ಬಜರಂಗದಳವನ್ನ ಬ್ಯಾನ್ ಮಾಡೋದಿಲ್ಲ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 'ಸಾಫ್ಟ್ ಹಿಂದುತ್ವ'!
ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು ಬ್ಯಾನ್ ಮಾಡೋದಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೇಳಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾದರೂ 'ಗ್ಯಾರಂಟಿ' ಈ ವಿವಾದವನ್ನು ತಣ್ಣಗಾಗಿತ್ತು. ಆದರೆ, ಮಧ್ಯಪ್ರದೇಶದಲ್ಲಿ ಇಂಥ ಸಾಹಸಕ್ಕೆ ಇಳಿಯದೇ ಇರಲು ಕಾಂಗ್ರೆಸ್ ಮುಂದಾಗಿದೆ.

ನವದೆಹಲಿ (ಆ.16): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಬಜರಂಗ ದಳವನ್ನು ನಿಷೇಧ ಮಾಡುವ ಯಾವುದೇ ಗುರಿ ನಮ್ಮ ಎದುರು ಇಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಬಜರಂಗದಳದಲ್ಲೂ ಬಹಳಷ್ಟು ಜನ ಒಳ್ಳೆಯವರಿದ್ದಾರೆ. ಆದರೆ, ಹಿಂಸಾಚಾರ ಹಾಗೂ ಗಲಭೆಯಲ್ಲಿ ಭಾಗಿಯಾಗವ ಯಾರನ್ನೂ ನಾವು ಬಿಡೋದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಆದ ಪ್ರಮಾದವನ್ನು ಮಾಡದೇ ಇರಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇನ್ನು ಮಧ್ಯಪ್ರದೇಶ ಚುನಾವಣೆ ಗೆಲ್ಲಲು ಹಿಂದುತ್ವ ಅಗತ್ಯ ಎಂದು ಅರಿತಿರುವ ಕಾಂಗ್ರೆಸ್, ಅದಕ್ಕಾಗಿ ಹಿಂದುತ್ವದ ವಿರುದ್ಧವಾಗಿರುವ ಯಾವ ವಿಚಾರಗಳನ್ನೂ ಮಾತನಾಡುತ್ತಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಕಟ ಮಾಡಿತ್ತು. ಇದು ಚುನಾವಣೆ ವೇಳೆ ಹಾಟ್ ಟಾಪಿಕ್ ಆಗಿದ್ದು ಮಾತ್ರವಲ್ಲದೆ, ಸ್ವತಃ ಪ್ರಧಾನಿ ಮೋದಿ ಕೂಡ ತಮ್ಮ ಪ್ರತಿ ಭಾಷಣದ ಆದಿಯಲ್ಲಿ ಜೈ ಬಜರಂಗ ಬಲಿ ಎಂದು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್‌ಗೆ ತಿವಿದಿದ್ದರು. ಇದರಿಂದ ಹಿನ್ನಡೆ ಕಾಣುವ ಅಪಾಯ ಎದುರಿಸಿದ್ದ ಕಾಂಗ್ರೆಸ್ ಬಳಿಕ ಗ್ಯಾರಂಟಿ ಮೂಲಕ ಅಧಿಕಾರ ಹಿಡಿದಿತ್ತು.
ಈ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೊನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಮಾತನಾಡಿತ್ತು. ಇದಕ್ಕಾಗಿ ಬಿಜೆಪಿ ಮತ್ತು ಬಜರಂಗದಳದ ಸದಸ್ಯರು ದೇಶಾದ್ಯಂತ ಪ್ರತಿಭಟನೆ ಕೂಡ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಮೊದಲು ಈ ಸರ್ಕಾರ ಶ್ರೀರಾಮನಿಗೆ ಬೀಗ ಹಾಕಿತ್ತು. ಈಗ ಬಜರಂಗಿಯನ್ನು ನಿಷೇಧಿಸುವ ಮಾತನಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮಾತಾ ಮಂದಿರ ಚೌಕದಲ್ಲಿರುವ ಅವಂತಿ ಬಾಯಿ ಲೋಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ದಿಗ್ವಿಜಯ್ ಸಿಂಗ್ ಅವರು ಬುಧವಾರ ಭೋಪಾಲ್‌ಗೆ ಆಗಮಿಸಿದ್ದರು. ಮಾಧ್ಯಮದವರು ಹಿಂದುತ್ವದ ಬಗ್ಗೆ ಪ್ರಶ್ನಿಸಿದಾಗ ಮಾತನಾಡಿದ ಅವರು, ನಾನು ಪ್ರಧಾನಿ, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಕೇಳಲು ಬಯಸುತ್ತೇನೆ ಅವರು ಭಾರತದ ಸಂವಿಧಾನದ ಅಥವಾ ಹಿಂದೂ ರಾಷ್ಟ್ರದ ಪ್ರಮಾಣವಚನ ಸ್ವೀಕರಿಸಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೂ ರಾಷ್ಟ್ರದ ಹೇಳಿಕೆಯ ಮೇಲೆ ಕಮಲ್ ನಾಥ್ ಅವರನ್ನು ಟೀಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳು ಕಮಲ್ ನಾಥ್ ಹೇಳಿಕೆಯನ್ನು ತಪ್ಪಾಗಿ ತಿಳಿಸಿವೆ. ನೀವು ಮತ್ತು ಬಿಜೆಪಿಯವರು ಏನು ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಕಮಲ್ ನಾಥ್ ಎಂದಿಗೂ ಮಾತನಾಡಲಿಲ್ಲ.
'ಬ್ಯಾನ್‌ಗೆಲ್ಲಾ ನಾವು ಹೆದ್ರೋದಿಲ್ಲ..' ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ವಿಎಚ್‌ಪಿ ನಾಯಕನ ಪ್ರತಿಕ್ರಿಯೆ!
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಯ ಬಗ್ಗೆ ಛಿಂದ್ವಾರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್‌ನಾಥ್, ಧೀರೇಂದ್ರ ಶಾಸ್ತ್ರಿ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಈ ದೇಶದಲ್ಲಿ ಈಗಾಗಲೇ ಶೇ. 83ರಷ್ಟು ಹಿಂದುಗಳಿದ್ದಾರೆ. ಮತ್ತೆ ಹಿಂದು ರಾಷ್ಟ್ರ ಮಾಡೋ ಅಗತ್ಯವೇನಿದೆ. ಇದು ನಾನು ಹೇಳುತ್ತಿರೋದಲ್ಲ. ಅಂಕಿ ಅಂಶಗಳೇ ಹೇಳುತ್ತಿವೆ ಎಂದಿದ್ದರು.
ಬಜರಂಗದಳ ನಿಷೇಧಿಸಿದರೆ, ಪಿಎಫ್‌ಐ- ಐಎಸ್‌ಐ ಸ್ವಾಗತಿಸಿದಂತೆ: ಯೋಗಿ ಆದಿತ್ಯನಾಥ
ಮಧ್ಯಪ್ರದೇಶದ 20 ವರ್ಷದ ಬಿಜೆಪಿ ಆಡಳಿತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಕೆಲಸ, ಗುತ್ತಿಗೆ, ಧಾರ್ಮಿಕ ಕ್ಷೇತ್ರಗಳ ಕೆಲಸಲ್ಲೂ ಅವ್ಯವಹಾರ ನಡೆದಿದೆ. ಶ್ರೀರಾಮ ಮಂದಿರಕ್ಕಾಗಿ ಸಾವಿರಾರು ಕೋಟಿ ದೇಣಿಗೆ ಪಡೆದುಕೊಂಡಿದ್ದಾರೆ ಆದರೆ ಎಂದೂ ಅದರ ಮಾಹಿತಿ ನೀಡಿಲ್ಲ. ದೇವಸ್ಥಾನ ನಿರ್ಮಾಣಕ್ಕಾಗಿ 2 ಕೋಟಿಯ ಭೂಮಿಯನ್ನು 20 ಕೋಟಿಗೆ ಖರೀದಿ ಮಾಡಲಾಗಿದೆ. ಬಿಜೆಪಿ ಬರೀ ಹಿಂದುಗಳ ಬಗ್ಗೆ ಮಾತನಾಡುತ್ತದೆ. ಅವರಿಗೂ ಹಿಂದುತ್ವಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.