ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ, ಹಾಗೇನಾದರೂ ಅಧಿಕಾರಕ್ಕೆ ಬಂದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಪ್ರೋತ್ಸಾಹಿಸುವ ಮತೀಯ ಸಂಘಟನೆಗಳನ್ನು ಬ್ಯಾನ್‌ ಮಾಡೋದಾಗಿ ಘೋಷಣೆ ಮಾಡಿತ್ತಲ್ಲದೆ, ಇದಕ್ಕೆ ಭಜರಂಗದಳವನ್ನು ಉದಾಹರಣೆಯನ್ನಾಗಿ ನೀಡಿತ್ತು.

ನಾಗ್ಪುರ (ಮೇ.14): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತ ಪಡೆದಿದೆ. ಆದರೆ, ವಿಶ್ವ ಹಿಂದು ಪರಿಷತ್‌ನ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂಗ್‌ ಪರಾಂಡೆ ಮಾತ್ರ ಕಾಂಗ್ರೆಸ್‌ ಗೆಲುವಿಗೆ ಒಂಚೂರು ತಲೆಕೆಡಿಸಿಕೊಂಡಿಲ್ಲ. ಅಧಿಕಾರಕ್ಕೆ ಬಂದರೆ, ಭಜರಂಗದಳದಂಥ ಮತೀಯ ಸಂಘಟನೆಗಳನ್ನು ಬ್ಯಾನ್‌ ಮಾಡೋದಾಗಿ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಹಾಗೇನಾದರೂ ಕಾಂಗ್ರೆಸ್‌ ಪಕ್ಷ ಭಜರಂಗದಳವನ್ನು ಬ್ಯಾನ್‌ ಮಾಡಲು ಮುಂದಾದರೆ, ಇದಕ್ಕೆ ಬಗ್ಗೋದಿಲ್ಲ ಎಂದು ಪರಾಂಡೆ ಹೇಳಿದ್ದಾರೆ. ಭಜರಂಗದಳ ವಿಶ್ವ ಹಿಂದು ಪರಿಷತ್‌ ಸಂಘಟನೆಯ ಯುವ ಸಂಘಟನೆಯಾಗಿದೆ. "ಹಿಂದೂಗಳ ಮೇಲಿನ ದ್ವೇಷದಿಂದ ಅವರು ಬಜರಂಗದಳವನ್ನು ನಿಷೇಧಿಸಿದರೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಪರಾಂಡೆ ಹೇಳಿದ್ದನ್ನು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ನಿಮಗೆಲ್ಲಾ ಗೊತ್ತಿರಬಹುದು. ರಾಮಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ, ಭಜರಂಗದಳವನ್ನು ಬ್ಯಾನ್‌ ಮಾಡಲಾಗಿತ್ತು. ಬಳಿಕ ಸ್ವತಃ ಕೋರ್ಟ್‌ ಈ ನಿಷೇಧ ತಪ್ಪು ಎಂದು ಹೇಳಿತ್ತು ಎಂದು ತಿಳಿಸಿದ್ದಾರೆ.

ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಪಕ್ಷವು ಅಧಿಕಾರಕ್ಕೆ ಬಂದರೆ, ಜಾತಿ ಅಥವಾ ಧರ್ಮ ಆಧಾರಿತ ದ್ವೇಷವನ್ನು ಉತ್ತೇಜಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ ಮತ್ತು ಬಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂತಹ ಸಂಘಟನೆಗಳನ್ನು ಕಾಂಗ್ರದ್‌ ಇದಕ್ಕೆ ಉದಾಹರಣೆಯನ್ನಾಗಿ ನೀಡಿತ್ತು. ಬಿಜೆಪಿ ಇದನ್ನೇ ಚುನಾವಣೆಯಲ್ಲಿ ದಾಳವನ್ನಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡಿದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ. 

ಕಾಂಗ್ರೆಸ್‌ ಪಕ್ಷದ ಚುನಾವಣಾ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರದ ಸಮಯದಲ್ಲಿ ದೊಡ್ಡ ವಿಷಯವಾಗಿ ಪರಿವರ್ತಿಸಿದ್ದರಿಂದ ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು. 'ಸಾಂಸ್ಕೃತಿಕ ನಿಂದನೆ' ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಮತದಾನ ಮಾಡುವಾಗ 'ಜೈ ಬಜರಂಗಬಲಿ' ಎಂದು ಹೇಳುವಂತೆ ಪ್ರಧಾನಿ ಮೋದಿ ಸಾರ್ವಜನಿಕರನ್ನು ಒತ್ತಾಯಿಸಿದ್ದರು. “ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹನುಮಂತನನ್ನೇ ಬ್ಯಾನ್‌ ಮಾಡಲು ನಿರ್ಧರಿಸಿದೆ. ಆರಂಭದಲ್ಲಿ, ಅವರು ಪ್ರಭು ಶ್ರೀರಾಮನನ್ನು ನಿಷೇಧಿಸಲು ಪ್ರಯತ್ನ ಮಾಡಿದರು. ಈಗ ಅವರು 'ಜೈ ಬಜರಂಗ ಬಲಿ' ಎಂದು ಹೇಳುವ ಜನರನ್ನು ನಿಷೇಧಿಸಲು ಬಯಸುತ್ತಿದ್ದಾರೆ..' ಎಂದು ಅವರು ಚುನಾವಣೆಗೆ ಮುನ್ನ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ಇದಕ್ಕೆ ಪ್ರತೀಕಾರವಾಗಿ, ಬಿಜೆಪಿಯು ಬಜರಂಗ ಬಲಿಯನ್ನು ಬಜರಂಗ ದಳದೊಂದಿಗೆ ಸಮೀಕರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ದಕ್ಷಿಣ ರಾಜ್ಯದಲ್ಲಿ ಅದರ ದೊಡ್ಡ ಗೆಲುವಿನ ನಂತರ, ಪಕ್ಷವು ಶನಿವಾರದ 'ಬಜರಂಗ ಬಲಿ' ವಿವಾದದ ಕುರಿತು ಭಾರತೀಯ ಜನತಾ ಪಕ್ಷವನ್ನು ಇನ್ನಷ್ಟು ಕಾಲೆಳೆದಿದೆ. ಅನೇಕ ಹಿರಿಯ ಕಾಂಗ್ರೆಸ್ ನಾಯಕರು "ಭಗವಾನ್ ಹನುಮಂತನು ಕಾಂಗ್ರೆಸ್‌ನೊಂದಿಗೆ ಇದ್ದಾನೆ ಎನ್ನುವುದು ಗೊತ್ತಾಗುತ್ತಿದೆ' ಎಂದು ಹೇಳುವ ಮೂಲಕ ಬಿಜೆಪಿಯನ್ನು ಟೀಕಿಸಿದ್ದರು.

ಬಜರಂಗದಳ ನಿಷೇಧಿಸಿದರೆ, ಪಿಎಫ್‌ಐ- ಐಎಸ್‌ಐ ಸ್ವಾಗತಿಸಿದಂತೆ: ಯೋಗಿ ಆದಿತ್ಯನಾಥ

ಕರ್ನಾಟಕದಲ್ಲಿ ಕಳೆದ ವಾರ ಚುನಾವಣೆ ನಡೆದಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಮೂರು ದಶಕಗಳಲ್ಲಿ ಯಾವುದೇ ಪಕ್ಷಕ್ಕಿಂತ ಕಾಂಗ್ರೆಸ್ ಅತಿ ಹೆಚ್ಚು ಮತ ಹಂಚಿಕೆ ಮತ್ತು ಸ್ಥಾನಗಳನ್ನು ಗಳಿಸಿದೆ.

ಕಾಂಗ್ರೆಸ್‌ ಭಜರಂಗದಳ ನಿಷೇಧ ಪ್ರಸ್ತಾಪ: ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ಪ್ರಚಾರ