ಒಂದೇ ದಿನ 183 ಕೋಟಿ ರು. ಮೌಲ್ಯದ ಮದ್ಯ ಮಾರಾಟ! ಫುಲ್‌ ಟೈಟ್‌ ಹೊಸ ವರ್ಷಾಚರಣೆಗೆ ಭರ್ಜರಿ ಮದ್ಯ ವ್ಯಾಪಾರ ಒಂದು ವಾರದಲ್ಲಿ 1262 ಕೋಟಿ ರು. ಮದ್ಯ ವಹಿವಾಟು

ಬೆಂಗಳೂರು (ಜ.2) :  ಎರಡು ವರ್ಷಗಳ ಬಳಿಕ ಯಾವುದೇ ಕೋವಿಡ್‌ ನಿರ್ಬಂಧಗಳಿಲ್ಲದೇ ನಡೆದ ಹೊಸ ವರ್ಷಾಚರಣೆಯನ್ನು ರಾಜ್ಯದ ಜನತೆ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಡಿ.31ರಂದು ರಾಜ್ಯಾದ್ಯಂತ ಪಾನಪ್ರಿಯರು ಒಂದೇ ದಿನ 183 ಕೋಟಿ ರು. ಮೌಲ್ಯದ ಮದ್ಯ ಖರೀದಿ ಮೂಲಕ ನಶೆಯಲ್ಲಿ ಮಿಂದೆದ್ದಿದ್ದಾರೆ. ಜನ ಹೀಗೆ ನಶೆಯಲ್ಲಿ ಮಿಂದೆದಿದ್ದು ಕೇವಲ ಡಿ.31ಕ್ಕೆ ಮಾತ್ರವಲ್ಲ. ಅದಕ್ಕೆ ಹಿಂದಿನ 6 ದಿನಗಳಲ್ಲೂ ಜನರು ಭಾರೀ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದು, ರಾಜ್ಯದಲ್ಲಿ ಒಂದು ವಾರದಲ್ಲಿ ಒಟ್ಟಾರೆ 1262 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.

2021 ಮತ್ತು 2022ರ ಹೊಸವರ್ಷ(New year) ಸಂದರ್ಭದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಿದ್ದ ಕಾರಣ ಹೊಸ ವರ್ಷದ ಸಂಭ್ರಮಕ್ಕೆ ಒಂದಿಷ್ಟುಕಡಿವಾಣ ಹಾಕಲಾಗಿತ್ತು. ಆದರೆ, ಈ ಬಾರಿ ಹೋಟೆಲ್‌, ಬಾರ್‌, ರೆಸ್ಟೋರೆಂಟ್‌(Bar & restorants), ಪಬ್‌ಗಳಲ್ಲಿ ಪಾರ್ಟಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಅಲ್ಲದೆ, ಈ ಬಾರಿ ಹೊಸ ವರ್ಷ ಮತ್ತು ವಾರಾಂತ್ಯ ಒಮ್ಮೆಗೆ ಬಂದಿತ್ತು. ಹೀಗಾಗಿ, ಹೊಸ ವರ್ಷದ ಪಾರ್ಟಿಗಳು ಹೆಚ್ಚು ನಡೆದಿದ್ದು, ಮದ್ಯಮಾರಾಟ ಏರಿಕೆಯಾಗಿ ಅಬಕಾರಿ ಇಲಾಖೆ ಖಜಾನೆ ಕೂಡಾ ತುಂಬಿದೆ.

ಹೊಸ ವರ್ಷಾಚರಣೆಯಲ್ಲಿ ಎಚ್ಚರಿಕೆ ಇರಲಿ, ಮೆಟ್ರೋ ಸಿಟಿ ಪೈಕಿ ಬೆಂಗ್ಳೂರಲ್ಲಿ ಗರಿಷ್ಠ ಕೋವಿಡ್ ಕೇಸ್!

ಅಬಕಾರಿ ಇಲಾಖೆ(Department of Excise) ಮಾಹಿತಿಯಂತೆ, ಡಿಸೆಂಬರ್‌ ಕೊನೆಯ ವಾರದ ವಹಿವಾಟನ್ನು ಹೊಸವರ್ಷದ ವಹಿವಾಟು ಎಂದು ಪರಿಗಣಿಸಲಾಗುತ್ತದೆ. ಡಿ.23 ಮತ್ತು ಡಿ.26 ರಿಂದ 31ವರೆಗೆ ಏಳು ದಿನ ಒಟ್ಟು 1262.65 ಕೋಟಿ ರು. ಮದ್ಯ ವಹಿವಾಟು ನಡೆಸಿದೆ. ಪರಿಣಾಮ 7 ದಿನಗಳಲ್ಲಿ ಅಬಕಾರಿ ಇಲಾಖೆಗೆ 657.79 ಕೋಟಿ ರು. ಆದಾಯ ಲಭಿಸಿದೆ.

ಡಿ.31ಕ್ಕೆ 183 ಕೋಟಿ ರು.ವ್ಯಾಪಾರ:

ಹೊಸ ವರ್ಷದ ಹಿಂದಿನ ದಿನವಾದ ಶನಿವಾರ (ಡಿ.31) ಒಂದೇ ದಿನ ರಾಜ್ಯದಲ್ಲಿ 26 ಲಕ್ಷ ಲೀಟರ್‌ ಮದ್ಯ, 16 ಲಕ್ಷ ಲೀಟರ್‌ ಬಿಯರ್‌ ಮಾರಾಟವಾಗಿದೆ. ಈ ಮೂಲಕ 183 ಕೋಟಿ ರು. ವ್ಯಾಪಾರವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಇದೇ ದಿನ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.27 ರಷ್ಟುಹೆಚ್ಚು ಮದ್ಯಮಾರಾಟವಾಗಿದೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ 10 ಬಲಿ

  • ಶಿವಮೊಗ್ಗದಲ್ಲಿ ಪಾರ್ಟಿ ವೇಳೆ ಮಿಸ್‌ ಫೈರ್‌: ಇಬ್ಬರ ಸಾವು
  • ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕಟ್ಟಡದಿಂದ ಜಿಗಿದು ಯುವಕ ಸಾವು
  •  ಅಂಕೋಲಾ, ಸಕಲೇಶಪುರ, ಬೆಂಗಳೂರಿನಲ್ಲಿ ಅಪಘಾತ: 6 ಸಾವು
  • ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಚೂರಿ ಇರಿದು ಯುವಕನ ಹತ್ಯೆ

ನ್ಯೂ ಇಯರ್‌ ಪಾರ್ಟಿ: ನಶೆಯಲ್ಲಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ದಾಟುವ ವೇಳೆ ಆಯತಪ್ಪಿ ಬಿದ್ದು ಯುವಕ ಸಾವು

ರಾಜ್ಯದಲ್ಲಿ ಮದ್ಯಮಾರಾಟ (ಅಬಕಾರಿ ಇಲಾಖೆ ಮಾಹಿತಿ)

  • ವರ್ಷ (ಡಿ.23 - 31) - ವಹಿವಾಟು
  • 2020 - 1017.43 ಕೋಟಿ ರು.
  • 2021 - 1099.30 ಕೋಟಿ ರು.
  • 2022 - 1262.65 ಕೋಟಿ ರು.

7 ದಿನಗಳ ಮಾರಾಟ

  • 1.02 ಕೋಟಿ ಲೀಟರ್‌ ಮದ್ಯ
  • 1.07 ಕೋಟಿ ಲೀಟರ್‌ ಬಿಯರ್‌
  • ಡಿ.31ರಂದು ಮಾರಾಟ
  • 26 ಲಕ್ಷ ಲೀಟರ್‌ ಮದ್ಯ
  • 16 ಲಕ್ಷ ಲೀಟರ್‌ ಬಿಯರ್‌