ಜಮ್ಮು-ಕಾಶ್ಮೀರದ 109 ವರ್ಷ ಹಳೆಯ ಶಿವ ದೇವಾಲಯಕ್ಕೆ ಬೆಂಕಿ
ದೇವಸ್ಥಾನಕ್ಕೆ ಬೆಂಕಿ ತಗಲುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ಪ್ರಯತ್ನಿಸಿದರೂ ದೇಗುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಕಿ ಅವಘಡಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ.
ಶ್ರೀನಗರ: 109 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ (Shiva Temple) ಬೆಂಕಿಗಾಹುತಿಯಾಗಿದೆ. ಜಮ್ಮು-ಕಾಶ್ಮೀರದ ಶ್ರೀನಗರದಿಂದ 55 ಕಿಲೋ ಮೀಟರ್ ದೂರದಲ್ಲಿರುವ ಪ್ರವಾಸಿ ಸ್ಥಳ ಗುಲ್ಮಾರ್ಗ್‌ನಲ್ಲಿ (Gulmarg) ಶಿವನ ದೇವಸ್ಥಾನವಿತ್ತು. ಬುಧವಾರ ಈ ಘಟನೆ ನಡೆದಿದ್ದು, ಸ್ಥಳೀಯರು ಮತ್ತು ಪೊಲೀಸರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ವಿಫಲವಾಗಿದೆ. 1915ರಲ್ಲಿ ಕಾಶ್ಮೀರದ ರಾಜಮನೆತನದಿಂದ ಶಿವ ದೇವಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಕಾಶ್ಮೀರದ ಕೊನೆಯ ರಾಜ ಮಹಾರಾಜ ಹರಿ ಸಿಂಗ್ ಅವರ ಪತ್ನಿ ರಾಣಿ ಮೋಹಿನಿ ಬಾಯಿ ಸಿಸೋಡಿಯಾ ಮೋಹಿನೀಶ್ವರ್ ಶಿವಾಲಯ ಶಿವ ಮಂದಿರ ನಿರ್ಮಿಸಿದ್ದರು. ಆದ್ದರಿಂದ ಈ ದೇವಾಲಯವನ್ನು ಮಹಾರಾಣಿ ದೇಗುಲ (Maharani Temple) ಅಂತಾನೇ ಗುರುತಿಸಲಾಗುತ್ತಿತ್ತು. ಬುಧವಾರ ನಡೆದ ಬೆಂಕಿ ಅನಾಹುತದಲ್ಲಿ ದೇವಲಾಯ ಸಂಪೂರ್ಣ ನಾಶವಾಗಿದೆ.
ಹುಲ್ಲುಗಾವಲಿನಲ್ಲಿ ನಿರ್ಮಾಣವಾಗಿದ್ದ ಈ ದೇವಸ್ಥಾನದ ಬೆಟ್ಟದ ತುತ್ತತುದಿಯ ಮೇಲಿದೆ. ಮರ ಹಾಗೂ ಕಲ್ಲುಗಳಿಂದ ವಿಶೇಷ ವಿನ್ಯಾಸ ಹೊಂದಿದ್ದ ಮಹಾರಾಣಿ ದೇವಾಲಯಕ್ಕೆ ದೂರ ದೂರದಿಂದ ಭಕ್ತರು ಬರುತ್ತಿದ್ದರು. ಎತ್ತರ ಪ್ರದೇಶದಲ್ಲಿರೋ ಕಾರಣ ಗುಲ್ಮಾರ್ಗನ ಯಾವುದೇ ಭಾಗದಿಂದ ನೋಡಿದ್ರೂ ದೇವಸ್ಥಾನ ಸುಂದರ ಪಿರಾಮಿಡ್ ವಿನ್ಯಾಸದ ಗೋಪುರ ಕಾಣಿಸುತ್ತಿತ್ತು. ಈ ದೇವಸ್ಥಾನ ಪ್ರವಾಸಿ ತಾಣವಾಗಿಯೂ ಬದಲಾಗಿತ್ತು.
ದೇವಸ್ಥಾನಕ್ಕೆ ಬೆಂಕಿ ತಗಲುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ಪ್ರಯತ್ನಿಸಿದರೂ ದೇಗುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಕಿ ಅವಘಡಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಯೋಧ್ಯೆ ಮಾತ್ರವಲ್ಲ, ರಾಮಮಂದಿರ ಕಟ್ಟಿದ ಅಧಿಕಾರಿ ಪುತ್ರನಿಗೂ ಸೋಲುಣಿಸಿದ ಯುಪಿ!
ಬೆಂಕಿ ಅವಘಡಕ್ಕೆ ಕಾರಣ ಏನು?
ದೇವಸ್ಥಾನದ ಅರ್ಚಕ ಪುರುಷೋತ್ತಮ ಶರ್ಮಾ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು. ಗಾಳಿ ಹೆಚ್ಚಾಗಿರುವ ಕಾರಣ ಬೆಂಕಿ ವ್ಯಾಪಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಯಾರಾದ್ರೂ ಬೆಂಕಿ ಹಚ್ಚಿರಬಹುದಾದ ಪ್ರಶ್ನೆಗೆ ಹಾಗೆ ನಡೆದಿರಲ್ಲ ಅನ್ನೋದು ನನ್ನ ನಂಬಿಕೆ ಅಂತ ಹೇಳಿಕೆ ನೀಡಿದ್ದಾರೆ. 2023ರ ನವೆಂಬರ್‌ನಲ್ಲಿ ಪುರುಷೋತ್ತಮ ಶರ್ಮಾ ಅವರನ್ನು ಈ ದೇವಸ್ಥಾನಕ್ಕೆ ಅರ್ಚಕರನ್ನಾಗಿ ನೇಮಕ ಮಾಡಲಾಗಿತ್ತು.
ಮುಸ್ಲಿಂ ವ್ಯಕ್ತಿಯಿಂದಲೇ 23 ವರ್ಷ ಪೂಜೆ
ಉಗ್ರರ ದಾಳಿಯಿಂದ ಇಲ್ಲಿಯ ಕಾಶ್ಮೀರಿ ಪಂಡಿತಗಳು ಇಲ್ಲಿಂದ ತೆರಳಿದ ಸುಮಾರು 23 ವರ್ಷಗಳ ಸ್ಥಳೀಯ ಮುಸ್ಲಿಮರೇ ದೇವಸ್ಥಾನದ ನಿರ್ವಹಣೆ ಮಾಡಿಕೊಂಡು ಬಂದಿದ್ದರು. ಬಾರಾಮುಲ್ಲಾ ಜಿಲ್ಲೆಯ ದಂಡಾಮುಹ್‌ನ ನಿವಾಸಿ ಗುಲಾಮ್ ಮೊಹಮ್ಮದ್ ಶೇಖ್ ಎಂಬವರು ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದರು. ಕಾಲನಂತರ ಪೂಜಾ ವಿಧಿವಿಧಾನಗಳನ್ನು ಕಲಿತುಕೊಂಡಿದ್ದ ಗುಲಾಮ್ ಮೊಹಮ್ಮದ್ ಶೇಖ್ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮಾಹಾರತಿ ಮಾಡುತ್ತಿದ್ದರು.
ಇಲ್ಲಿನ ಜನರು ಶೇಖ್ ಅವರನ್ನು ಪ್ರೀತಿಯಿಂದ ಪಂಡಿತ್‌ಜೀ ಎಂದು ಕರೆಯುತ್ತಿದ್ದರು. ಇದಕ್ಕೂ ಮೊದಲು ಗುಲಾಮ್ ಮೊಹಮ್ಮದ್ ಶೇಖ್, ಧರ್ಮಾರ್ಥ ಟ್ರಸ್ಟ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದರು. ಹಾಗಾಗಿ ದೇವಸ್ಥಾನದ ನಿರ್ವಹಣೆಗೆ ಮುಂದಾಗಿದ್ದರು. 2021ರಲ್ಲಿ ಗುಲಾಮ್ ಮೊಹಮ್ಮದ್ ಶೇಖ್ ಈ ಕೆಲಸದಿಂದ ನಿವೃತ್ತಿ ಪಡೆದುಕೊಂಡಿದ್ದರು. ಆ ಬಳಿಕ 2023ರಲ್ಲಿ ಪುರುಷೋತ್ತಮ ಶರ್ಮಾರನ್ನು ಅರ್ಚಕರನ್ನಾಗಿ ನೇಮಿಸಲಾಗಿತ್ತು.
'ನಿಮ್ಮನ್ನೆಂದೂ ಭಾರತೀಯರು ನಂಬುವುದಿಲ್ಲ' ಅಯೋಧ್ಯೆ ನಿವಾಸಿಗಳ ಮೇಲೆ 'ರಾಮಾಯಣದ ಲಕ್ಷ್ಮಣ' ಗರಂ
ದೇವಸ್ಥಾನದ ಬಳಿ ಸಿನಿಮಾಗಳ ಚಿತ್ರೀಕರಣ
ರಾಜೇಶ್ ಖನ್ನಾ ಮತ್ತು ಮುಮ್ತಾಜ್ ನಟನೆಯ ಆಪ್ ಕಿ ಕಸಮ್ ಸಿನಿಮಾದ ಸೂಪರ್ ಹಿಟ್ ಹಾಡು ಜೈ ಜೈ ಶಿವ ಶಂಕರ್ ಚಿತ್ರೀಕರಣ ಇಲ್ಲಿಯೇ ನಡೆದಿತ್ತು. ಅಂದಾಜ್ ಮತ್ತು ಕಾಶ್ಮೀರ್ ಕಿ ಕಲಿ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ಈ ದೇವಸ್ಥಾನದ ಪ್ರದೇಶದಲ್ಲಿ ನಡೆದಿವೆ.