ರಾಯ್‌ಬರೇಲಿಯಲ್ಲಿ ಗೆಳತಿಯ ಜೊತೆ ಜಗಳವಾದ್ದರಿಂದ ಯುವಕನೊಬ್ಬ 40 ಅಡಿ ಎತ್ತರದ ವಿದ್ಯುತ್ ಕಂಬ ಏರಿದ ಘಟನೆ ನಡೆದಿದೆ.
ರಾಯ್‌ಬರೇಲಿ: ಗೆಳತಿಯ ಜೊತೆ ಅಸಮಾಧಾನಗೊಂಡ ಯುವಕನೋರ್ವ 40 ಅಡಿ ಎತ್ತರದ ಹೈ ಟ್ರಾನ್ಸ್‌ಮಿಶನ್ ಲೈನ್ ಏರಿದ ಆಘಾತಕಾರಿ ಘಟನೆ ಉತ್ತರ ಪ್ರದೇಶ ರಾಯ್‌ಬರೇಲಿಯಲ್ಲಿ ನಡೆದಿದೆ. ಆದರೆ ಈತ ಹೀಗೆ ಮಾಡಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಬಹಿರಂಗವಾಗಿಲ್ಲ, ಮಧ್ಯಾಹ್ನ ಈತ ಕರೆಂಟ್ ಕಂಬ ಏರಿದ್ದು, ರಾತ್ರಿ 2 ಗಂಟೆಯವರೆಗೂ ಟ್ರಾನ್ಸ್‌ಮಿಶನ್ ಮೇಲೆಯೇ ಕುಳಿತಿದ್ದಾನೆ. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತ ಕರೆಂಟ್ ಕಂಬ ಏರಿದ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಅಲ್ಲಿಗೆ ಧಾವಿಸಿ ಬಂದಿದ್ದು, ಭಾರಿ ಸಂಖ್ಯೆಯಲ್ಲಿ ಅಲ್ಲಿ ಜನ ಸೇರಿದ್ದಾರೆ. ರಾಯ್‌ಬರೇಲಿಯ ಉಸ್ರೈನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ವಿಚಾರ ತಿಳಿದ ಪೊಲೀಸರು ಅಲ್ಲಿಗೆ ಭೇಟಿ ನೀಡಿದ್ದು, ಆತನನ್ನು ಕೆಳಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಪೊಲೀಸರು ಏನು ಹೇಳಿದರು ಕೆಳಗಿಳಿಯಲು ಸಿದ್ಧನಿಲ್ಲ, ಕಡೆಗೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಆತನನ್ನು ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂದಹಾಗೆ ಗೆಳತಿ ಮೇಲೆ ಕೋಪಗೊಂಡ ವಿದ್ಯುತ್ ಟ್ರಾನ್ಸ್‌ಮಿಷನ್ ಏರಿದ ಯುವಕನನ್ನು ಅಂಕಿತ್ ಸಿಂಗ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಈತ ತನ್ನ ಚಿಕ್ಕಮ್ಮನನ್ನು ನೋಡುವುದಕ್ಕಾಗಿ ಉಸ್ರೈನ್ ಗ್ರಾಮಕ್ಕೆ ಬಂದಿದ್ದ ಎಂದು ವರದಿಯಾಗಿದೆ.
