ಹರಿಯಾಣದ ಮನೋಹರ್‌ ಲಾಲ್‌ ಖಟ್ಟರ್ ಸರ್ಕಾರಕ್ಕೆ ಹೈಕೋರ್ಟ್‌ನಿಂದ ದೊಡ್ಡ ಶಾಕ್‌ ಎದುರಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖಾಸಗಿ ಉದ್ಯೋಗಗಳಲ್ಲಿ 75 ಪ್ರತಿಶತ ಮೀಸಲಾತಿಯನ್ನು ರದ್ದುಗೊಳಿಸಿದೆ.

ಚಂಡೀಗಢ (ನ.17): ಬಿಜೆಪಿಯ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಶುಕ್ರವಾರ ಬಿಗ್‌ ಶಾಲ್‌ ನೀಡಿದೆ. ಖಾಸಗಿ ಉದ್ಯೋಗಗಳಲ್ಲಿ 75 ಪ್ರತಿಶತ ಮೀಸಲಾತಿ ನೀಡಬೇಕು ಎನ್ನುವ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದು ಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಇದನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಸ್ಥಳೀಯ ಅಭ್ಯರ್ಥಿಗಳ ಹರ್ಯಾಣ ರಾಜ್ಯ ಉದ್ಯೋಗ ಕಾಯಿದೆ, 2020 ಅನ್ನು ಅಸಂವಿಧಾನಿಕ ಎಂದು ಹೈಕೋರ್ಟ್ ಪರಿಗಣಿಸಿದೆ ಮತ್ತು ಈ ಕಾಯಿದೆ ಅತ್ಯಂತ ಅಪಾಯಕಾರಿ ಮತ್ತು ಸಂವಿಧಾನದ ಭಾಗ-3 ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ರಾಜ್ಯದ ಕೈಗಾರಿಕಾ ಸಂಸ್ಥೆಗಳು ಹರ್ಯಾಣ ಸರ್ಕಾರದ ಈ ನೀತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಲು ಹರಿಯಾಣ ಸರ್ಕಾರ ಬಯಸಿದ್ದು, ಇದು ಮಾಲೀಕರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ. ಖಾಸಗಿ ವಲಯದ ಉದ್ಯೋಗಗಳು ಸಂಪೂರ್ಣವಾಗಿ ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಮಿಶ್ರಣವನ್ನು ಆಧರಿಸಿವೆ. ಭಾರತದ ನಾಗರಿಕರಾಗಿರುವ ಉದ್ಯೋಗಿಗಳು ತಮ್ಮ ಶಿಕ್ಷಣದ ಆಧಾರದ ಮೇಲೆ ಭಾರತದ ಯಾವುದೇ ಭಾಗದಲ್ಲಿ ಉದ್ಯೋಗವನ್ನು ಪಡೆಯುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಎಂದು ವಾದ ಮಾಡಿತ್ತು.

ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿಯ ಕಾನೂನಿನ ಅಧಿಸೂಚನೆಯನ್ನು ಹರಿಯಾಣದಲ್ಲಿ 2021 ರಲ್ಲಿ ಹೊರಡಿಸಲಾಗಿತ್ತು.ಹರಿಯಾಣ ರಾಜ್ಯ ಸ್ಥಳೀಯ ವ್ಯಕ್ತಿಗಳ ಉದ್ಯೋಗ ಕಾಯಿದೆ 2020 ಅನ್ನು ಜನವರಿ 15 ರಿಂದ ಜಾರಿಗೊಳಿಸಲಾಗಿದೆ. ಅದರ ಅಧಿಸೂಚನೆಯನ್ನು 2021 ರಲ್ಲಿ ಹೊರಡಿಸಲಾಗಿದೆ. ಈ ಕಾನೂನು 10 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಸ್ಟಾರ್ಟಪ್‌ಗಳಿಗೆ ಕಾನೂನಿನಲ್ಲಿ 2 ವರ್ಷಗಳ ಸಡಿಲಿಕೆ ಇರುತ್ತದೆ ಎಂದೂ ಹೇಳಲಾಗಿದೆ. ಅಲ್ಲದೆ, ಐಟಿಐ ಪಾಸಾದ ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿತ್ತು.

ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ರಾಜ್ಯ ಬಿಜೆಪಿ ಸರ್ಕಾರವು ಕಳೆದ ವರ್ಷ ಮಾರ್ಚ್‌ನಲ್ಲಿ ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ 2020 ಅನ್ನು ಜಾರಿಗೊಳಿಸಿತ್ತು. ರಾಜ್ಯ ಕೈಗಾರಿಕೆಗಳಲ್ಲಿ 30,000 ರೂ.ಗಿಂತ ಕಡಿಮೆ ಮಾಸಿಕ ವೇತನ ಹೊಂದಿರುವ ನಿವಾಸಿಗಳಿಗೆ ಕಾನೂನು 75% ಮೀಸಲಾತಿಯನ್ನು ಒದಗಿಸಿದೆ.