ಫೀನಿಕ್ಸ್‌ನಂತೆ ಎದ್ದು ಬಂದ ಹೇಮಂತ ಸೊರೇನ್: ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಹೇಮಂತ್ ಸೊರೇನ್ ನೇತೃತ್ವದಲ್ಲಿ ಮೈತ್ರಿಕೂಟ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಇಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?

Hemant Soren rose like a phoenix What is the reason for BJPs defeat in Jharkhand

ರಾಂಚಿ: ಕಳೆದೊಂದು ವರ್ಷದಲ್ಲಿ ಭಾರೀ ರಾಜಕೀಯ ಸ್ಥಿತ್ಯಂತರ, ಸಿಎಂ ಹೇಮಂತ್ ಸೊರೇನ್ ಬಂಧನದಂಥ ಘಟನೆಗಳಿಂದ ಸುದ್ದಿಯಲ್ಲಿದ್ದ ಜಾರ್ಖಂಡ್‌ನಲ್ಲಿ ರಾಜ್ಯದ ಮತದಾರರು ಮತ್ತೊಮ್ಮೆ ಹಾಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ಆರ್ ಜೆಡಿ ಮೈತ್ರಿಕೂಟದ ಕೈಹಿಡಿದ್ದಾರೆ. ರಾಜ್ಯ ವಿಧಾನಸಭೆಯ 81 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಜೆಎಎಂ ನೇತೃತ್ವದ ಮೈತ್ರಿಕೂಟ 50ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಮರಳಿ ಅಧಿಕಾರದ ಗದ್ದುಗೆಗೆ ಏರಿದೆ.

ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಾಲಿಗೆ ಇದು ಕಳೆದ ಸಲದ ಪ್ರದರ್ಶನಕ್ಕಿಂತ ಉತ್ತಮವಾಗಿದೆ. ಇದರೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಭಾರೀ ದೊಡ್ಡ ಗೆಲುವು ಸಿಕ್ಕಂತಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಅಧಿಕಾರ ಹಿಡಿವ ಬಿಜೆಪಿ ಕನಸು ಭಗ್ನವಾದಂತಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಸಿಎಂ ಮುಖ ಆಗಬಲ್ಲ ಸ್ಥಳೀಯ ನಾಯಕತ್ವದ ಕೊರತೆ, ಅಭಿವೃದ್ಧಿ ವಿಚಾರಕ್ಕೆ 2ನೇ ಆದ್ಯತೆ ನೀಡಿ ಬರೀ ಬಾಂಗ್ಲಾ ನುಸುಳುಕೋರರ ವಿಷಯವನ್ನೇ ಪ್ರಧಾನವಾಗಿ ಪ್ರಚಾರ ಮಾಡಿದ್ದು ಮುಳುವಾಗಿದೆ.

ನುಸುಳುಕೋರರು ವರ್ಸಸ್ ಆದಿವಾಸಿ ಕಾರ್ಡ್: ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರು ನೆರೆಯ ಬಾಂಗ್ಲಾದೇಶದಿಂದ ಜಾರ್ಖಂಡ್‌ಗೆ ಅಕ್ರಮ ವಲಸೆ ಹೆಚ್ಚಾಗುತ್ತಿರುವ ಬಗ್ಗೆ, ವಲಸೆಗೆ ಜೆಎಂಎಂ ಸರ್ಕಾರ ನೆರವು ನೀಡುತ್ತಿರುವುದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದರು. ಅಕ್ರಮ ವಲಸಿಗರು ರಾಜ್ಯದ ಭೂಮಿ, ಹೆಣ್ಣು ಮಕ್ಕಳು ಮತ್ತು ಆಹಾರವನ್ನು ಕಸಿಯುತ್ತಿದ್ದಾರೆ ಎಂದು ಬಿಜೆಪಿ ಸತತವಾಗಿ ವಾಗ್ದಾಳಿ ನಡೆಸಿತ್ತು. ಜೊತೆಗೆ ತಾನು ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರು ಆದಿವಾಸಿಗಳ ಭೂಮಿ ವಶ ತಡೆಯಲು ಕಾಯ್ದೆ, ಆದಿವಾಸಿಗಳ ಹೆಣ್ಣು ಮಕ್ಕಳ ಮದುವೆಯಾದರೂ ಜಮೀನು ಕೈತಪ್ಪದಂತೆ ಕಾನೂನು ರೂಪಿಸುವ ಭರವಸೆ ನೀಡಿತ್ತು. ಜೊತೆಗೆ ಅಕ್ರಮ ವಲಸೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.

ಮತ್ತೊಂದೆಡೆ ಜೆಎಂಎಂ ಆದಿವಾಸಿ ಕಾರ್ಡ್ ಅನ್ನೇ ಪ್ರಮುಖವಾಗಿ ಬಳಸಿತ್ತು. ಆದಿವಾಸಿ ನಾಯಕ ಹೇಮಂತ್ ಸೊರೇನ್‌ರನ್ನು ಬಿಜೆಪಿ ಬಂಧಿಸಿದೆ ಎಂದು ಆರೋಪಿಸಿತ್ತು. ಜೊತೆಗೆ ಆದಿವಾಸಿ ಅಸ್ಮಿತೆಯನ್ನು ಪ್ರಚಾರಕ್ಕೆ ಬಳಸಿತ್ತು. ಜೊತೆಗೆ ಮಹಿಳೆಯರಿಗೆ ಮಾಸಿಕ 1000 ರು. ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿ ಮೈಯ್ಯಾ ಸಮ್ಮಾನ್ ಯೋಜನೆಯನ್ನು ಭರ್ಜರಿ ಪ್ರಚಾರಕ್ಕೆ ಬಳಸಿತ್ತು. ಅಂತಿಮವಾಗಿ ರಾಜ್ಯದ ಜನತೆ ಅಕ್ರಮ ವಲಸಿಗರ ಬದಲಾಗಿ ಆದಿವಾಸಿಗಳ ಅಸ್ಮಿತೆ ಮತ್ತು ಉಚಿತ ಕೊಡುಗೆ ಪರ ಬ್ಯಾಟಿಂಗ್ ಮಾಡಿದಂತೆ ಕಂಡುಬರುತ್ತಿದೆ.

ಮಹಿಳಾ ಶಕ್ತಿ: ರಾಜ್ಯದ 81 ವಿಧಾನಸಭಾ ಕ್ಷೇತ್ರಗಳ ಪೈಕಿ 68ರಲ್ಲಿ ಈ ಬಾರಿ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದ್ದರು. ಮಾಸಿಕ ಆರ್ಥಿಕ ನೆರವಿನ ಯೋಜನೆಯ ಲಾಭ ಪಡೆದ ಮಹಿಳೆಯರು ದೊಡ್ಡಸಂಖ್ಯೆಯಲ್ಲಿ ಮತ್ತೆ ಜೆಎಂಎಂ ಮೈತ್ರಿಕೂಟಕ್ಕೆ ಮತ ಹಾಕಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದೆ ಎಂದು ಹೇಳಲಾಗಿದೆ.

ಪ್ರಜಾಪ್ರಭುತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ
ನಾವು ಜಾರ್ಖಂಡ್‌ನಲ್ಲಿ ಪ್ರಜಾಪ್ರಭುತ್ವ ಪರೀಕ್ಷೆಯನ್ನು ಪಾಸಾಗಿದ್ದೇವೆ. ಚುನಾವಣೆಯ ನಂತರ ನಮ್ಮ ಪ್ರಜಾಪ್ರಭುತ್ವ ತಂತ್ರವನ್ನು ಅಂತಿಮಗೊಳಿಸುತ್ತೇವೆ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಜನರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಜಾರ್ಖಂಡ್ ಸ್ವಂತ ರಾಜ್ಯ, ಸ್ವಂತ ಸರ್ಕಾರ ಮಾಡಲು ಸಿದ್ಧವಾಗಿದೆ ಎಂದು ಜಿಎಂಎಂ ಪಕ್ಷದ ಮುಖ್ಯಸ್ಥ  ಜಾರ್ಖಂಡ್ ಸಿಎಂ  ಹೇಮಂತ್ ಸೊರೇನ್ ಹೇಳಿದ್ದಾರೆ. 

ಗೆದ್ದ ಪ್ರಮುಖರು
ಹೇಮಂತ ಸೊರೇನ್
ಚಂಪೈ ಸೊರೇನ್
ಸ್ಟೀಫನ್ ಮರಾಂಡಿ
ಬಾಬುಲಾಲ್ ಮರಾಂಡಿ
ಕಲ್ಪನಾ ಸೊರೇನ್

ಫೀನಿಕ್ಸ್‌ನಂತೆ ಎದ್ದು ಬಂದ ಹೇಮಂತ ಸೊರೇನ್
ರಾಂಚಿ: ಜಾರ್ಖಂಡ್ ಹಾಲಿ ಸಿಎಂ ಹೇಮಂತ ಸೊರೇನ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದರೂ, ಈಗ ಗೆಲುವಿನ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಖಚಿತವಾಗುತ್ತಿದ್ದಂತೆ 2023ರಲ್ಲಿ ಹೇಮಂತ್ ಸೊರೇನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್ ಅವರನ್ನು ಸಿಎಂ ಮಾಡಲಾಗಿತ್ತು. ಮತ್ತೊಂದೆಡೆ ಸೊರೇನ್‌ ಸೋದರನ ಪತ್ನಿ ಸೀತಾ ಸೊರೇನ್ ಬಿಜೆಪಿ ಸೇರಿದ್ದು, ರಾಜ್ಯದಲ್ಲಿ ಪಕ್ಷಕ್ಕೆ ಆದ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗಿತ್ತು. ಆದರೆ ಕಳೆದ ಜುಲೈನಲ್ಲಿ ಜಾಮೀನು ಸಿಕ್ಕ ಬಳಿಕ ಜೈಲಿಂದ ಹೊರಬಂದು ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದ ಹೇಮಂತ್ ಸೊರೇನ್, ಪಕ್ಷದ ಜನಪ್ರಿಯ ಯೋಜನೆಗಳು, ಆದಿವಾಸಿ ಆಸ್ಮಿತೆಯನ್ನು ಪ್ರಮುಖವಾಗಿ ಪ್ರಚಾರ ಮಾಡಿ ಜೆಎಂಎಂ ಮೈತ್ರಿಕೂಟವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೇಮಂತ್ ಪರ ಅನುಕಂಪವೂ ಗೆಲುವಿನಲ್ಲಿ ಕೆಲಸ ಮಾಡಿದೆ.

ಜಾರ್ಖಂಡಲ್ಲಿ ಜೆಎಂಎಂ-ಕೈಗೆ ಜಯ ಏಕೆ? ಬಿಜೆಪಿಗೆ ಸೋಲೇಕೆ?
ಬಿಜೆಪಿ ಇಲ್ಲಿ ಬಾಂಗ್ಲಾ ನುಸುಳುಕೋರರ ವಿಷಯ ಅಜೆಂಡಾ ಮಾಡಿಕೊಂಡಿತ್ತು. ಆದರೆ ಕೋಮು ಭಾವನೆಗಳನ್ನು ಅತಿಯಾಗಿ ಆಡುವುದು ಸಹಾಯ ಮಾಡುವುದಿಲ್ಲ ಎಂಬುದು ಸಾಬೀತಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿದ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದರೂ ಹೇಮಂತ್ ಸೊರೇನ್ ಗೆದ್ದಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಂತ್ರಗಳೇ ತಿರುಗುಬಾಣ ಆಗುತ್ತವೆ ಎಂಬುದಕ್ಕೆ ಇದು ನಿದರ್ಶನ. ಜೈಲುಪಾಲಾಗಿದ್ದ ಸೋರೆನ್ ಸಹಾನುಭೂತಿ ಗಳಿಸಿದರು. ಇದು ಅವರ ಗೆಲುವಿಗೆ ಸಹಕಾರಿ 
ಆದಿವಾಸಿಗಳು ಮತ್ತು ದಲಿತರ ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ ಎಂದು ಬಿಜೆಪಿಗೆ ಅರ್ಥ ಆಗಲಿಲ್ಲ, ಇದು ಬಿಜೆಪಿ ಸೋಲಿಗೆ 1 ಕಾರಣ
ಬಿಜೆಪಿಗೆ ಸಿಎಂ ಮುಖವಾಣಿ ಯಾರೂ ಇರಲಿಲ್ಲ. ಸಣ್ಣ ರಾಜ್ಯಗಳಿಗೆ ಬಲವಾದ ಸ್ಥಳೀಯ ನಾಯಕರ ಅಗತ್ಯವಿದೆ. ಡಮ್ಮಿ ನಾಯಕರು ಕೆಲಸ ಮಾಡುವುದಿಲ್ಲ ಎಂಬುದು ರುಜುವಾತು
 

ಇದನ್ನು ಓದಿ: ಸತತ 3ನೇ ಸಲ ಬಿಜೆಪಿಗೆ ಜನಾದೇಶ ನೀಡಿದ 6ನೇ ರಾಜ್ಯ ಮಹಾರಾಷ್ಟ್ರ

ಇದನ್ನು ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಗಿಂತ ಕಲ್ಪನಾ ಸೊರೆನ್ ಆಗರ್ಭ ಶ್ರೀಮಂತೆ!

Latest Videos
Follow Us:
Download App:
  • android
  • ios