Asianet Suvarna News Asianet Suvarna News

ಕನ್ನಡ ಬೆಳೆಯಬೇಕಾದರೆ ಜನಮನದಲ್ಲಿ ವ್ಯಾಪಕ ಬದಲಾವಣೆಯಾಗಬೇಕು: ಸುದೀತಿ ಅಂಬಳೆ

ಕನ್ನಡ ಬೆಳೆಯಬೇಕಾದರೆ ಮನೆ ಮನೆಯಲ್ಲಿ, ಜನಮನದಲ್ಲಿ ವ್ಯಾಪಕವಾದ ಮತ್ತು ಸ್ಥಾಯಿಯಾದ ಬದಲಾವಣೆ ಆಗಬೇಕು ಎಂದು ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ದೆಹಲಿಯ ಕುಮಾರಿ ಸುದೀತಿ ಅಂಬಳೆ ತಿಳಿಸಿದರು. 
 

horanadu makkala kannada sahitya sammelana in new delhi gvd
Author
First Published Nov 16, 2023, 9:31 AM IST

ನವದೆಹಲಿ (ಜಿಪಿ ರಾಜರತ್ನಂ ವೇದಿಕೆ) (ನ.16): ಕನ್ನಡ ಬೆಳೆಯಬೇಕಾದರೆ ಮನೆ ಮನೆಯಲ್ಲಿ, ಜನಮನದಲ್ಲಿ ವ್ಯಾಪಕವಾದ ಮತ್ತು ಸ್ಥಾಯಿಯಾದ ಬದಲಾವಣೆ ಆಗಬೇಕು ಎಂದು ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ದೆಹಲಿಯ ಕುಮಾರಿ ಸುದೀತಿ ಅಂಬಳೆ ತಿಳಿಸಿದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ದೆಹಲಿ ಘಟಕದ ಆಶ್ರಯದಲ್ಲಿ ದೆಹಲಿಯ ಸತ್ಯಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ ಈ ಜವಾಬ್ದಾರಿಯು ಸಮಾಜದ ಪ್ರತಿಯೊಬ್ಬರದ್ದಾಗಬೇಕು ಎಂದರು .

ಇಂದು ನಾವು ಪಣ ತೊಟ್ಟು ಜನಾಂದೋಲನ ಮಾಡಿದ್ದೇ ಆದರೆ ಆ ಒಕ್ಕೊರಲಿನ ಧ್ವನಿಯು  ಪರಿಣಾಮಕಾರಿಯಾಗಲಿದೆ.  ಕಲಿಕೆ ಎನ್ನುವುದು ಕಲಿಸುವವರ ಮತ್ತು ಕಲಿಯುವವರ ಆಸಕ್ತಿಯನ್ನು ಅವಲಂಬಿಸಿದ್ದು ಈ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸುವುದು ಹೇಗೆ ಎನ್ನುವುದೇ ಹೊರನಾಡ ಕನ್ನಡಿಗರ ಮುಂದಿರುವ ಸವಾಲಾಗಿದೆ. ಇದರಲ್ಲಿ ಪೋಷಕರ ಪಾತ್ರವೇ ಮುಖ್ಯವೆಂದರು. ಕನ್ನಡ ಮೊದಲು ಮನೆಯ ಮಾತಾಗಬೇಕು. ಹೊರನಾಡ ಕನ್ನಡದ ಮಕ್ಕಳಿಗೆ ಕನ್ನಡದ ಪುಸ್ತಕವನ್ನು ಓದಿ ಎಂದು ಒಮ್ಮೆಗೆ ಹೇಳಿದರೆ ಅದು ಹತ್ತಲಾಗದ ಬೆಟ್ಟದಂತೆ ಕಾಣುತ್ತದೆ . ಈ ಸಮಸ್ಯೆಗೆ ಪರಿಹಾರ ಖಂಡಿತ ಇದೆ. 

ಇನ್ನೆಂದೂ ಇಂಥ ಘಟನೆ ಆಗದಂತೆ ನೋಡಿಕೊಳ್ಳುವೆ: ಪೊಲೀಸ್ ವಿಚಾರಣೆ ವೇಳೆ ನಟ ದರ್ಶನ್ ಮಾತು

ಕನ್ನಡ ಓದಲು ತೊಂದರೆ ಇರಬಹುದು, ಆದರೆ ಅನುಭವಿಸಲು ಏನು ತೊಂದರೆ ಇಲ್ಲವಲ್ಲ; ಕಥೆ, ಪದ್ಯ ,ಭಾವಗೀತೆ, ಜನಪದ ಗೀತೆ , ಹಾಸ್ಯ ಸಂಜೆ, ನಾಟಕಗಳು ಕನ್ನಡದ ಜ್ಞಾನ ಭಂಡಾರ ಮತ್ತು ಸೊಬಗನ್ನು ಹಂಚುತ್ತವೆ.  ಇವೆಲ್ಲವನ್ನೂ ಅನುಭವಿಸುವ ಅವಕಾಶ ಒದಗಿಸಬೇಕು. ಪುಸ್ತಕ ಓದಲಾಗದಿದ್ದರೆ ಏನಂತೆ? ಕನ್ನಡ ಪ್ರಕಾಶಕರು ಮಕ್ಕಳ ಸಂಬಂಧಿತ ಆಡಿಯೋ ಪುಸ್ತಕಗಳನ್ನು ಹೊರ ತರಬೇಕೆಂದರು.ಕನ್ನಡ ಎಂದರೆ ಸಂತೋಷ ಮತ್ತು ಆನಂದದ ಅನುಭವ ಎನಿಸುತ್ತದೆ .ಈ ಹಂತದಲ್ಲಿ ಸ್ವಯಂ ಪ್ರೇರಣೆಯಿಂದ ಕನ್ನಡ ಕಲಿಯಲು ,ಕಲಿಸಲು ಬಳಸಲು , ಬೆಳೆಸಲು ಮಕ್ಕಳೇ ಮುಂದಾಗುತ್ತಾರೆ. 

ಸರಕಾರ , ಸಮಾಜ , ಕನ್ನಡ ಪರ ಸಂಘಟನೆಗಳು, ಉದ್ಯಮಿಗಳು ಒಂದುಗೂಡಿ ನವಯುಗದ ಮಾಧ್ಯಮಗಳಲ್ಲಿ ಕೆಲಸ ಮಾಡುವ ಅಗತ್ಯವಿದೆ. ಮುಂದೊಂದು ದಿನ ತಾಯಿ ಭುವನೇಶ್ವರಿಗೆ ಜ್ಞಾನಪೀಠ ಪ್ರಶಸ್ತಿಯ ಕಿರೀಟ ಹಾಕಿಸುವ ಕುಡಿ ಹೊರನಾಡ ಕನ್ನಡಿಗರಲ್ಲಿ ಹುಟ್ಟಲೆಂದರು. ತಾಯಿ ಭುವನೇಶ್ವರಿಯ ಸೇವೆ ಮಾಡಲು ನಾವು ಕರ್ನಾಟಕದಲ್ಲಿ ಇರಬೇಕಿಲ್ಲ. ನಮ್ಮಲ್ಲಿ ಕರ್ನಾಟಕ ಇರಬೇಕು. ನಾವೇ ಕನ್ನಡದ, ಕರ್ನಾಟಕದ ರಾಯಭಾರಿಗಳಾಗಬೇಕು. ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯ ಕರ್ನಾಟಕದ ಗಡಿಗಷ್ಟೇ ಸೀಮಿತಗೊಳಿಸಬಾರದು, ಹೊರನಾಡಿಗೂ ಹರಡುವ ಸುವರ್ಣ ಅವಕಾಶ ನಮಗಿದೆ ಎಂದರು.

ವಿನಂತಿ:  ಭಾರತದ ಎಲ್ಲೆಡೆ ಕನ್ನಡದ ಮಕ್ಕಳಲ್ಲಿ ಕಲೆ, ಸಂಸ್ಕೃತಿಯನ್ನು ಬಿತ್ತುವ ಪ್ರಯತ್ನ ಮಾಡುತ್ತಿರುವ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪವಿತ್ರ ಯಜ್ಞ ಕಾರ್ಯಕ್ಕೆ ಕರ್ನಾಟಕ ರಾಜ್ಯ ಸರಕಾರವು ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಹಾಗೂ ಕನ್ನಡಪರ ಕಾನೂನುಗಳನ್ನು ಸಕ್ರಿಯಗೊಳಿಸಬೇಕೆಂದು ವಿನಂತಿಸಿದರು. 

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಸಾಹಿತಿ ಡಾ. ನಾ. ಸೋಮೇಶ್ವರ ಮಾತನಾಡಿ ಕನ್ನಡ ಭಾಷೆಗೆ 5000 ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿದೆ. ನ್ಯಾನೋ ತಾಂತ್ರಿಕತೆ ಆವಿಷ್ಕಾರವಾಗಿದ್ದು ಕನ್ನಡಿಗರಿಂದ ಕೇವಲ ಅಂಕಿಗಳನ್ನು ಬಳಸಿ ಮಹಾಕಾವ್ಯ ರಚಿಸಿದ ಕೀರ್ತಿ ಕನ್ನಡಿಗರದ್ದು. ಮೊಬೈಲ್ ಬಳಕೆಯು ಚಟ ಮತ್ತು ರೋಗವಾಗುತ್ತಿದ್ದು ಇದನ್ನು ಗುಣಪಡಿಸಲು ನಿಮ್ಹಾನ್ಸ್ ನಲ್ಲಿ ಪ್ರತ್ಯೇಕ ವಿಭಾಗವನ್ನೇ ತೆರೆಯಲಾಗಿದೆ. ಮಕ್ಕಳ ಮೇಲೆ ಪೋಷಕರು ತಮ್ಮ ಆಶೋತ್ತರಗಳನ್ನು ಹೇರಬಾರದೆಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯ ಡಾ|| ಎಲ್. ಹನುಮಂತಯ್ಯ ಮಾತನಾಡಿ ಮಕ್ಕಳೇ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆ ಇದಾಗಬೇಕೆಂದರು. ವಿಧಾನ ಪರಿಷತ್ ಮಾಜಿ ಶಾಸಕ ಎಂ. ಎ ಗೋಪಾಲಸ್ವಾಮಿ , ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ , ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ. ಕೆ ಬಸವರಾಜು, ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್, ಸಂಘಟನಾ ಕಾರ್ಯದರ್ಶಿ ಅರುಣ್, ಸಹ ಅಧ್ಯಕ್ಷರುಗಳಾದ ನೂತನ ಕೈಕಾಡೆ, ರಕ್ಷಿತ ಕಾಶೀನಾಥ ರಾಮ ತೀರ್ಥ, ಸ್ವಾತಿ ನಾಯಕ್, ರಕ್ಷಿತಾ, ವೆಂಕಟೇಶ್ ಕುಲಕರ್ಣಿ ಉಪಸ್ಥಿತರಿದ್ದರು.

ಸಂಬಂಧದ ಬೆಸುಗೆ ಈ ಸಮ್ಮೇಳನದಿಂದ ಗಟ್ಟಿಯಾಗಿದೆ . ಗ್ರಾಮೀಣ ಭಾಗದ ಕಲೆಗಳ ಪುನರುತ್ಥಾನ ಆಗಬೇಕು. ಅವುಗಳನ್ನು ಉಳಿಸುವ ಕೆಲಸ ಸರ್ಕಾರದಿಂದಲೂ ಆಗಬೇಕು. ಮುಖ್ಯಮಂತ್ರಿಯೊಂದಿಗೆ ಬಗ್ಗೆ ಮಾತನಾಡಿ ಪರಿಷತ್ತಿಗೆ ಶಾಶ್ವತ ಅನುದಾನಕ್ಕಾಗಿ ಒತ್ತಾಯಿಸಲಾಗುವುದು.
-ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ 

ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಖಾಲಿ: ಪ್ರಿಯಾಂಕ್ ಖರ್ಗೆ

ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸಲು ಮಕ್ಕಳ ಸಾಹಿತ್ಯ ಪರಿಷತ್ತು ಪೂರಕವಾಗಿ ಕೆಲಸ ಮಾಡುತ್ತಿದೆ . ಸರಕಾರದ ಸಹಭಾಗಿತ್ವದಲ್ಲಿ ಇಂತಹ ಸಮ್ಮೇಳನಗಳು ನಡೆಯುವಂತಾಗಬೇಕು . ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
-ಸಿ.ಎನ್.ಬಾಲಕೃಷ್ಣ, ಶಾಸಕರು

Follow Us:
Download App:
  • android
  • ios