ನವದೆಹಲಿ(ಜು.01): ವಿವಾಹದ ಬಳಿಕವೂ ಮಹಿಳೆ ಸಿಂಧೂರ ಮತ್ತು ಕೈಗೆ ಬಳೆಗಳನ್ನು ತೊಡಲು ನಿರಾಕರಿಸುತ್ತಾಳೆ ಎಂದಾದಲ್ಲಿ, ಆಕೆ ತನ್ನ ಗಂಡನನ್ನು ಪತಿಯಾಗಿ ಸ್ವೀಕರಿಸಲು ಸಿದ್ಧವಿಲ್ಲ ಎಂದೇ ಅರ್ಥ ಎಂದು ಗುವಾಹಟಿ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ತನ್ನನ್ನು ವಿವಾಹವಾದ ಬಳಿಕವೂ ಬಳೆ ಮತ್ತು ಹಣೆಗೆ ಸಿಂಧೂರ ಇಡಲು ನಿರಾಕರಿಸುವ ಪತ್ನಿಯಿಂದ ವಿಚ್ಛೇದನ ಕೊಡಿಸಬೇಕೆಂಬ ವ್ಯಕ್ತಿಯ ಕೋರಿಕೆಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ನಾಲ್ವರು ಹೆಂಡತಿಯರು ಸಾಲದು ಎಂದು ಗರ್ಲ್ ಫ್ರೆಂಡ್; ಮೈಸೂರಿನವ ಬಲೆಗೆ

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಹಿಂದು ಸಂಪ್ರದಾಯದ ಪ್ರಕಾರ ಮದ್ವೆಯಾದ ಮಹಿಳೆ ಹಣೆಗೆ ಕುಂಕುಮ ಮತ್ತು ಕೈಗೆ ಬಳೆ ತೊಡಬೇಕು. ಒಂದು ವೇಳೆ ಅದಕ್ಕೆ ಆಕೆ ನಿರಾಕರಿಸುತ್ತಾಳೆ ಎಂದಾದರೆ, ಆಕೆಗೆ ಮದ್ವೆಯೇ ಇಷ್ಟವಿಲ್ಲ ಎಂಬುದೇ ಆಗಿರುತ್ತದೆ. ಇಂಥ ಸಂದರ್ಭದಲ್ಲಿ ಅಂಥ ಮಹಿಳೆ ಜೊತೆಗೆ ಸಂಸಾರ ಮಾಡುವಂತೆ ಒತ್ತಾಯಿಸುವುದು ಆಕೆಯ ಪತಿಗೆ ಮಾಡುವ ದೌರ್ಜನ್ಯವಾಗಲಿದೆ ಎಂದು ಹೇಳಿದೆ.

ಈ ಮೂಲಕ ಕೇವಲ ಸಿಂಧೂರ ಮತ್ತು ಬಳೆ ತೊಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಕೋರಿದ ಪತಿಯ ಮನವಿ ತಿರಸ್ಕರಿಸಿದ್ದ ಅಸ್ಸಾಂ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ತಳ್ಳಿ ಹಾಕಿದಂತಾಗಿದೆ.