವಾಹಕರು ಗಾಂಜಾ ಸೇವಿಸಿ ಈ ರೀತಿ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹಲವು ಪ್ರಾಣಿ ದಯಾ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದ್ದ ಬೆನ್ನಲ್ಲೇ ಕೇದಾರನಾಥ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತದೆ. ಈ ಘಟನೆ ಕುರಿತು ಮಾಹಿತಿಗಳಿದ್ದರೆ ಹಂಚಿಕೊಳ್ಳಲು ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?
ಕೇದಾರನಾಥದಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಚಿತ್ರ ಹಿಂಸೆ ಇದೇ ಮೊದಲಲ್ಲ. ಪೋಷಕಾಂಶಗಳ ಕೊರತೆ, ಸರಿಯಾದ ರೀತಿಯಲ್ಲಿ ಆಹಾರ ನೀಡದ ಪ್ರಾಣಿಗಳನ್ನು ಮಾಲೀಕರು ಬಳಕೆ ಮಾಡುತ್ತಿದ್ದಾರೆ. ಇದು ಯಾತ್ರಿಕರನ್ನು ಹೊತ್ತುಯ್ಯುವ ವೇಳೆ ಕುಸಿದು ಬಿದ್ದು ಹಲವು ಯಾತ್ರಿಕರು ಗಾಯಗೊಂಡ ಘಟನೆ ನಡೆದಿದೆ. ಇಷ್ಟೇ ಅಲ್ಲ ಈ ಕುದರೆಗಳ ನಿರ್ವಾಹಕರು ಮತ್ತೆ ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡಿರುವ ಘಟನೆಗಳು ಹಲವು ಬಾರಿ ನಡೆದಿದೆ.
ಇತ್ತೀಚೆಗೆ ಕೇದಾರನಾಥ ಯಾತ್ರೆಗೆ ಬಂದ ಯಾತ್ರಿಕರ ಮೇಲೆ ಕುದುರೆ ನಿರ್ವಾಹಕರ ಹಲ್ಲೆ ನಡೆಸಿದ ಘಟನೆಯೂ ನಡೆದಿದೆ. ಪವಿತ್ರ ಕ್ಷೇತ್ರ ಕೇದಾರನಾಥ ಇದೀಗ ವಿವಾದಗಳು, ಹಿಂಸೆ, ಅಮಾನವೀಯ ಘಟನೆಗಳಿಂದಲೇ ಸದ್ದು ಮಾಡುತ್ತಿರುವುದು ದುರಂತ.