Asianet Suvarna News Asianet Suvarna News

ಆಯೋಧ್ಯೆ ಮಾತ್ರವಲ್ಲ, ರಾಮಮಂದಿರ ಕಟ್ಟಿದ ಅಧಿಕಾರಿ ಪುತ್ರನಿಗೂ ಸೋಲುಣಿಸಿದ ಯುಪಿ!

ಲೋಕಸಭಾ ಚುನಾವಣೆಯಲ್ಲಿ ಯುಪಿ ಫಲಿತಾಂಶ ಬಿಜೆಪಿಗೆ ಹಾಗೂ ಬೆಂಬಲಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭವ್ಯ ರಾಮ ಮಂದಿರ ಇರುವ ಕ್ಷೇತ್ರದಲ್ಲೂ ಬಿಜೆಪಿ ಸೋಲು ಕಂಡಿದ್ದರೆ, ರಾಮ ಮಂದಿರ ನಿರ್ಮಾಣದ ಸಂಪೂರ್ಣ ಉಸ್ತುವಾರಿ ಹೊತ್ತ ಅಧಿಕಾರಿ ಪುತ್ರನಿಗೂ ಯುಪಿ ಜನ ಸೋಲುಣಿಸಿದ್ದಾರೆ.
 

Lok Sabha Election Set back for BJP after Ayodhya Son of bureaucrat Who build Ram Mandir lost seat ckm
Author
First Published Jun 5, 2024, 9:06 PM IST

ಆಯೋಧ್ಯೆ(ಜೂ.05) ರಾಮ ಮಂದಿರಕ್ಕಾಗಿ ಹಲವು ಪೀಳಿಗೆ ಹೋರಾಡಿದೆ. ಆಯೋಧ್ಯೆಯಿಂದ ಹಿಡಿದು ದೇಶಾದ್ಯಂದ ರಾಮ ಭಕ್ತರು ಬಲಿದಾನ ಮಾಡಿದ್ದಾರೆ. ವಿವಾದ, ವ್ಯಾಜ್ಯ, ಹೋರಾಟದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭವ್ಯ ರಾಮ ಮಂದಿರ ನಿರ್ಮಾಣ ಮಾಡಿ ಪ್ರಾಣಪ್ರತಿಷ್ಠೆಯನ್ನೂ ನೆರವೇರಿಸಿತ್ತು. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಯುಪಿಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲ, ಆಯೋಧ್ಯೆಯಲ್ಲೇ ಸೋಲು ಕಂಡಿತ್ತು. ಇಷ್ಟಕ್ಕೆ ಸೋಲು ನಿಂತಿಲ್ಲ. 500 ವರ್ಷಗಳ ಬಳಿಕ ಭವ್ಯ ರಾಮ ಮಂದಿರದ ನಿರ್ಮಾಣದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡ ಅಧಿಕಾರಿ ಪುತ್ರನಿಗೂ ಯುಪಿ ಜನ ಸೋಲುಣಿಸಿದ್ದಾರೆ.

ರಾಮ ಮಂದಿರ ನಿರ್ಮಾಣದಲ್ಲಿ ನಕ್ಷೆ, ವಿಜ್ಞಾನಿಗಳ ಸೂಚನೆ, ಎಂಜಿನೀಯರ್, ಕಾರ್ಮಿಕರು, ತಂತ್ರಜ್ಞರು ಎಲ್ಲರನ್ನೂ ಒಗ್ಗೂಡಿಸಿ ಭವ್ಯ ರಾಮ ಮಂದಿರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಬ್ಯೂರೋಕ್ರಾಟ್ ನೃಪೇಂದ್ರ ಮಿಶ್ರಾ ವಹಿಸಿಕೊಂಡಿದ್ದರು. ಈ ಜವಾಬ್ದಾರಿಯನ್ನು ನೃಪೇಂದ್ರ ಮಿಶ್ರಾ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಆಯೋಧ್ಯೆ ರಾಮ ಮಂದಿರದಿಂದ ಕೇವಲ 100 ಕಿ.ಮಿ ದೂರದಲ್ಲಿರುವ ಶ್ರಾವಷ್ಠಿ ಕ್ಷೇತ್ರದಿಂದ ನೃಪೇಂದ್ರ ಮಿಶ್ರಾ ಪುತ್ರ ಸಾಕೇತ್ ಮಿಶ್ರಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಏನೆಲ್ಲಾ ಅಭಿವೃದ್ಧಿ ಮಾಡಿದ್ರೂ ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಸ್ಥಳೀಯರು ಹೇಳೋದೇನು?

ಬಿಜೆಪಿ ಪಕ್ಷದಿಂದ ಸಾಕೆತ್ ಮಿಶ್ರಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಸಾಕೇತ್ ಮಿಶ್ರಾ ಮುಗ್ಗರಿಸಿದ್ದಾರೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ನಾಯಕ ರಾಮ್ ಶಿರೋಮಣಿ ವರ್ಮಾ ಗೆದ್ದು ಬೀಗಿದ್ದಾರೆ. ರಾಮ್ ಶಿರೋಮಣಿ ವರ್ಮಾ 511055 ಮತಗಳನ್ನು ಪಡೆದರೆ, ಸಾಕೇತ್ ಮಿಶ್ರಾ 434382 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ರಾಮ್ ಶಿರೋಮಣಿ 76673 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಶ್ರಾವಷ್ಠಿ ಕ್ಷೇತ್ರ ಬಿಜೆಪಿ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರ್ಮ ಭೂಮಿಯಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಶ್ರಾವಷ್ಠಿ ಇದೀಗ ಸಮಾಜವಾದಿ ಪಾರ್ಟಿ ಕೈಸೇರಿದೆ. ಇತ್ತ ಆಯೋಧ್ಯೆ ರಾಮ ಮಂದಿರ ಹೊಂದಿರುವ ಫೈಜಾಬಾದ್ ಕ್ಷೇತ್ರದಲ್ಲೂ ಬಿಜೆಪಿ ಸೋಲು ಕಂಡರೆ, ಶ್ರಾವಷ್ಠಿಯಲ್ಲೂ ಬಿಜೆಪಿ ಮುಗ್ಗರಿಸಿದೆ.

 ಮೂರನೇ ಅವಧಿಗೆ ಪ್ರಧಾನಿಯಾಗುವ ಮುನ್ನ..... ಅಂದುಕೊಂಡಷ್ಟು ಸುಗಮ ಹಾದಿಯಲ್ಲಿದ್ದಾರಾ ಮೋದಿ?

ಉತ್ತರ ಪ್ರದೇಶದಲ್ಲಿ ಬಿಜೆಪಿ 33 ಸ್ಥಾನಕ್ಕೆ ಕುಸಿದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 60ಕ್ಕೂ ಹೆಚ್ಚು ಸ್ಥಾನಗೆದ್ದಿದ್ದ ಬಿಜೆಪಿ ಇದೀಗ ಅರ್ಧಕ್ಕೂ ಹೆಚ್ಚು ಸ್ಥಾನ ಕಳೆದುಕೊಂಡಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ 37 ಸ್ಥಾನಗಳನ್ನು ಗೆದ್ದುಕೊಂಡು ಅತೀದೊಡ್ಡ ಪಕ್ಷವವಾಗಿ ಹೊರಹೊಮ್ಮಿದೆ. ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 6 ಸ್ಥಾನ ಗೆದ್ದುಕೊಂಡಿದೆ. ಒಟ್ಟು 80 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. 
 

Latest Videos
Follow Us:
Download App:
  • android
  • ios