ಲಹಾಬಾದ್[ಜ.26]: ಪೌರತ್ವ ಕಾಯ್ದೆ, NRC ಮೊದಲಾದ ವಿಚಾರಗಳಿಂದ ಹಿಂದೂ ಮುಸಲ್ಮಾನರ ನಡುವೆ ಒಂದು ರೀತಿ ಬಿರುಕು ಮೂಡಲಾರಂಭಿಸಿದೆ. ಹೀಗಿರುವಾಗ ಗೋಡಾ ಜಿಲ್ಲೆಯ ವಜೀರ್ ಗಂಜ್ ಹೊಸ ಭಾಷ್ಯ ಬರೆಯುತ್ತಿದೆ. ಇಲ್ಲಿನ ಒಂದು ಮದರಸಾದಲ್ಲಿ ಹಿಂದೂ ಮಕ್ಕಳು ಉರ್ದು ಕಲಿಯುತ್ತಿದ್ದರೆ, ಮುಸ್ಲಿಂ ಮಕ್ಕಳ ಕಂಠದಲ್ಲಿ 'ಸಂಸ್ಕೃತ ಶ್ಲೋಕ'  ಗುನುಗುಡುತ್ತಿದೆ.

ಸಂಸ್ಕೃತ ಹಾಗೂ ಉರ್ದು ಕಲಿಯುವ ವಿಚಾರದಲ್ಲಿ ಸರ್ಕಾರ ಹಾಗು ಹಲವಾರು ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿರುವಾಗ ವಜೀರ್ ಗಂಜ್ ನ ಈ ಮದರಸಾ ತನ್ನ ವಿನೂತನ ಪ್ರಯೋಗದಿಂದ ಚರ್ಚೆಯಲ್ಲಿದೆ. ಇಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಬಹಳಷ್ಟಿದೆ. ವಿಕಾಸ್ ಖಂಡ್ ನಲ್ಲಿರುವ ಮದರಸಾ ಗುಲ್ಶನ್- ಎ- ಬಾಗ್ದಾದ್ ಮುಸ್ಲಿಂ ಮವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿ ಭಿನ್ನವಾಗಿ ಗುರುತಿಸಿಕೊಂಡಿದೆ. 

ಇಲ್ಲಿ ಸುಮಾರು 230 ವಿದ್ಯಾರ್ಥಿಗಳಿದ್ದು, 30ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿಗಳು ಉರ್ದು ಕಲಿಯುತ್ತಿದ್ದರೆ, 50ಕ್ಕೂ ಅಧಿಕ ಮುಸ್ಲಿಂ ಮಕ್ಕಳು ಸಂಸ್ಕೃತ ಕಲಿಯುವಲ್ಲಿ ನಿರತರಾಗಿದ್ದಾರೆ. ಇಷ್ಟೇ ಅಲ್ಲ, ಇಲ್ಲಿನ ಹಿಂದೂ ಹಾಗೂ ಮುಸ್ಲಿಂ ಮಕ್ಕಳು ಉರ್ದು ಹಾಗೂ ಸಂಸ್ಕೃತ ಹೊರತುಪಡಿಸಿ ಪಾರ್ಸಿ, ಹಿಂದಿ, ಆಂಗ್ಲ, ಗಣಿತ ಹಾಗೂ ವಿಜ್ಞಾನವನ್ನೂ ಕಲಿಯುತ್ತಿದ್ದಾರೆ. 

ಮದರಸಾ ಎಂದ ಕೂಡಲೇ ಜನ ಸಾಮಾನ್ಯರಲ್ಲಿ ಉರ್ದು, ಅರೇಬಿಕ್ ಸಂಬಂಧಿಸಿದ ಶಿಕ್ಷಣ ನೀಡಬಹುದೆಂಬ ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಹೀಗಿರುವಾಗ ಮುಸ್ಲಿಂ ಸಂಪ್ರದಾಯದ ಅಭಿವೃದ್ಧಿಯೊಂದಿಗೆ ಸಮಾಜದ ಏಳಿಗೆ ಕೂಡಾ ಮುಖ್ಯ ಎಂಬುವುದು ಇಲ್ಲಿನ ಮುಸಲ್ಮಾನರ ಮಾತಾಗಿದೆ.