ಭಾರತವು ತನ್ನ ಭೂಕಂಪ ವಲಯ ನಕ್ಷೆಯನ್ನು ನವೀಕರಿಸಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಹಿಮಾಲಯವನ್ನು ಹೊಸದಾಗಿ ರಚಿಸಲಾದ ಅತಿ ಅಪಾಯಕಾರಿ 'ಆರನೇ ವಲಯ'ಕ್ಕೆ ಸೇರಿಸಿದೆ. ಈ ಹೊಸ ನಕ್ಷೆಯ ಪ್ರಕಾರ, ದೇಶದ 61% ಭೌಗೋಳಿಕ ಪ್ರದೇಶವು ಮಧ್ಯಮದಿಂದ ಹೆಚ್ಚಿನ ಭೂಕಂಪದ ಅಪಾಯದಲ್ಲಿದೆ.
ನವದೆಹಲಿ: ಭಾರತವು ಹೊಸ ಭೂಕಂಪ ವಿನ್ಯಾಸ ಸಂಹಿತೆಯ ಅಡಿಯಲ್ಲಿ ಆಮೂಲಾಗ್ರವಾಗಿ ನವೀಕರಿಸಿದ ಭೂಕಂಪನ ವಲಯ ನಕ್ಷೆಯನ್ನು ಬಿಡುಗಡೆ ಮಾಡಿದೆ. ಭಾರತವು ರಾಷ್ಟ್ರೀಯ ಸೆಸಿಮಿಕ್ ಝೋನೇಷನ್ ಮ್ಯಾಪ್(ಭೂಕಂಪ ವಲಯದ ಮ್ಯಾಪ್)ನಲ್ಲಿ ಭೂಕಂಪ ಡಿಸೈನ್ ಕೋಡ್‌ನಡಿ ಮಹತ್ವದ ಬದಲಾವಣೆ ಮಾಡಿದ್ದು, ಇದೇ ಮೊದಲ ಬಾರಿ ಸಂಪೂರ್ಣ ಹಿಮಾಲಯ ಕ್ಷೇತ್ರವನ್ನು ಹೊಸದಾಗಿ ರಚಿಸಲಾಗಿರುವ ಆರನೇ ವಲಯ (ಅತೀ ಹೆಚ್ಚು ರಿಸ್ಕ್ ಝೋನ್)ಕ್ಕೆ ಸೇರಿಸಲಾಗಿದೆ.
ಇದೇ ಮೊದಲ ಬಾರಿಗೆ ಇಡೀ ಹಿಮಾಲಯನ್ ಕಮಾನು (Himalayan Arc) ವನ್ನು ಹೊಸದಾಗಿ ಪರಿಚಯಿಸಿರುವ ಅತ್ಯಂತ ಅಪಾಯಕಾರಿ ವಲಯ–6ರಲ್ಲಿ ವರ್ಗೀಕರಿಸಲಾಗಿದೆ. ಹೊಸ ನಕ್ಷೆಯ ಪ್ರಕಾರ, ಭಾರತದ 61% ಭೌಗೋಳಿಕ ಪ್ರದೇಶ ಈಗ ಮಧ್ಯಮದಿಂದ ಹೆಚ್ಚಿನ ಭೂಕಂಪ ಅಪಾಯ ಇರುವ ವಲಯಗಳಡಿ ಬರುತ್ತದೆ. ಈ ಹೊಸ ಮ್ಯಾಪ್‌ನಿಂದಾಗಿ ಕಟ್ಟಡಗಳು, ಮೂಲಸೌಲಭ್ಯಗಳು ಹಾಗೂ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರಪ್ರದೇಶಗಳು ಭವಿಷ್ಯದಲ್ಲಿ ಎದುರಾಗಬಹುದಾದ ಭೂಕಂಪಗಳನ್ನು ಎದುರಿಸಲು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಲಿದೆ.
ಈ ಹಿಂದಿನ ಮ್ಯಾಪ್ ಅನ್ನು 2002ರಲ್ಲಿ ರಚಿಸಲಾಗಿತ್ತು, 2016ರಲ್ಲಿ ಮ್ಯಾಪ್‌ನಲ್ಲಿ ಕೊಂಚ ಅಪ್ಡೇಟ್ ಮಾಡಲಾಗಿತ್ತು. ಆದರೆ ಇದೀಗ ರಚಿಸಲಾಗಿರುವ ಮ್ಯಾಪ್ ಹೆಚ್ಚು ನಿಖರ ಮತ್ತು ವೈಜ್ಞಾನಿಕವಾಗಿದೆ. ಈ ಹಿಂದೆ ದೇಶದ ಶೇ.59ರಷ್ಟು ಭಾಗ ಮಧ್ಯಮ ಮತ್ತು ಹೆಚ್ಚಿನ ಅಪಾಯಕಾರಿ ವಲಯದಲ್ಲಿತ್ತು. ಆದರೆ, ಇದೀಗ ಅದು ಶೇ.61ಕ್ಕೆ ಏರಿಕೆಯಾಗಿದೆ. ಹೊಸ ನಕ್ಷೆ ಪ್ರಕಾರ ದೇಶದ ಶೇ.75ರಷ್ಚು ಜನಸಂಖ್ಯೆ ಹೆಚ್ಚಿನ ಅಪಾಯಕಾರಿ ವಲಯದ ವ್ಯಾಪ್ತಿಯಡಿ ಬರಲಿದೆ.
ಈ ಮ್ಯಾಪ್ ಪ್ರಕಾರ ಮಧ್ಯ ಹಿಮಾಲಯದ ದೊಡ್ಡ ಭಾಗ 200 ವರ್ಷಗಳಲ್ಲಿ ಮೇಲ್ಮೆ ಕಂಪನಕ್ಕೆ ಸಾಕ್ಷಿಯಾಗಿಲ್ಲ. ಇದರರ್ಥ ಈ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಒತ್ತಡ ಶೇಖರಣೆಯಾಗಿದ್ದು, ಭವಿಷ್ಯದಲ್ಲಿ ವಿನಾಶಕಾರಿ ಭೂಕಂಪಕ್ಕೆ ಅದು ದಾರಿ ಮಾಡಿಕೊಡಬಹುದು. ಈ ಆತಂಕವನ್ನು ಅರಿತುಕೊಂಡು ಹೊಸ ಮ್ಯಾಪ್ ರಚಿಸಲಾಗಿದೆ. ಹೀಗಾಗಿ ಇಡೀ ಹಿಮಾಲಯ ಪ್ರದೇಶವನ್ನು ಅತ್ಯಂತ ಹೆಚ್ಚಿನ ಅಪಾಯಕಾರಿ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಹೊಸ ಮ್ಯಾಪ್ ಅನ್ನು ಪಿಎಸ್‌ಎಚ್‌ಎ(ಸಂಭವನೀಯ ಭೂಕಂಪದ ಅಪಾಯದ ಮೌಲ್ಯಮಾಪನ) ತಂತ್ರಗಾರಿಕೆಯನ್ನು ಬಳಸಿಕೊಂಡು ರಚಿಸಲಾಗಿದೆ.
ವಾಡಿಯಾ ಹಿಮಾಲಯನ್ ಭೂವಿಜ್ಞಾನ ಸಂಸ್ಥಾನದ ನಿರ್ದೇಶಕರಾಗಿರುವ ಮತ್ತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಜಿ ನಿರ್ದೇಶಕರಾದ ವಿನೀತ್ ಗಹಲೌತ್ ಅವರು, ಹೊಸ ನಕ್ಷೆ ಹಿಮಾಲಯನ್ ಪ್ರದೇಶಕ್ಕೆ “ತೀವ್ರ ಅಗತ್ಯವಿದ್ದ ಏಕರೂಪತೆಯನ್ನು” ತಂದಿದೆ ಎಂದು ಹೇಳಿದರು. ಹಿಂದೆ ಒಂದೇ ರೀತಿಯ ಟೆಕ್ಟೋನಿಕ್ ಅಪಾಯವನ್ನು ಹೊಂದಿದ್ದರೂ, ಹಿಮಾಲಯನ್ ಪ್ರದೇಶವನ್ನು ವಲಯ–4 ಮತ್ತು ವಲಯ–5 ಎಂದು ಭಾಗಗಳಾಗಿ ವಿಂಗಡಿಸಲಾಗಿತ್ತು. ಈ ವಿಭಾಗೀಕರಣವು ಭೌಗೋಳಿಕವಾಗಿ ಮತ್ತು ವೈಜ್ಞಾನಿಕವಾಗಿ ಸರಿಯಾಗಿರಲಿಲ್ಲ ಎಂದು ಗಹಲೌತ್ ಅಭಿಪ್ರಾಯಪಟ್ಟರು.
ಗಹಲೌತ್ ಅವರು ಹೇಳುವಂತೆ, “ಹಿಮಾಲಯದ ಕೆಲ ಭಾಗಗಳು ಟೆಕ್ಟೋನಿಕ್ ಚಲನಗಳಿಂದ ‘ಲಾಕ್’ ಆಗಿ, ಒಳಭಾಗದಲ್ಲಿ ನಿರಂತರ ಒತ್ತಡ ಸಂಗ್ರಹಿಸುತ್ತಿವೆ. ಆದರೆ ಇದನ್ನು ಹಿಂದಿನ ವಲಯೀಕರಣ ಪೂರ್ಣವಾಗಿ ಪರಿಗಣಿಸಲಿಲ್ಲ.”ಹೊಸ ನಕ್ಷೆಯಲ್ಲಿ, ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭಾರತವು ಇದೀಗ ಅತ್ಯಂತ ವೈಜ್ಞಾನಿಕ ಮತ್ತು ದತ್ತಾಂಶಾಧಾರಿತ ಭೂಕಂಪ ವರ್ಗೀಕರಣ ವ್ಯವಸ್ಥೆಯನ್ನು ಅನುಸರಿಸುತ್ತಿದೆ.
ಹೊಸ ನಕ್ಷೆಯ ಪರಿಣಾಮಗಳು
- ಭೂಕಂಪಪ್ರವಣ ರಾಜ್ಯಗಳಲ್ಲಿನ ಎಲ್ಲಾ ಕಟ್ಟಡಗಳು ಹೊಸ ನಿಬಂಧನೆಗಳನ್ನು ಅನುಸರಿಸಬೇಕು
- ಫ್ಲೈಓವರ್‌ಗಳು, ಸೇತುವೆಗಳು, ಅಣೆಕಟ್ಟುಗಳು ಮತ್ತು ಮೆಟ್ರೋ ಯೋಜನೆಗಳು ಹೊಸದಾಗಿ ನಿರ್ಧರಿಸಲಾದ ಭೂಕಂಪ ತೀವ್ರತೆಗೆ ತಕ್ಕಂತೆ ವಿನ್ಯಾಸಗೊಳಿಸಬೇಕು
- ಈಗಾಗಲೇ ವೇಗವಾಗಿ ವಿಸ್ತರಿಸುತ್ತಿರುವ ಉತ್ತರ ಭಾರತದ ನಗರಗಳು, ವಿಶೇಷವಾಗಿ ಡೆಹ್ರಾಡೂನ್, ಶ್ರೀನಗರ, ಗ್ಯಾಂಗ್ಟಾಕ್, ಇಟಾನಗರ, ಶಿಮ್ಲಾ, ದರ್ಜೀಲಿಂಗ್ ಮತ್ತು ಗುವಾಹಟಿ, ಹೆಚ್ಚಿನ ರಿಸ್ಕ್ ವಲಯಕ್ಕೆ ಸೇರಿವೆ
- ಇವುಗಳ ಜೊತೆಗೆ, ಸಾಮಾನ್ಯ ಸಾರ್ವಜನಿಕರಿಗೆ ಭೂಕಂಪದ ಬಗ್ಗೆ ಜಾಗೃತಿ, ತುರ್ತು ಸಿದ್ಧತೆ ಮತ್ತು ಕಟ್ಟಡ ಗುಣಮಟ್ಟದ ಮೇಲಿನ ಕಟ್ಟುನಿಟ್ಟಿನ ನಿಯಂತ್ರಣಗಳು ಮತ್ತಷ್ಟು ಬಲವಾಗಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

