'ಗುಂಡಿನ ಮತ್ತೇ ಗಮ್ಮತ್ತು... ಅಳತೆ ಮೀರಿದರೇ ಆಪತ್ತು..' ಅನ್ನೋ ಸಾಧು ಮಹರಾಜ್‌ ಡೈಲಾಗ್‌ ನೆನಪಿರಬೇಕಲ್ವಾ. ಆದರೆ, ಈ ವರ್ಷದ ಹೋಳಿ ಸಂಭ್ರಮಕ್ಕೆ ದೆಹಲಿಯ ಜನತೆ ಎಲ್ಲಾ ಅಳತೆಯನ್ನು ಮೀರಿದ್ದಾರೆ. ಹೋಳಿಯ ಒಂದೇ ದಿನ ದೆಹಲಿ ಜನ 26 ಲಕ್ಷ ಬಾಟಲ್‌ ಮದ್ಯವನ್ನು ಮೋರಿದ್ದಾರೆ ಅನ್ನೋದು ಈಗ ಸಿಕ್ಕಿರುವ ಮಾಹಿತಿ.

ನವದೆಹಲಿ (ಮಾ.8): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಬಾರಿ ಹೋಳಿ ಸಂಭ್ರಮವನ್ನು ಭರ್ಜರಿಯಾಗಿ ಆಚರಣೆ ಮಾಡಲಾಗಿದೆ ಅನ್ನೋದು ಅಬಕಾರಿ ಇಲಾಖೆಯ ಅಧಿಕೃತ ದಾಖಲೆಗಳಿಂದಲೂ ಬಹಿರಂಗವಾಗಿದೆ. ದೆಹಲಿಯ ಗಲ್ಲಿಗಲ್ಲಿಗಳೂ ಕೂಡ ಮದ್ಯದ ನಶೆಯಲ್ಲಿದ್ದವು ಅನ್ನೋದಂತೂ ಸತ್ಯ. ಅದಕ್ಕೆ ಸಾಕ್ಷಿ ಎನ್ನುವಂತೆ ಹೋಳಿ ಹಬ್ಬದ ಒಂದೇ ದಿನ ಈವರೆಗಿನ ದಾಖಲೆಯ 26 ಲಕ್ಷ ಬಾಟಲ್‌ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಇಳಿಸಿದೆ. ದೆಹಲಿಯ ಪ್ರತಿ ಗಲ್ಲಿಯಲ್ಲೂ ಸಂಪೂರ್ಣ ಉತ್ಸಾಹದಿಂದ ಹೋಳಿಯನ್ನು ಆಚರಿಸಲಾಗಿದೆ ಎನ್ನುವುದು ಮದ್ಯ ಮಾರಾಟ ಮಾಹಿತಿಯಿಂದಲೂ ಅರ್ಥ ಮಾಡಿಕೊಳ್ಳಬಹುದಾಗಿದೆ. ನಿಮಗೆ ಗೊತ್ತಿರಲಿ, ಈ ಬಾರಿಯ ಹೋಳಿ ಸಂಭ್ರಮದಲ್ಲಿ ಮಾರಾಟವಾಗಿರುವಷ್ಟು ಮದ್ಯ, ಹೊಸ ವರ್ಷದ ಸಮಯದಲ್ಲೂ ಮಾರಾಟವಾಗಿರಲಿಲ್ಲ. ಹಿಂದಿನ ಎಲ್ಲಾ ದಾಖಲೆಗಳನ್ನು ಈ ಬಾರಿಯ ಹೋಳಿ ಮೀರಿದೆ ಎನ್ನುವುದನ್ನು ಮಾಹಿತಿಯಿಂದ ತಿಳಿಯಬಹುದಾಗಿದೆ. ಅಬಕಾರಿ ಇಲಾಖೆ ನೀಡಿರುವ ದಾಖಲೆಯ ಪ್ರಕಾರ, ಮಾರ್ಚ್‌ 6 ರಂದು ಒಂದೇ ದಿನ ಬರೋಬ್ಬರಿ 58.8 ಕೋಟಿ ರೂಪಾಯಿ ಮೌಲ್ಯದ, 26,02, 043 ಮದ್ಯದ ಬಾಟಲಿಗಳನ್ನು ಖರೀದಿ ಮಾಡಿದ್ದಾರೆ. ಅದೇ ಈ ಬಾರಿಯ ಹೊಸ ವರ್ಷದ ಸಮಯದಲ್ಲಿ ದೆಹಲಿಯಲ್ಲಿ 20 ಲಕ್ಷ ಮದ್ಯದ ಬಾಟಲಿಗಳು ಮಾರಾಟವಾಗಿದ್ದವಂತೆ.

ಇನ್ನು ಮಾರ್ಚ್ ತಿಂಗಳ ಒಂದೇ ವಾರದ ಮದ್ಯ ಮಾರಾಟ ದೆಹಲಿಯಲ್ಲಿ ಹಿಂದಿನ ತಿಂಗಳ ದಾಖಲೆಯನ್ನೂ ಮೀರಿದೆ. ಹೋಳಿಯವರೆಗೆ ದೆಹಲಿಯಲ್ಲಿ 238 ಕೋಟಿ ರೂಪಾಯಿಯ 1.13 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿದೆಯಂತೆ. ಮಾರ್ಚ್‌ 1 ರಂದು 27.9 ಕೋಟಿ ರೂಪಾಯಿ ಮೌಲ್ಯದ 15,230,48 ಮದ್ಯದ ಬಾಟಲಿಗಳು ಮಾರಾಟವಾಗಿದ್ದರೆ, ಮಾರ್ಚ್‌ 2 ರಂದು 26.5 ಕೋಟಿ ರೂಪಾಯಿಯ 14,56,725, ಮಾರ್ಚ್‌ 3 ರಂದು 31.9 ಕೋಟಿ ರೂಪಾಯಿ ಮೌಲ್ಯದ 16,49,855, ಮಾರ್ಚ್‌ 4 ರಂದು 35.5 ಕೋಟಿ ರೂಪಾಯಿ ಮೌಲ್ಯದ 17,87,656, ಮಾರ್ಚ್‌ 5 ರಂದು 46.5 ಕೋಟಿ ರೂಪಾಯಿ ಮೌಲ್ಯದ 22,90,444 ಹಾಗೂ ಮಾರ್ಚ್‌ 6 ರಂದು 58.8 ಕೋಟಿ ರೂಪಾಯಿ ಮೌಲ್ಯದ 26, 02, 043 ಮದ್ಯದ ಬಾಟಲಿಗಳು ಮಾರಾಟವಾಗಿದೆ.

New year 2023: ಹೊಸ ವರ್ಷಾಚಾರಣೆ : ಒಂದೇ ದಿನದಲ್ಲಿ ₹183 ಕೋಟಿ ರು. ಮೌಲ್ಯದ ಮದ್ಯ ಮಾರಾಟ!

ಇನ್ನು ಮಾರ್ಚ್‌ 7 ರಂದು ಅಂದಾಜು 20 ಲಕ್ಷ ಬಾಟಲಿಗಳು ಈಗಾಗಲೇ ಮಾರಟವಾಗಿದೆಯಂತೆ, ಆದರೆ ಅಧಿಕೃತ ಅಂಕಿ-ಅಂಶ ಇನ್ನಷ್ಟೇ ಸಿಗಬೇಕಿದೆ. ಅಧಿಕಾರಿಗಳ ಪ್ರಕಾರ, ಹೆಚ್ಚಿನ ಮದ್ಯದ ಅಂಗಡಿಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ಪ್ರಮುಖ ಬಿಯರ್ ಬ್ರಾಂಡ್‌ಗಳು ಖಾಲಿಯಾಗಿವೆ. ಋತುವಿನ ಆರಂಭದಲ್ಲಿಯೇ ಕೆಲವರು ಮದ್ಯದ ಬಾಟಲಿಗಳನ್ನು ಸಂಗ್ರಹಿಸಲು ಆರಂಭಿಸಿದ್ದರು ಎನ್ನುವ ಮಾಹಿತಿಯೂ ಲಭಿಸಿದೆ.

New year 2023 : ಹೊಸ ವರ್ಷ ಸ್ವಾಗ​ತಕ್ಕೆ ಕೇಕ್‌, ಮದ್ಯ ಮಾರಾಟ ಜೋರು

ಮಾರ್ಚ್ 8 ರಂದು ಡ್ರೈ ಡೇ ಎಂದು ಪಟ್ಟಿ ಮಾಡಿರುವುದರಿಂದ ಹೋಳಿ ಆಚರಣೆಯ ಕಾರಣ ದೆಹಲಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳು ಬುಧವಾರ ಮುಚ್ಚಲ್ಪಟ್ಟಿದ್ದರು. ಇಡೀ ವರ್ಷದಲ್ಲಿ ಇಲ್ಲಿಯವೆಗೆ ಅತೀ ಹೆಚ್ಚಿನ ಮದ್ಯದ ಬೇಡಿಕೆ ಕಂಡು ಬಂದ ಸಮಯ ಇದಾಗಿದೆ. ಮದ್ಯದ ಬಾಟಲಿಗಳ ಮೇಲಿನ ಅಬಕಾರಿಯಿಂದ 5,000 ಕೋಟಿ ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್) 1,100 ಕೋಟಿ ಸೇರಿದಂತೆ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆ 6100 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ನಗರದಲ್ಲಿ ಅಬಕಾರಿ ಇಲಾಖೆ ಸುಮಾರು 560 ಅಂಗಡಿಗಳನ್ನು ನಡೆಸುತ್ತಿದೆ.